ಬೆಂಗಳೂರು : ನಾವೀಗ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಕಾಲಕ್ಕೆ ಕಾಲಿಟ್ಟಿದ್ದೇವೆ. ಮೊಬೈಲ್ ಗಳಿಂದ ಹಿಡಿದು ವಾಹನಗಳವರೆಗೆ ಎಐ ಬಳಕೆ ಬಳಕೆಯಾಗುತ್ತಿದೆ. ಎಐನಿಂದ ಹೊಸ ಉದ್ಯೋಗ ಸೃಷ್ಟಿಯಾಗುವ ಜತೆಗೆ ಸಾವಿರಾರು ಉದ್ಯೋಗಿಗಳು ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಇದರ ಮಧ್ಯೆಯೇ, ನಮ್ಮ ಯುಪಿಐ ಮೂಲಕ ಎಐ ತಂತ್ರಜ್ಞಾನವು ಇನ್ನುಮುಂದೆ ಪೇಮೆಂಟ್ ಮಾಡಲಿದೆ. ಹೌದು, ನಮ್ಮ ಪರವಾಗಿ ಇನ್ನುಮುಂದೆ ಎಐ ಪೇಮೆಂಟ್ ಮಾಡುವ ವ್ಯವಸ್ಥೆ ಶೀಘ್ರವೇ ಜಾರಿಗೆ ಬರಲಿದೆ.
ಹೌದು, ಭಾರತೀಯ ರಾಷ್ಟ್ರೀಯ ಪಾವತಿ ನಿಗಮವು (ಎನ್ ಪಿಸಿಐ) ಇಂತಹದ್ದೊಂದು ತಂತ್ರಜ್ಞಾನ ಅಳವಡಿಸಿಕೊಳ್ಳುವ ಚಿಂತನೆ ನಡೆಸಿದೆ ಎಂದು ವರದಿಯಾಗಿದೆ. ಯುನಿಫೈಡ್ ಏಜೆಂಟ್ ಪ್ರೋಟೊಕಾಲ್ (ಯುಎಪಿ) ಎಂಬ ವ್ಯವಸ್ಥೆ ಮೂಲಕ ಎಐ ಪೇಮೆಂಟ್ ಮಾಡುವ ಸೌಲಭ್ಯ ನೀಡಲಾಗುತ್ತದೆ. ಇದರ ಅರ್ಥ, ನಿಮ್ಮ ಯುಇಐ, ಬ್ಯಾಂಕ್ ಖಾತೆಯ ನಿಯಂತ್ರಣವನ್ನು ಎಐಗೆ ನೀಡುವುದಲ್ಲ. ಬದಲಾಗಿ, ನಿಮ್ಮ ಅನುಮತಿ ಮೇರೆಗೆ ಅದು ಕೆಲ ಸಣ್ಣ ಮೊತ್ತದ ಬಿಲ್ ಗಳನ್ನು ಪಾವತಿ ಮಾಡುತ್ತದೆ.
ಎಐ ಪೇಮೆಂಟ್ ಹೇಗೆ?
ನಿಮ್ಮ ಮೊಬೈಲ್ ರಿಚಾರ್ಜ್ ಪ್ಲಾನ್ ಮುಗಿದಿರುತ್ತದೆ. ನೀವು ರಿಚಾರ್ಜ್ ಮಾಡುವುದನ್ನು ಮರೆತಿರುತ್ತೀರಿ. ಇಂತಹ ಸಂದರ್ಭದಲ್ಲಿ, ಪ್ಲಾನ್ ಮುಗಿಯುತ್ತಲೇ ಎಐ ಏಜೆಂಟ್ ಗಳೇ ಸ್ವಯಂಚಾಲಿತವಾಗಿ ರಿಚಾರ್ಜ್ ಮಾಡುತ್ತವೆ. ಇದೇ ರೀತಿ, ವಿದ್ಯುತ್ ಬಿಲ್, ಆನ್ ಲೈನ್ ಮೂಲಕ ಗ್ರಾಸರಿ (ದಿನಬಳಕೆ ವಸ್ತುಗಳು) ಬುಕ್ ಮಾಡುವುದು, ನಿಮ್ಮ ನೆಚ್ಚಿನ ಇಯರ್ ಬಡ್ಸ್ ಬೆಲೆ ಇಳಿಕೆಯಾಗುತ್ತಲೇ ಬುಕ್ ಮಾಡುವುದು, ಒಟಿಟಿ ಬಿಲ್ ಪಾವತಿ ಸೇರಿ ಹಲವು ಬಿಲ್ ಗಳನ್ನು ಎಐ ಮಾಡಲಿದೆ.
ಎರಡು ಸಾವಿರ ರೂಪಾಯಿಗಿಂತ ಕಡಿಮೆ ಮೊತ್ತದ ಬಿಲ್, ಗ್ರಾಸರಿ, ಒಟಿಟಿ ಬಿಲ್ ಸೇರಿ ಹಲವು ಪೇಮೆಂಟ್ ಗಳನ್ನು ಎಐ ಮಾಡಲಿದೆ. ನೀವು ವಾರಕ್ಕೆ 1 ಸಾವಿರ ರೂ. ಮೌಲ್ಯದ ಗ್ರಾಸರಿ ಬುಕ್ ಮಾಡುವ ಕುರಿತು ಸೂಚನೆ ನೀಡಿದರೆ, ನಿಗದಿತ ದಿನದಂದು ಎಐ ಬುಕ್ ಮಾಡಲಿದೆ. ಇದಕ್ಕೆ ಮೊದಲೇ ನೀವು ಅನುಮತಿ ನೀಡಿರಬೇಕು. ನಿಮ್ಮ ಅನುಮತಿ ಇಲ್ಲದೆ ಯಾವುದೇ ಪೇಮೆಂಟ್ ಆಗುವುದಿಲ್ಲ ಎಂದು ವರದಿಯಾಗಿದೆ.
ಇದನ್ನೂ ಓದಿ : ಟಿ20 ಅಬ್ಬರ ಏಕದಿನ ಕ್ರಿಕೆಟ್‌ಗೆ ಕಂಟಕ? ’50 ಓವರ್ ಪಂದ್ಯಗಳು ಕಡಿಮೆಯಾಗಲಿವೆ’ ಎಂದ ಪಾಂಟಿಂಗ್



















