ಬೆಂಗಳೂರು: ವಸತಿ ಪ್ರದೇಶಗಳಲ್ಲಿ ನಿಯಮ ಉಲ್ಲಂಘಿಸಿ ಅನಧಿಕೃತವಾಗಿ ನಡೆಯುತ್ತಿದ್ದ ವಾಣಿಜ್ಯ ಚಟುವಟಿಕೆಗಳ ವಿರುದ್ಧ ಸಮರ ಸಾರಿರುವ ಬೆಂಗಳೂರು ದಕ್ಷಿಣ ನಗರ ಪಾಲಿಕೆ ಅಧಿಕಾರಿಗಳು, ಬರೋಬ್ಬರಿ 51 ವಾಣಿಜ್ಯ ಮಳಿಗೆಗಳಿಗೆ ದಿಢೀರ್ ದಾಳಿ ನಡೆಸಿ ಬೀಗ ಜಡಿದಿದ್ದಾರೆ.
ಒಟ್ಟು 5 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ. ಈ ಪೈಕಿ ಬೊಮ್ಮನಹಳ್ಳಿ ವ್ಯಾಪ್ತಿಯಲ್ಲಿ ಅತಿ ಹೆಚ್ಚು, ಅಂದರೆ 22 ಮಳಿಗೆಗಳನ್ನು ಸೀಜ್ ಮಾಡಲಾಗಿದೆ. ಉಳಿದಂತೆ ಜಯನಗರದಲ್ಲಿ 11, ಬೆಂಗಳೂರು ದಕ್ಷಿಣದಲ್ಲಿ 9, ಪದ್ಮನಾಭನಗರದಲ್ಲಿ 6 ಹಾಗೂ ಬಿಟಿಎಂ ಲೇಔಟ್ ವ್ಯಾಪ್ತಿಯಲ್ಲಿ 3 ವಾಣಿಜ್ಯ ಮಳಿಗೆಗಳನ್ನು ಅಧಿಕಾರಿಗಳು ಮುಚ್ಚಿಸಿದ್ದಾರೆ.
23 ಅಕ್ರಮ ಸಿಲಿಂಡರ್ ಜಪ್ತಿ
ಅರಕೆರೆ ವ್ಯಾಪ್ತಿಯಲ್ಲಿರುವ ಕ್ಯಾಟರಿಂಗ್ ಘಟಕವೊಂದರ ಮೇಲೆ ದಾಳಿ ನಡೆಸಿದಾಗ ಭಾರಿ ಪ್ರಮಾಣದ ಅಕ್ರಮ ಬೆಳಕಿಗೆ ಬಂದಿದೆ. ವಾಣಿಜ್ಯ ಉದ್ದೇಶಕ್ಕಾಗಿ ಕಾನೂನುಬಾಹಿರವಾಗಿ ಬಳಸುತ್ತಿದ್ದ 23 ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ಗಳನ್ನು ಅಧಿಕಾರಿಗಳು ಸ್ಥಳದಲ್ಲೇ ಜಪ್ತಿ ಮಾಡಿದ್ದಾರೆ. ಇದಲ್ಲದೆ, ವಸತಿ ಪ್ರದೇಶಗಳಲ್ಲಿದ್ದ ಕಾಂಡಿಮೆಂಟ್ಸ್ ಅಂಗಡಿಗಳು, ಫ್ಯಾಬ್ರಿಕೇಷನ್ ಘಟಕ ಹಾಗೂ ಕಾರ್ ವಾಶ್ ಸೆಂಟರ್ಗಳನ್ನು ಸಹ ನಿಯಮ ಉಲ್ಲಂಘನೆಯಡಿ ಸ್ಥಗಿತಗೊಳಿಸಲಾಗಿದೆ.
ಕಾರ್ಯಾಚರಣೆ ಮುಂದುವರಿಕೆ; ಆಯುಕ್ತರ ಎಚ್ಚರಿಕೆ
“ವಸತಿ ಪ್ರದೇಶಗಳಲ್ಲಿ ವಾಣಿಜ್ಯ ಚಟುವಟಿಕೆಗಳನ್ನು ನಡೆಸುವುದು ಸ್ಪಷ್ಟ ನಿಯಮ ಉಲ್ಲಂಘನೆಯಾಗಿದೆ. ಮುಂದಿನ ದಿನಗಳಲ್ಲೂ ವಿವಿಧ ಬಡಾವಣೆಗಳಲ್ಲಿ ತಪಾಸಣೆ ಕಾರ್ಯ ತೀವ್ರಗೊಳ್ಳಲಿದ್ದು, ನಿಯಮ ಮೀರಿ ವಾಣಿಜ್ಯ ಉದ್ದಿಮೆಗಳನ್ನು ನಡೆಸುವವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ಆಯುಕ್ತ ಕೆ.ಎನ್. ರಮೇಶ್ ಎಚ್ಚರಿಕೆ ನೀಡಿದ್ದಾರೆ.



















