ನವದೆಹಲಿ: ದೇಶದಲ್ಲಿ ಪೆಟ್ರೋಲ್ನೊಂದಿಗೆ ಎಥೆನಾಲ್ ಮಿಶ್ರಣ ಮಾಡಲು ಇರುವ ಶೇ.20ರ ಮಿತಿಯನ್ನು ಉಲ್ಲಂಘಿಸಿ, ಕರ್ನಾಟಕದಲ್ಲಿ ಬಹುತೇಕ ಎಲ್ಲ ಸರ್ಕಾರಿ, ಖಾಸಗಿ ಕಂಪನಿಗಳು ಶೇ.30ಕ್ಕೂ ಹೆಚ್ಚು ಎಥೆನಾಲ್ ಮಿಶ್ರಣ ಮಾಡುತ್ತಿರುವ ವಿಚಾರ ಇದೀಗ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಈ ವಿಚಾರವನ್ನೆತ್ತಿಕೊಂಡಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಸಂಗ್ರಹಿಸಿದ ಪೆಟ್ರೋಲ್ ಮಾದರಿಗಳ ಪ್ರಯೋಗಾಲಯ ಪರೀಕ್ಷಾ ವರದಿಯನ್ನು ಉಲ್ಲೇಖಿಸಿ, “ಕೇಂದ್ರ ಸರ್ಕಾರದ ಇ20 ಯೋಜನೆಯು ಸಾರ್ವಜನಿಕರ ಜೇಬಿಗೆ ಕನ್ನ ಹಾಕುವ ‘420’ ಯೋಜನೆಯಾಗಿದೆ” ಎಂದು ಎಕ್ಸ್ (ಟ್ವಿಟರ್) ಖಾತೆಯಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಕರ್ನಾಟಕದ 7 ಜಿಲ್ಲೆಗಳ ಮಾದರಿ ಪರೀಕ್ಷೆ: ವರದಿಯಲ್ಲಿ ಏನಿದೆ?
ಕರ್ನಾಟಕದ ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಗಳೂರು ಮತ್ತು ತುಮಕೂರು ಸೇರಿದಂತೆ 7 ಜಿಲ್ಲೆಗಳಿಂದ ಸಂಗ್ರಹಿಸಲಾದ 14 ಇಂಧನ ಮಾದರಿಗಳಲ್ಲಿ 11 ಮಾದರಿಗಳು ಶೇಕಡಾ 20 ಕ್ಕಿಂತ ಹೆಚ್ಚು ಎಥನಾಲ್ ಹೊಂದಿವೆ ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ. ಮಾನ್ಯತೆ ಪಡೆದ ಎನ್ಎಬಿಎಲ್ (NABL) ಪ್ರಯೋಗಾಲಯದಲ್ಲಿ ನಡೆಸಿದ ಪರೀಕ್ಷೆಯ ಪ್ರಕಾರ, ಇಂಡಿಯನ್ ಆಯಿಲ್ (IOCL) ಮತ್ತು ಹಿಂದುಸ್ತಾನ್ ಪೆಟ್ರೋಲಿಯಂ (HPCL) ಸಂಸ್ಥೆಗಳ ಇಂಧನದಲ್ಲಿ ಎಥೆನಾಲ್ ಪ್ರಮಾಣ ಕ್ರಮವಾಗಿ ಶೇಕಡಾ 31.2 ಮತ್ತು ಶೇಕಡಾ 30.5 ರಷ್ಟಿರುವುದು ಕಂಡುಬಂದಿದೆ. ಪ್ರಧಾನಿ ನರೇಂದ್ರ ಮೋದಿಯವರನ್ನು ಪ್ರಶ್ನಿಸಿರುವ ರಾಹುಲ್ ಗಾಂಧಿ, ನಿಯಮ ಉಲ್ಲಂಘಿಸುತ್ತಿರುವ ಕಂಪನಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ತೈಲ ಕಂಪನಿಗಳ ಸ್ಪಷ್ಟನೆ
ಈ ಆರೋಪಗಳನ್ನು ಪ್ರಮುಖ ಸಾರ್ವಜನಿಕ ರಂಗದ ತೈಲ ಕಂಪನಿಗಳಾದ ಐಒಸಿಎಲ್, ಬಿಪಿಸಿಎಲ್ ಮತ್ತು ಎಚ್ಪಿಸಿಎಲ್ ಜಂಟಿ ಹೇಳಿಕೆಯ ಮೂಲಕ ಸಂಪೂರ್ಣವಾಗಿ ತಿರಸ್ಕರಿಸಿವೆ. ದೇಶಾದ್ಯಂತ ಪೂರೈಸಲಾಗುವ ಇ20 ಪೆಟ್ರೋಲ್ ಭಾರತೀಯ ಗುಣಮಟ್ಟ ಮಂಡಳಿಯ (BIS) ನಿಯಮಗಳಿಗೆ ಬದ್ಧವಾಗಿದೆ ಎಂದು ಕಂಪನಿಗಳು ತಿಳಿಸಿವೆ. ಮಾದರಿ ಸಂಗ್ರಹಣೆಯ ಸಮಯದಲ್ಲಿ ತಮ್ಮ ಪ್ರತಿನಿಧಿಗಳು ಇರಲಿಲ್ಲ ಹಾಗೂ ಪರೀಕ್ಷಾ ವಿಧಾನದ ತಾಂತ್ರಿಕ ವಿವರಗಳು ವರದಿಯಲ್ಲಿ ಲಭ್ಯವಿಲ್ಲ ಎಂದು ಕಂಪನಿಗಳು ಶಂಕೆ ವ್ಯಕ್ತಪಡಿಸಿದ್ದು, ಸರ್ಕಾರಿ ಅಧಿಕಾರಿಗಳ ಸಮ್ಮುಖದಲ್ಲಿ ಸ್ವತಂತ್ರ ಪ್ರಯೋಗಾಲಯದಲ್ಲಿ ಮರುಪರೀಕ್ಷೆ ನಡೆಸಲು ಕೋರಿವೆ.
ವಾಹನ ಚಾಲಕರಲ್ಲಿ ಆತಂಕ
ಪೆಟ್ರೋಲ್ನಲ್ಲಿ ನಿಗದಿತ ಪ್ರಮಾಣಕ್ಕಿಂತ ಅಧಿಕ ಎಥೆನಾಲ್ ಮಿಶ್ರಣ ಮಾಡುವುದರಿಂದ ವಾಹನಗಳ ಮೈಲೇಜ್ ಕಡಿಮೆಯಾಗುವುದಲ್ಲದೆ, ಎಂಜಿನ್ ಭಾಗಗಳು ಬೇಗನೆ ಹಾಳಾಗುತ್ತವೆ ಎಂಬ ಆತಂಕ ಸಾರ್ವಜನಿಕರಲ್ಲಿ ವ್ಯಕ್ತವಾಗಿದೆ. ಕರ್ನಾಟಕ ಸರ್ಕಾರವು ತೈಲ ಕಂಪನಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದು, ಪೆಟ್ರೋಲ್ ಬಂಕ್ಗಳಲ್ಲಿ ಎಥೆನಾಲ್ ಪ್ರಮಾಣವನ್ನು ಪಾರದರ್ಶಕವಾಗಿ ಪ್ರದರ್ಶಿಸಬೇಕು ಎಂದು ಒತ್ತಾಯಿಸಿದೆ. ಕೇಂದ್ರ ಸರ್ಕಾರದ ಎಥೆನಾಲ್ ಮಿಶ್ರಣ ಯೋಜನೆಯು ಆಮದು ವೆಚ್ಚ ತಗ್ಗಿಸುವ ಉದ್ದೇಶ ಹೊಂದಿದ್ದರೂ, ಗುಣಮಟ್ಟದ ಕೊರತೆಯು ವಾಹನ ಮಾಲೀಕರಿಗೆ ನಷ್ಟ ಉಂಟುಮಾಡುತ್ತಿದೆ ಎಂಬ ಚರ್ಚೆ ಈಗ ತೀವ್ರಗೊಂಡಿದೆ.


















