ನವದೆಹಲಿ : ಇಂಡಿಯನ್ ಪ್ರೀಮಿಯರ್ ಲೀಗ್ (IPL) 2026ರಲ್ಲಿ ತನ್ನ ಸ್ಫೋಟಕ ಬ್ಯಾಟಿಂಗ್ ಮೂಲಕ ವಿಶ್ವ ಕ್ರಿಕೆಟ್‌ನ ಗಮನ ಸೆಳೆಯುತ್ತಿರುವ 15 ವರ್ಷದ ಪೋರ ವೈಭವ್ ಸೂರ್ಯವಂಶಿ ಈಗ ಗಡಿ ದಾಟಿ ಪಾಕಿಸ್ತಾನದಲ್ಲೂ ಸಂಚಲನ ಮೂಡಿಸಿದ್ದಾರೆ. ಕೇವಲ ಹದಿಹರೆಯದ ಪ್ರಾಯದಲ್ಲೇ ಅನುಭವಿ ಬೌಲರ್‌ಗಳನ್ನು ಬೆಂಡೆತ್ತುತ್ತಿರುವ ವೈಭವ್ ಬ್ಯಾಟಿಂಗ್ ನೋಡಿ ಪಾಕಿಸ್ತಾನದ ಹಿರಿಯ ಕ್ರೀಡಾ ವಿಶ್ಲೇಷಕರು ಹೊಟ್ಟೆ ಉರಿ ಪಟ್ಟುಕೊಂಡಿದ್ದಾರೆ.
ಪಾಕಿಸ್ತಾನದ ಪ್ರಸಿದ್ಧ ಟಿವಿ ನಿರೂಪಕ ಮತ್ತು ಕ್ರಿಕೆಟ್ ವಿಶ್ಲೇಷಕ ಡಾ. ನೌಮನ್ ನಿಯಾಜ್, ವೈಭವ್ ಸೂರ್ಯವಂಶಿ ಅವರ ಆಟಕ್ಕೆ ಎಷ್ಟು ಬೆರಗಾಗಿದ್ದಾರೆಂದರೆ, ತಮಾಷೆಯಾಗಿ ಒಂದು ವಿಚಿತ್ರ ಬೇಡಿಕೆಯನ್ನಿಟ್ಟಿದ್ದಾರೆ. “ಈ ಹುಡುಗ ಯಾರು? ಈತನ ಬ್ಯಾಟನ್ನು ಒಮ್ಮೆ ಪರೀಕ್ಷಿಸಬೇಕು. ಡೋಪಿಂಗ್ ಪರೀಕ್ಷೆ ಮಾಡುವಂತೆ ಈತನನ್ನು ಲ್ಯಾಬ್‌ಗೆ ಕಳುಹಿಸಿ ಟೆಸ್ಟ್ ಮಾಡಿಸಬೇಕು. ಇವನು ತನ್ನ ಬ್ಯಾಟ್‌ನಲ್ಲಿ ಯಾವುದಾದರೂ ‘AI ಚಿಪ್’ (ಕೃತಕ ಬುದ್ಧಿಮತ್ತೆಯ ಚಿಪ್) ಅಳವಡಿಸಿಕೊಂಡಿರಬೇಕು. ಇವನು ಆಡುತ್ತಿರುವುದು ಮನುಷ್ಯನಂತೆ ಕಾಣುತ್ತಿಲ್ಲ, ಅದ್ಭುತ ಆಟಗಾರ!” ಎಂದು ಸ್ಮ್ಯಾಶ್‌ಹಿಟ್ (SmashHit) ಎಂಬ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ಸೂರ್ಯವಂಶಿಯ ‘360 ಡಿಗ್ರಿ’ ಮ್ಯಾಜಿಕ್
ವೈಭವ್ ಕೇವಲ ಶಕ್ತಿಯಿಂದ ರನ್ ಗಳಿಸುತ್ತಿಲ್ಲ, ಬದಲಾಗಿ ಅವರ ತಾಂತ್ರಿಕ ಕೌಶಲ ಅದ್ಭುತವಾಗಿದೆ ಎಂದು ನಿಯಾಜ್ ವಿವರಿಸಿದ್ದಾರೆ. “ಸಾಮಾನ್ಯವಾಗಿ 18 ವರ್ಷ ತುಂಬಿದ ಮೇಲೆ ದೇಹದಲ್ಲಿ ಸ್ನಾಯುಗಳು ಮತ್ತು ಶಕ್ತಿ ವೃದ್ಧಿಯಾಗುತ್ತದೆ. ಆದರೆ ಈ ಹುಡುಗನಿಗೆ ಇನ್ನೂ 15-16 ವರ್ಷ ಅಷ್ಟೇ. ವಿರಾಟ್ ಕೊಹ್ಲಿ ವಿಶ್ವ ಚಾಂಪಿಯನ್ ಆದಾಗ ಈತ ಹುಟ್ಟಿದ್ದ ಅಷ್ಟೇ. ಈತನ ಹತ್ತಿರ ಮಸಲ್ ಪವರ್‌ಗಿಂತ ಹೆಚ್ಚಾಗಿ ಉತ್ತಮ ಟೈಮಿಂಗ್ ಮತ್ತು ತಂತ್ರಗಾರಿಕೆಯಿದೆ. ಮೈದಾನದ ಸುತ್ತಲೂ 360 ಡಿಗ್ರಿಯಲ್ಲಿ ಚೆಂಡನ್ನು ಅಟ್ಟುವ ಕಲೆ ಈತನಿಗೆ ಕರಗತವಾಗಿದೆ” ಎಂದು ಅವರು ಶ್ಲಾಘಿಸಿದ್ದಾರೆ.
IPL 2026ರಲ್ಲಿ ದಾಖಲೆಗಳ ಸರಮಾಲೆ
ರಾಜಸ್ಥಾನ್ ರಾಯಲ್ಸ್ ಪರ ಆಡುತ್ತಿರುವ ವೈಭವ್ ಸೂರ್ಯವಂಶಿ, ಪ್ರಸಕ್ತ ಸೀಸನ್‌ನಲ್ಲಿ ಅಕ್ಷರಶಃ ರನ್ ಮಳೆ ಸುರಿಸುತ್ತಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಕೇವಲ 37 ಎಸೆತಗಳಲ್ಲಿ ಭರ್ಜರಿ ಶತಕ (103 ರನ್) ಸಿಡಿಸಿದ್ದರು. ಇದು ಅವರ ಐಪಿಎಲ್ ವೃತ್ತಿಜೀವನದ ಎರಡನೇ ಶತಕವಾಗಿದೆ. ಈ ಸೀಸನ್‌ನ ಮೊದಲ 8 ಪಂದ್ಯಗಳಲ್ಲಿ ಅವರು ಈಗಾಗಲೇ 357 ರನ್ ಗಳಿಸಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ (Orange Cap race) ಮುಂಚೂಣಿಯಲ್ಲಿದ್ದಾರೆ.
ಪಾಕ್ ಮಾಧ್ಯಮಗಳಲ್ಲಿ ಭಾರೀ ಚರ್ಚೆ
ವೈಭವ್ ಬ್ಯಾಟಿಂಗ್ ಶೈಲಿಯನ್ನು ಕಂಡು ಪಾಕಿಸ್ತಾನದ ಯೂಟ್ಯೂಬರ್‌ಗಳು ಮತ್ತು ಮಾಜಿ ಕ್ರಿಕೆಟಿಗರು ಸೋಜಿಗಕ್ಕೊಳಗಾಗಿದ್ದಾರೆ. ಸಣ್ಣ ಪ್ರಾಯದಲ್ಲೇ ಇಷ್ಟೊಂದು ಒತ್ತಡದ ಲೀಗ್‌ನಲ್ಲಿ ಅಷ್ಟು ದೊಡ್ಡ ಬೌಲರ್‌ಗಳನ್ನು ಎದುರಿಸುತ್ತಿರುವ ರೀತಿ ಭಾರತದ ಕ್ರಿಕೆಟ್ ಭವಿಷ್ಯದ ದ್ಯೋತಕ ಎಂದು ಅಲ್ಲಿನ ಮಾಧ್ಯಮಗಳು ಬಣ್ಣಿಸುತ್ತಿವೆ. ಒಟ್ಟಿನಲ್ಲಿ, ವೈಭವ್ ಸೂರ್ಯವಂಶಿ ಕೇವಲ ಭಾರತದ ಭರವಸೆಯಲ್ಲ, ವಿಶ್ವ ಕ್ರಿಕೆಟ್‌ನ ಮುಂದಿನ ‘ಸೂಪರ್ ಸ್ಟಾರ್’ ಎಂಬ ಮಾತುಗಳು ಈಗ ಎಲ್ಲೆಡೆ ಕೇಳಿಬರುತ್ತಿವೆ.
ಇದನ್ನೂ ಓದಿ : ಗಾರ್ಮೆಂಟ್ಸ್ ಕಾರ್ಮಿಕರಿದ್ದ ಮಿನಿಬಸ್ ಪಲ್ಟಿ.. 8 ಮಂದಿಗೆ ಗಂಭೀರ ಗಾಯ!


















