ನವದೆಹಲಿ : ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿನ ಆಂತರಿಕ ಭಿನ್ನಮತಕ್ಕೆ ಮತ್ತೊಂದು ಬಲಿ ಎಂಬಂತೆ ಪಕ್ಷದ ಮತ್ತೊಬ್ಬ ಹಿರಿಯ ನಾಯಕಿ ಹಾಗೂ ರಾಜ್ಯಸಭಾ ಸಂಸದೆ ಸುಶ್ಮಿತಾ ದೇವ್ ಅವರು ಇಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪಕ್ಷದ ಎಲ್ಲಾ ಜವಾಬ್ದಾರಿಗಳನ್ನು ತೊರೆದಿರುವ ಅವರು, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರನ್ನು ಭೇಟಿಯಾಗಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಈ ಮೂಲಕ ಒಂದೇ ವಾರದಲ್ಲಿ ಟಿಎಂಸಿಯ ಇಬ್ಬರು ರಾಜ್ಯಸಭಾ ಸದಸ್ಯರು ಪಕ್ಷ ತೊರೆದಂತಾಗಿದೆ.
ರಾಜ್ಯಸಭಾ ಸಭಾಪತಿ ಸಿ.ಪಿ. ರಾಧಾಕೃಷ್ಣನ್ ಅವರಿಗೆ ಪತ್ರ ಬರೆದಿರುವ 53 ವರ್ಷದ ಸುಶ್ಮಿತಾ ದೇವ್ ಅವರು, “ನಾನು ತಕ್ಷಣದಿಂದ ಜಾರಿಗೆ ಬರುವಂತೆ ರಾಜ್ಯಸಭೆಯ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ, ದಯವಿಟ್ಟು ಇದನ್ನು ಅಂಗೀಕರಿಸಬೇಕು” ಎಂದು ವಿನಂತಿಸಿದ್ದಾರೆ. ಅಸ್ಸಾಂ ಕಾಂಗ್ರೆಸ್‌ನ ಪ್ರಭಾವಿ ನಾಯಕ ಸಂತೋಷ್ ಮೋಹನ್ ದೇವ್ ಅವರ ಪುತ್ರಿಯಾದ ಸುಶ್ಮಿತಾ, ಈ ಹಿಂದೆ ಕಾಂಗ್ರೆಸ್‌ನ ಮಹಿಳಾ ಘಟಕದ (ಅಖಿಲ ಭಾರತ ಮಹಿಳಾ ಕಾಂಗ್ರೆಸ್) ಅಧ್ಯಕ್ಷರಾಗಿದ್ದರು. ತಮ್ಮ ತಂದೆಯ ಭದ್ರಕೋಟೆಯಾಗಿದ್ದ ಅಸ್ಸಾಂನ ಸಿಲ್ಚಾರ್‌ನಿಂದ ಸಂಸದರಾಗಿಯೂ ಅವರು ಆಯ್ಕೆ ಆಗಿ, ಸೇವೆ ಸಲ್ಲಿಸಿದ್ದರು. 2021ರಲ್ಲಿ ಕಾಂಗ್ರೆಸ್ ತೊರೆದು ಟಿಎಂಸಿ ಸೇರಿದ್ದ ಅವರು, ಸಾರ್ವಜನಿಕ ಸೇವೆಯ ಹೊಸ ಅಧ್ಯಾಯವನ್ನು ಪ್ರಾರಂಭಿಸುತ್ತಿರುವುದಾಗಿ ಹೇಳಿದ್ದರು.
ಮೂರೇ ದಿನಗಳಲ್ಲಿ ಇಬ್ಬರು ಸಂಸದರ ನಿರ್ಗಮನ
ಟಿಎಂಸಿ ನಾಯಕತ್ವಕ್ಕೆ ಈ ವಾರ ಆರಂಭದಲ್ಲೇ ದೊಡ್ಡ ಆಘಾತ ಎದುರಾಗಿತ್ತು. ಸೋಮವಾರವಷ್ಟೇ ಹಿರಿಯ ನಾಯಕ ಹಾಗೂ ರಾಜ್ಯಸಭಾ ಸದಸ್ಯ ಸುಖೇಂದು ಶೇಖರ್ ರಾಯ್ ಅವರು ಸಂಸತ್ ಸ್ಥಾನ ಮತ್ತು ಪಕ್ಷ ಎರಡಕ್ಕೂ ರಾಜೀನಾಮೆ ಘೋಷಿಸಿದ್ದರು. ತಮ್ಮ ರಾಜೀನಾಮೆಯ ಬೆನ್ನಲ್ಲೇ ಪಶ್ಚಿಮ ಬಂಗಾಳದ ಟಿಎಂಸಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದ ರಾಯ್, ಇತ್ತೀಚಿನ ವಿಧಾನಸಭಾ ಚುನಾವಣೆಯ ಜನರ ತೀರ್ಪನ್ನು ಗೌರವಿಸಿ ತಾವು ಹೊರನಡೆಯುತ್ತಿರುವುದಾಗಿ ತಿಳಿಸಿದ್ದರು. ಈ ಆಘಾತ ಮಾಸುವ ಮುನ್ನವೇ, ಇದೀಗ ಸುಶ್ಮಿತಾ ದೇವ್ ಅವರೂ ಪಕ್ಷಕ್ಕೆ ಗುಡ್‌ಬೈ ಹೇಳಿದ್ದಾರೆ.
ಬಂಗಾಳದಲ್ಲಿ ಭುಗಿಲೆದ್ದ ಬಂಡಾಯದ ಧ್ವನಿ
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಸೋಲಿನ ನಂತರ ಟಿಎಂಸಿ ಒಳಗಿನ ಭಿನ್ನಮತ ಸ್ಫೋಟಗೊಂಡಿದೆ. ಇತ್ತೀಚೆಗಷ್ಟೇ ಪಕ್ಷದ 58 ಶಾಸಕರು ನಾಯಕತ್ವದ ಅಧಿಕೃತ ಅಭ್ಯರ್ಥಿ ಶೋಭಂದೇಬ್ ಚಟ್ಟೋಪಾಧ್ಯಾಯ ಅವರನ್ನು ತಿರಸ್ಕರಿಸಿ, ರಿತಬ್ರತಾ ಬ್ಯಾನರ್ಜಿ ಅವರನ್ನು ವಿರೋಧಪಕ್ಷದ ನಾಯಕನ ಸ್ಥಾನಕ್ಕೆ ಬೆಂಬಲಿಸುವ ಮೂಲಕ ದೀದಿ ವಿರುದ್ಧ ಬಂಡಾಯವೆದ್ದಿದ್ದರು. ಈ ಬಂಡಾಯದ ಬೆನ್ನಲ್ಲೇ ಈಗ ಸಂಸದರು ಸಾಲು ಸಾಲಾಗಿ ಪಕ್ಷ ತೊರೆಯುತ್ತಿರುವುದು ತೃಣಮೂಲ ಕಾಂಗ್ರೆಸ್‌ನ ಆಂತರಿಕ ಬಿಕ್ಕಟ್ಟನ್ನು ಮತ್ತಷ್ಟು ತೀವ್ರಗೊಳಿಸಿದೆ. ಈ ಅಸಮಾಧಾನವು ಕೇವಲ ಬಂಗಾಳಕ್ಕೆ ಸೀಮಿತವಾಗದೆ ಇತರ ರಾಜ್ಯಗಳಿಗೂ ಹರಡುತ್ತಿರುವುದು ಪಕ್ಷದ ನಾಯಕತ್ವಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಇದನ್ನೂ ಓದಿ : ತಿಂಗಳಿಗೆ 10 ಸಾವಿರ ರೂ. ಹೂಡಿಕೆ : ಪೋಸ್ಟ್ ಆಫೀಸ್ ಆರ್‌ಡಿ ಬೆಸ್ಟೋ, ಬ್ಯಾಂಕ್ ಠೇವಣಿ ಒಳ್ಳೆಯದೋ?


















