ನಾಗ್ಪುರ : ಭಾರತೀಯ ವಾಯುಪಡೆಯ (IAF) ಅಧಿಕಾರಿಯೊಬ್ಬರ ಪತ್ನಿಯ ಮೇಲೆ ಅತ್ಯಾಚಾರ ಎಸಗಿ, ಬ್ಲ್ಯಾಕ್‌ಮೇಲ್ ಮಾಡಿ, ಬಲವಂತದ ಧಾರ್ಮಿಕ ಮತಾಂತರ ಮಾಡಿರುವ ಆಘಾತಕಾರಿ ಪ್ರಕರಣವೊಂದು ಮಹಾರಾಷ್ಟ್ರದ ನಾಗ್ಪುರದಲ್ಲಿ ಬೆಳಕಿಗೆ ಬಂದಿದೆ. ಸಂತ್ರಸ್ತೆಯ ಹಳೆಯ ಸಹಪಾಠಿ ಮತ್ತು ಆತನ ಸಹಚರರೇ ಈ ಕೃತ್ಯ ಎಸಗಿದ್ದು, ಪ್ರಕರಣ ಸಂಬಂಧ ನಾಗ್ಪುರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಅಯಾಜ್ ಮದಾರೆ (26) ಮತ್ತು ಸಹಚರ ಅಮೀನ್ ಶೇಖ್ ಎಂದು ಗುರುತಿಸಲಾಗಿದೆ. ಧಾರ್ಮಿಕ ವಿಧಿವಿಧಾನ ನಡೆಸಿ ಒತ್ತಾಯಪೂರ್ವಕ ಮತಾಂತರಕ್ಕೆ ಯತ್ನಿಸಿದ ಮಧ್ಯಪ್ರದೇಶದ ಮೌಲ್ವಿ (ಧರ್ಮಗುರು) ಸದ್ಯ ತಲೆಮರೆಸಿಕೊಂಡಿದ್ದು, ಆತನಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.
ಪಾನೀಯದಲ್ಲಿ ಮಾದಕವಸ್ತು ನೀಡಿ ಅಶ್ಲೀಲ ವಿಡಿಯೋ ಚಿತ್ರೀಕರಣ
ಪೊಲೀಸರು ದಾಖಲಿಸಿಕೊಂಡಿರುವ ಎಫ್ಐಆರ್ ಪ್ರಕಾರ, ಈ ಘೋರ ದೌರ್ಜನ್ಯದ ಸರಣಿ 2025ರ ಫೆ.8 ರಿಂದಲೇ ಆರಂಭವಾಗಿತ್ತು. ಆರೋಪಿ ಅಯಾಜ್ ಮದಾರೆ ಹೋಟೆಲೊಂದರಲ್ಲಿ ಸಂತ್ರಸ್ತ ಮಹಿಳೆಗೆ ಮಾದಕವಸ್ತು ಮಿಶ್ರಿತ ಪಾನೀಯವನ್ನು ನೀಡಿದ್ದ. ಮಹಿಳೆ ಪ್ರಜ್ಞೆ ತಪ್ಪಿದ ಸಂದರ್ಭದಲ್ಲಿ ಆಕೆಯ ಆಕ್ಷೇಪಾರ್ಹ ಫೋಟೋ ಮತ್ತು ವಿಡಿಯೋಗಳನ್ನು ಚಿತ್ರೀಕರಿಸಲಾಗಿತ್ತು. ತದನಂತರ ಈ ದೃಶ್ಯಗಳನ್ನು ಆಕೆಯ ಪತಿಗೆ ಕಳುಹಿಸುವುದಾಗಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಸಿ ಬ್ಲ್ಯಾಕ್‌ಮೇಲ್ ಮಾಡಲು ಆರಂಭಿಸಿದ್ದ. ಈ ವಿಡಿಯೋಗಳನ್ನು ಇಟ್ಟುಕೊಂಡು ಆಕೆಯ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಲಾಗಿದ್ದು, ಸುಮಾರು 4 ಲಕ್ಷ ರೂಪಾಯಿ ಹಣವನ್ನು ಸಹ ಸುಲಿಗೆ ಮಾಡಲಾಗಿದೆ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಆಕ್ರಂದನದ ವಿಡಿಯೋ ವೈರಲ್
ಈ ಇಡೀ ಪ್ರಕರಣದಲ್ಲಿ ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋವೊಂದು ಪ್ರಮುಖ ಸಾಕ್ಷ್ಯವಾಗಿ ಪರಿಣಮಿಸಿದೆ. ಆ ವಿಡಿಯೋದಲ್ಲಿ 24 ವರ್ಷದ ಸಂತ್ರಸ್ತೆ ಜೋರಾಗಿ ಅಳುತ್ತಾ, ತನ್ನನ್ನು ಬಿಟ್ಟುಬಿಡುವಂತೆ ಆರೋಪಿ ಅಯಾಜ್ ಮದಾರೆ ಬಳಿ ಕೈಮುಗಿದು ಬೇಡಿಕೊಳ್ಳುತ್ತಿರುವುದು ಕಂಡುಬಂದಿದೆ. ಆದರೆ ಆರೋಪಿ ಆಕೆಯ ಕೈಗಳನ್ನು ಬಲವಂತವಾಗಿ ಹಿಡಿದುಕೊಂಡು, ಕೆಲವು ಧಾರ್ಮಿಕ ಶ್ಲೋಕಗಳನ್ನು ಪಠಿಸುತ್ತಾ ಆಕೆಯ ಮುಖದ ಮೇಲೆ ನಿರಂತರವಾಗಿ ಊದುತ್ತಿದ್ದಾನೆ. ತನಗೆ ವಶೀಕರಣ ಅಥವಾ ಮಾಟಮಂತ್ರದ ದ್ರವವನ್ನು ಬಲವಂತವಾಗಿ ಕುಡಿಸಿ, ಪ್ರಜ್ಞೆ ತಪ್ಪಿಸಿ ಅತ್ಯಾಚಾರ ಎಸಗಲಾಗುತ್ತಿತ್ತು ಎಂದು ಸಂತ್ರಸ್ತೆ ಆರೋಪಿಸಿದ್ದು, ವೈರಲ್ ವಿಡಿಯೋದಲ್ಲಿ ಈ ಮಾಟಮಂತ್ರದ ಆಚರಣೆಯ ದೃಶ್ಯಗಳು ಸೆರೆಯಾಗಿವೆ.
ಬಲವಂತದ ‘ನಿಕಾಹ್’
ಕಳೆದ ಮೇ 31 ರಂದು ಆರೋಪಿಗಳು ಮಹಿಳೆಯನ್ನು ಬಲವಂತವಾಗಿ ಕಲ್ಮೇಶ್ವರಕ್ಕೆ ಕರೆದೊಯ್ದಿದ್ದರು. ಅಲ್ಲಿ ಮಧ್ಯಪ್ರದೇಶದ ಛಿಂದ್ವಾರಾ ಜಿಲ್ಲೆಯ ತಮಿಯಾ ಗ್ರಾಮದ ಹಜರತ್ ಮೌಲಾನಾ ಎಂಬಾತನನ್ನು ಕರೆಯಿಸಿ, ಮಹಿಳೆಯ ಇಷ್ಟಕ್ಕೆ ವಿರುದ್ಧವಾಗಿ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಿ ಬಲವಂತವಾಗಿ ‘ಖಬೂಲ್ ಹೈ’ ಎಂದು ಹೇಳಿಸಲಾಗಿದೆ. ತದನಂತರ ಆಕೆಯನ್ನು ಇಸ್ಲಾಂ ಧರ್ಮಕ್ಕೆ ಮತಾಂತರಗೊಳಿಸಲಾಗಿದೆ ಮತ್ತು ಅಯಾಜ್ ಜೊತೆ ‘ನಿಕಾಹ್’ (ವಿವಾಹ) ನೆರವೇರಿದೆ ಎಂದು ಘೋಷಿಸಲಾಗಿದೆ. ಅಷ್ಟೇ ಅಲ್ಲದೆ, ಆಕೆಗೆ ಬಲವಂತವಾಗಿ ಮಾಂಸವನ್ನು ತಿನ್ನಿಸಿ, ಕಲ್ಮಾ ಪಠಿಸುವಂತೆ ಪೀಡಿಸಲಾಗಿತ್ತು. ಈ ಧಾರ್ಮಿಕ ಪ್ರಕ್ರಿಯೆಯ ನಂತರವೂ ಹೋಟೆಲ್ ಹಾಗೂ ಆಕೆಯ ಮನೆಗೆ ಬಂದು ಆರೋಪಿಗಳು ಸರಣಿ ಅತ್ಯಾಚಾರ ಎಸೆಗಿದ್ದಾರೆ ಎಂದು ಎಫ್ಐಆರ್‌ನಲ್ಲಿ ದಾಖಲಾಗಿದೆ.
ತನಿಖೆ ಚುರುಕು
ಪ್ರಕರಣದ ಗಂಭೀರತೆಯನ್ನು ಪರಿಗಣಿಸಿರುವ ನಾಗ್ಪುರ ಪೊಲೀಸರು ಆರೋಪಿಗಳ ವಿರುದ್ಧ ಅತ್ಯಾಚಾರ, ಸುಲಿಗೆ, ಬ್ಲ್ಯಾಕ್‌ಮೇಲ್, ಬಲವಂತದ ಮತಾಂತರ ಹಾಗೂ ಮಹಾರಾಷ್ಟ್ರದ ಮಾಟಮಂತ್ರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಡಿಸಿಪಿ ಸುರೇಶ್ ರೆಡ್ಡಿ ಅವರು, ಆರೋಪಿಗಳಿಂದ ವಶಪಡಿಸಿಕೊಳ್ಳಲಾದ ಮೊಬೈಲ್ ಹಾಗೂ ಎಲೆಕ್ಟ್ರಾನಿಕ್ ಉಪಕರಣಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಡಿಜಿಟಲ್ ಸಾಕ್ಷ್ಯಗಳು ಈ ಪ್ರಕರಣದಲ್ಲಿ ಅತ್ಯಂತ ನಿರ್ಣಾಯಕವಾಗಲಿವೆ ಎಂದು ತಿಳಿಸಿದ್ದಾರೆ. ತಲೆಮರೆಸಿಕೊಂಡಿರುವ ಮೌಲ್ವಿಯ ಪತ್ತೆಗಾಗಿ ನೆರೆರಾಜ್ಯಕ್ಕೆ ವಿಶೇಷ ಪೊಲೀಸ್ ತಂಡವನ್ನು ರವಾನಿಸಲಾಗಿದ್ದು, ತನಿಖೆ ತೀವ್ರಗತಿಯಲ್ಲಿ ಸಾಗಿದೆ.
ಇದನ್ನೂ ಓದಿ : ಮಹದೇವಪ್ಪಗೆ ಸಚಿವ ಸ್ಥಾನ ನೀಡದಂತೆ ಆಗ್ರಹ : ರಾಷ್ಟ್ರೀಯ ಅಂಬೇಡ್ಕರ್ ಸೇನೆಯಿಂದ ನಾಳೆ ಪಂಜಿನ ಮೆರವಣಿಗೆ!


















