ಚಿಕ್ಕಬಳ್ಳಾಪುರ : ಗಾರ್ಮೆಂಟ್ಸ್ ಕಾರ್ಮಿಕರಿದ್ದ ಮಿನಿಬಸ್ ಪಲ್ಟಿಯಾಗಿರುವ ಘಟನೆ ಗೌರಿಬಿದನೂರು ತಾಲೂಕಿನ ವೇದಲವೇಣಿ ಸಮೀಪ ನಡೆದಿದೆ. ಈ ಘಟನೆಯಲ್ಲಿ ಹತ್ತಕ್ಕೂ ಹೆಚ್ಚು ಮಹಿಳಾ ಕಾರ್ಮಿಕರು ಗಾಯಗೊಂಡಿದ್ದು, ಅವರಲ್ಲಿ 8 ಮಂದಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿದ್ದು, ದೊಡ್ಡಬಳ್ಳಾಪುರದ ಗಾರ್ಮೆಂಟ್ಸ್ ಒಂದಕ್ಕೆ ತೆರಳುತ್ತಿದ್ದ ಈ ಮಿನಿಬಸ್ ಚಾಲಕನ ಅಜಾಗರೂಕತೆಯಿಂದಾಗಿ ಏಕಾಏಕಿ ರಸ್ತೆ ಪಕ್ಕಕ್ಕೆ ಪಲ್ಟಿಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಬಸ್‌ನಲ್ಲಿ ಸುಮಾರು 20 ಜನರು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಗಾಯಗೊಂಡ ಕಾರ್ಮಿಕರನ್ನು ಕೂಡಲೇ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗುತ್ತಿದೆ.
ತೀವ್ರ ಗಾಯಗಳಾದ ಎಂಟು ಮಂದಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗಳಿಗೆ ರವಾನಿಸಲಾಗಿದೆ. ಘಟನೆ ಕುರಿತು ಗೌರಿಬಿದನೂರು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ : 19,300 ರೂ.ಗಾಗಿ ಮೃತ ಸಹೋದರಿಯ ಅಸ್ಥಿಪಂಜರವನ್ನೇ ಬ್ಯಾಂಕ್‌ಗೆ ಹೊತ್ತು ತಂದ ವ್ಯಕ್ತಿ!



















