ಬಳ್ಳಾರಿ : ಜಿಲ್ಲೆಯಲ್ಲಿ ‘ಇನಾಮ್’ (ಜಮೀನು) ರದ್ದುಪಡಿಸುವ ಪ್ರಕ್ರಿಯೆಗೆ ಲಂಚಕ್ಕೆ ಬೇಡಿಕೆಯಿಟ್ಟು, ಹಣ ಪಡೆಯುತ್ತಿದ್ದಾಗ ಸಿರುಗುಪ್ಪ ತಾಲೂಕು ತಹಶೀಲ್ದಾರ್ ಕಚೇರಿಯ ಪ್ರಥಮ ದರ್ಜೆ ಸಹಾಯಕಿ (FDA) ಸುವರ್ಣ ಹಾಗೂ ಅವರ ಪುತ್ರ ದೀಪಕ್ ರೆಡ್‌ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಜಿಲ್ಲೆಯ ಸಿರುಗುಪ್ಪ ತಾಲೂಕಿನ ಬೈರಾಪುರ ಗ್ರಾಮದ ನಿವಾಸಿ ಗೋವಿಂದ ಎಂಬವರು ನೀಡಿದ ದೂರಿನ ಮೇರೆಗೆ ಲೋಕಾಯುಕ್ತ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ.
ಗೋವಿಂದ ಅವರ ಹೆಸರಿನ ಸರ್ವೇ ನಂ. 57/4/ಡಿ, ವಿಸ್ತೀರ್ಣ 7 ಎಕರೆ 68 ಸೆಂಟ್ಸ್ ಜಮೀನಿನ ಪಹಣಿ ಕಲಂ-6ರಲ್ಲಿ ನಮೂದಾಗಿದ್ದ “ಇನಾಮ್” ದಾಖಲೆಯನ್ನು ರದ್ದುಪಡಿಸಿ “ಪಟ್ಟಾ” ಎಂದು ನಮೂದು ಮಾಡಿಕೊಡುವ ಕೆಲಸಕ್ಕಾಗಿ ಅವರು ತಹಶೀಲ್ದಾರರ ಕಚೇರಿಗೆ ಭೇಟಿ ನೀಡಿದ್ದರು.
ಈ ಸಂದರ್ಭದಲ್ಲಿ FDA ಸುವರ್ಣ ಅವರು ಕೆಲಸ ಮಾಡಿಕೊಡುವುದಕ್ಕಾಗಿ 1,10,000 ಲಂಚದ ಹಣವನ್ನು ಬೇಡಿಕೆ ಇಟ್ಟಿದ್ದಾರೆ ಎಂದು ಗೋವಿಂದ ಆರೋಪಿಸಿದ್ದಾರೆ. ಈ ಬಗ್ಗೆ ಅವರು ಲೋಕಾಯುಕ್ತ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರು.
ದೂರಿನ ಪರಿಶೀಲನೆ ನಡೆಸಿದ ಲೋಕಾಯುಕ್ತ ಪೊಲೀಸರು, ಭ್ರಷ್ಟಾಚಾರ ನಿಗ್ರಹ ಕಾಯ್ದೆ 1988ರ ಕಲಂ 7(ಎ) ಅಡಿಯಲ್ಲಿ 04/2026ನೇ ಪ್ರಕರಣ ದಾಖಲಿಸಿಕೊಂಡು ಬಲೆ ಬೀಸಿದ್ದು, ಕಾರ್ಯಾಚರಣೆಯ ವೇಳೆ ಆರೋಪಿಗಳಾದ ಸುವರ್ಣ ಹಾಗೂ ಅವರ ಪುತ್ರ ದೀಪಕ್ ಇಬ್ಬರನ್ನೂ ಲಂಚ ಪ್ರಕರಣದಲ್ಲಿ ಬಲೆಗೆ ಬೀಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣದ ಕುರಿತು ಮುಂದಿನ ತನಿಖೆ ಮುಂದುವರಿದಿದೆ.
ಇದನ್ನೂ ಓದಿ : ನಾಳೆಯಿಂದ ಬೇಕರಿ, ಟೀ ಸ್ಟಾಲ್‌ಗಳು ಬಂದ್ – ಹಫ್ತಾ ವಸೂಲಿ, ಕಿರುಕುಳದ ವಿರುದ್ಧ ವ್ಯಾಪಾರಿಗಳ ಹೋರಾಟ!



















