ಬೆಂಗಳೂರು : ಕನ್ನಡ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ವಸುದೇವ ಕುಟುಂಬ’ ಸೀರಿಯಲ್ ಕಲಾವಿದರು, ತಂತ್ರಜ್ಞರು ಇದೀಗ ಧಾರಾವಾಹಿ ನಿರ್ಮಾಪಕರ ವಿರುದ್ಧ ತಿರುಗಿ ಬಿದ್ದಿದ್ದಾರೆ. ಕೋರಮಂಗಲ ಟಾಕೀಸ್ ನಿರ್ಮಾಣ ಸಂಸ್ಥೆಯು ‘ವಸುದೇವ ಕುಟುಂಬ’ ಧಾರಾವಾಹಿಯನ್ನು ನಿರ್ಮಾಣ ಮಾಡಿದ್ದು, ಸಂಭಾವನೆ ಕೊಟ್ಟಿಲ್ಲ ಎಂದು ಧಾರಾವಾಹಿ ನಟ-ನಟಿಯರು, ತಂತ್ರಜ್ಞರು ಆಕ್ರೋಶ ಹೊರಹಾಕಿದ್ದಾರೆ.
‘ವಸುದೇವ ಕುಟುಂಬ’ ಧಾರಾವಾಹಿಯಲ್ಲಿ ಮಾಜಿ ಬಿಗ್‌ಬಾಸ್ ಸ್ಪರ್ಧಿ ಹಂಸ, ನಟಿ ಚೈತ್ರಾ, ಹಿರಿಯ ನಟ ಅವಿನಾಶ್ ಸೇರಿದಂತೆ ಕೆಲವು ಪ್ರಮುಖ ಕಲಾವಿದರು ನಟಿಸುತ್ತಿದ್ದಾರೆ. ಕೆಲವು ತಿಂಗಳಿನಿಂದ ಕಲಾವಿದರಿಗೆ ನಿರ್ಮಾಪಕರು ಸಂಭಾವನೆ ನೀಡಿಲ್ಲ ಮಾತ್ರವಲ್ಲದೆ, ಆಹಾರ, ಇನ್ನಿತರೆಗಳನ್ನು ಸರಿಯಾಗಿ ನೀಡಿಲ್ಲ ಎನ್ನುವ ಆರೋಪ ಕೇಳಿಬಂದಿದೆ.
ಶುಕ್ರವಾರ (ಏ.1) ನಿರ್ಮಾಪಕರನ್ನು ಪೇಮೆಂಟ್ ಕೊಡುವಂತೆ ಧಾರಾವಾಹಿಯ ನಟಿಯರಾದ ಹಂಸ ಮತ್ತು ಚೈತ್ರಾ ಕೇಳಿದ್ದು, ನಿರ್ಮಾಪಕರು ಉತ್ತರಿಸದೆ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಇದರ ಬೆನ್ನಲ್ಲೇ ಕಲಾವಿದರು ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ನಿರ್ಮಾಪಕರ ವಿರುದ್ದ ದೂರು ನೀಡಿದ್ದಾರೆ.

‘ವಸುದೇವ ಕುಟುಂಬ’ ಧಾರಾವಾಹಿಯಲ್ಲಿ ಕಲಾವಿದರಾಗಿ ಕೆಲಸ ಮಾಡುತ್ತಿದ್ದು, ಕೋರಮಂಗಲ ಟಾಕೀಸ್ ಎಂಬ ನಿರ್ಮಾಣ ಸಂಸ್ಥೆಯೊಂದಿಗೆ (ಪ್ರೊಡ್ಯೂಸರ್ ರೇಖಾ ಕೆ.ಬಿ ಮತ್ತು ನಿರ್ದೇಶಕ ಕೋರಮಂಗಲ ಅನಿಲ್) ಅವರ ಜೊತೆ ಒಪ್ಪಂದ ಮಾಡಿಕೊಂಡಿದ್ದೇವೆ. ಆ ಒಪ್ಪಂದದ ಪ್ರಕಾರ, ನಾವು ಮಾಡಿದ ಕೆಲಸಕ್ಕೆ 30 ದಿನಗಳೊಳಗೆ ಪಾವತಿ ನೀಡಬೇಕು ಎಂದು ಉಲ್ಲೇಖಿಸಲಾಗಿದೆ.
ಆದರೆ, ಡಿಸೆಂಬರ್ ತಿಂಗಳಿಂದ (2 ದಿನಗಳ ಪಾವತಿ), ಜನವರಿ, ಫೆಬ್ರವರಿ ಹಾಗೂ ಮಾರ್ಚ್ 7, 2026ರವರೆಗೆ ನನಗೆ ಯಾವುದೇ ಪಾವತಿ ಬಂದಿಲ್ಲ. ನಮ್ಮೊಂದಿಗೆ ಕೆಲಸ ಮಾಡಿದ ಇತರ ತಂತ್ರಜ್ಞರೂ ಸಹ ಡಿಸೆಂಬರ್, ಜನವರಿ, ಫೆಬ್ರವರಿ ಹಾಗೂ ಮಾರ್ಚ್ ತಿಂಗಳ ಪಾವತಿಯನ್ನು ಪಡೆಯಬೇಕಾಗಿದೆ. ಈ ಬಗ್ಗೆ ನಿರ್ಮಾಣ ಸಂಸ್ಥೆಯನ್ನು ಕರೆ ಅಥವಾ ಸಂದೇಶಗಳ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದರೂ, ಯಾವುದೇ ಪ್ರತಿಕ್ರಿಯೆ ದೊರಕಿಲ್ಲ. ಪಾವತಿಯ ದಿನಾಂಕದ ಕುರಿತು ಕೂಡ ಮಾಹಿತಿ ನೀಡಿಲ್ಲ ಎಂದು ನಟಿ ಚೈತ್ರಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ನಾಗರಬಾವಿಯಲ್ಲಿ ನಿರ್ಮಾಪಕರು ನಡೆಸುತ್ತಿರುವ ‘ತತ್ಸವಿ ಹೋಟೆಲ್’ ಬಳಿಯೂ ಹೋಗಿ ನಾವು ಹಣ ಪಾವತಿಯಾಗದಿರುವ ಬಗ್ಗೆ ಕೇಳಿದ್ದು, ಈ ವೇಳೆ ಅವರು ಸರಿಯಾದ ರೀತಿಯಲ್ಲಿ ಪ್ರತಿಕ್ರಿಯೆ ನೀಡಿಲ್ಲ. ಬದಲಾಗಿ ಬೆದರಿಕೆ ಮತ್ತು ಕಿರುಕುಳ ನೀಡಿದ್ದೇವೆ ಎಂದು ಆರೋಪಿಸಿ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ನಮ್ಮ ಮೇಲೆಯೇ ದೂರು ನೀಡಿದ್ದಾರೆ. ಹೀಗಾಗಿ ನಮಗೆ ಪಾವತಿಸಬೇಕಿರುವ ಹಣವನ್ನು ತಕ್ಷಣ ನೀಡುವಂತೆ ಮತ್ತು ನಿರ್ಮಾಣ ಸಂಸ್ಥೆಯಿಂದ ನಮ್ಮ ಮೇಲೆ ಮಾಡಲಾಗಿರುವ ಆರೋಪಗಳಿಂದ ರಕ್ಷಣೆ ನೀಡುವಂತೆ ವಿನಂತಿಸೋದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ : ನೀವು ಈ ಕೆಲಸ ಮಾಡದಿದ್ದರೆ PF ಹಣ ವಿತ್ ಡ್ರಾ ಮಾಡಲು ಆಗಲ್ಲ : ಏನಿದು ಗೊತ್ತಾ?



















