ದಾವಣಗೆರೆ : ಜಿಲ್ಲೆಯಲ್ಲಿ ಯುವ ಬಾಡಿ ಬಿಲ್ಡರ್ ಹೃದಯಾಘಾತದಿಂದ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ಮೃತರನ್ನು ಕೆಟಿಜೆ ನಗರದ ನಿವಾಸಿ ಸುಶೀಲಕುಮಾರ್ (26) ಎಂದು ಗುರುತಿಸಲಾಗಿದೆ.

ಮಾಹಿತಿಯ ಪ್ರಕಾರ, ಸುಶೀಲಕುಮಾರ್ ಎಂದಿನಂತೆ ಜಿಮ್‌ನಲ್ಲಿ ವ್ಯಾಯಾಮ ಮುಗಿಸಿಕೊಂಡು ರಾತ್ರಿ 8:30 ರ ಸುಮಾರಿಗೆ ಮನೆಗೆ ವಾಪಸ್ಸಾಗಿದ್ದರು. ಮನೆ ಪ್ರವೇಶಿಸುವ ವೇಳೆ ಏಕಾಏಕಿ ಅಸ್ವಸ್ಥಗೊಂಡು ಮನೆ ಮುಂದೆಯೇ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಕುಟುಂಬ ಸದಸ್ಯರು ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದು, ದುರಾದೃಷ್ಟವಶಾತ್ ಆಸ್ಪತ್ರೆಗೆ ತಲುಪಿದ ಬಳಿಕ ವೈದ್ಯರು ಸುಶೀಲಕುಮಾರ್ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ.
ಸುಶೀಲಕುಮಾರ್ ಬಾಡಿ ಬಿಲ್ಡಿಂಗ್ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿದ್ದು, ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ಹಲವು ಸ್ಪರ್ಧೆಗಳಲ್ಲಿ ಪ್ರಶಸ್ತಿಗಳನ್ನು ಗೆದ್ದು ಹೆಸರು ಗಳಿಸಿದ್ದರು. ಯುವ ವಯಸ್ಸಿನಲ್ಲೇ ಹಲವು ಸಾಧನೆಗಳನ್ನು ಮಾಡಿದ್ದ ಅವರು ಕ್ರೀಡಾ ವಲಯದಲ್ಲಿ ಪರಿಚಿತರಾಗಿದ್ದರು.
ಆರೋಗ್ಯವಂತನಾಗಿ ಕಾಣುತ್ತಿದ್ದ ಹಾಗೂ ದೈಹಿಕ ಕ್ಷಮತೆಯಲ್ಲಿ ಮುಂದಿದ್ದ ಬಾಡಿ ಬಿಲ್ಡರ್ ಹೃದಯಾಘಾತದಿಂದ ಸಾವನ್ನಪ್ಪಿರುವುರಿಂದ ಇದೀಗ ಇಡೀ ಊರೇ ಶಾಕ್‌ಗೆ ಒಳಗಾಗಿದೆ. ಮಗನ ಅಕಾಲಿಕ ನಿಧನದಿಂದ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದ್ದು, ಊರಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.
ಇದನ್ನೂ ಓದಿ : ‘ಇನಾಮ್’ ರದ್ದತಿಗೆ 1.10 ಲಕ್ಷ ಲಂಚಕ್ಕೆ ಬೇಡಿಕೆ ; ಹಣ ಪಡೆಯುತ್ತಿದ್ದಾಗಲೇ ‘ಲೋಕಾ’ ಬಲೆಗೆ ಬಿದ್ದ ಅಮ್ಮ-ಮಗ!



















