ಬೆಂಗಳೂರು : ಕರ್ನಾಟಕದಲ್ಲಿ ಹೈನುಗಾರಿಕೆಗೆ ಉತ್ತೇಜನ ನೀಡುವ ದಿಸೆಯಲ್ಲಿ ರಾಜ್ಯ ಸರ್ಕಾರವು ಕ್ಷೀರ ಸಂಜೀವಿನಿ ಯೋಜನೆ ಜಾರಿಗೆ ತಂದಿದೆ. ಪ್ರಸಕ್ತ ವರ್ಷದಲ್ಲಿ ಯೋಜನೆ ಅನ್ವಯ 10 ಸಾವಿರ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತದೆ. ಯೋಜನೆ ಅಡಿಯಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಬಡ್ಡಿರಹಿತವಾಗಿ 60 ಸಾವಿರ ರೂಪಾಯಿ ಸಾಲ ನೀಡಲಾಗುತ್ತದೆ. ಇದರಿಂದ ಫಲಾನುಭವಿಗಳು ಹಸು ಖರೀದಿಸಿ ಸೇರಿ ಹೈನುಗಾರಿಕೆಯ ವಿವಿಧ ಚಟುವಟಿಕೆಗಳಿಗೆ ಬಳಸಬಹುದು.
ಏನಿದು ಕ್ಷೀರ ಸಂಜೀವಿನಿ ಯೋಜನೆ?
ಕ್ಷೀರ ಸಂಜೀವಿನಿ ಯೋಜನೆಯು ಕರ್ನಾಟಕ ಸರ್ಕಾರ ಮತ್ತು ಕರ್ನಾಟಕ ಹಾಲು ಒಕ್ಕೂಟದ ಯೋಜನೆಯಾಗಿದ್ದು, ಮಹಿಳಾ ಹೈನು ಸಹಕಾರಿ ಸಂಘಗಳನ್ನು ಉತ್ತೇಜಿಸುವ ಮೂಲಕ ಹಾಗೂ ಹೈನುಗಾರಿಕೆಯ ಮೂಲಕ ಬಡ ಗ್ರಾಮೀಣ ಮಹಿಳೆಯರ ಸಬಲೀಕರಣದ ಗುರಿಯನ್ನು ಹೊಂದಿದೆ. ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಉತ್ತೇಜನ ಸೊಸೈಟಿಯ ಸಹಯೋಗವೂ ಇದಕ್ಕಿದೆ.
ಹೈನುಗಾರಿಕೆಯಲ್ಲಿ ತೊಡಗಿರುವ ಮಹಿಳೆಯರಿಗೆ ತರಬೇತಿ, ಆರ್ಥಿಕ ಬೆಂಬಲ ಮತ್ತು ಸಂಪನ್ಮೂಲಗಳನ್ನು ಯೋಜನೆಯು ಒದಗಿಸುತ್ತದೆ. ಈ ಮೂಲಕ ಅವರ ಆದಾಯ ಮತ್ತು ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ಸುಧಾರಿಸುವ ಗುರಿ ಇದೆ. ಮೊದಲ ಹಂತದ ಯೋಜನೆ 2014ರ ಏಪ್ರಿಲ್ ನಲ್ಲಿ ಪ್ರಾರಂಭವಾಯಿತು.
ಕ್ಷೀರ ಸಂಜೀವಿನಿ ಯೋಜನೆಯ ಪ್ರಮುಖ ಗುರಿ ಎಂದರೆ, ಸಮಾಜದ ಹಿಂದುಳಿದ ವರ್ಗದ ಮಹಿಳೆಯರಿಗೆ, ಅಂದರೆ ಹಿಂದುಳಿದ ಜಾತಿಗಳು, ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿಗಳು ಹಾಗೂ ಪರಿಶಿಷ್ಟ ಪಂಗಡಗಳು, ಬಿಪಿಎಲ್ ಕುಟುಂಬಗಳು ಮತ್ತು ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಆದಾಯದ ಮೂಲವನ್ನು ಒದಗಿಸುವುದು. ಯೋಜನೆಯನ್ನು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಜಾರಿಗೊಳಿಸಲಾಗಿರುವುದು ಗಮನಾರ್ಹ ಸಂಗತಿ.
ಯೋಜನೆಯ ಲಾಭ ಪಡೆಯುವುದು ಹೇಗೆ?
ಸರ್ಕಾರದ ಕ್ಷೀರ ಸಂಜೀವಿನಿ ಯೋಜನೆ ಅಡಿಯಲ್ಲಿ ಸಾಲದ ಸೌಲಭ್ಯ ಪಡೆಯಬೇಕು ಎಂದು ಬಯಸುವವರು ಸ್ಥಳೀಯವಾಗಿ ಹಾಲು ಒಕ್ಕೂಟದ ಕಾರ್ಯದರ್ಶಿಯನ್ನು ಭೇಟಿ ಮಾಡಬೇಕು. ಬಳಿಕ ಸ್ಥಳೀಯ ಮಹಿಳಾ ಹಾಲು ಒಕ್ಕೂಟದ ಸದಸ್ಯರು ಆಯಾ ಗ್ರಾಮ ಮಟ್ಟದಲ್ಲಿ ಫಲಾನುವಿಗಳನ್ನು ಆಯ್ಕೆ ಮಾಡಲಿದ್ದಾರೆ. ಆಯ್ಕೆಯಾದವರಿಗೆ ಹಂತ ಹಂತವಾಗಿ ಅನುದಾನ ಬಿಡುಗಡೆಯಾಗಲಿದೆ. ಹಣಕಾಸು ನೆರವು ಪಡೆಯುವ ಮಹಿಳೆಯರು ಹಸು ಖರೀದಿಸಿ ಹೈನುಗಾರಿಕೆ ಆರಂಭಿಸಬೇಕು. ಹಾಲು ಮಾರಾಟ ಮಾಡಿ ಆದಾಯ ಗಳಿಸಬೇಕು. ಆನಂತರ ಮಾಸಿಕ ಕಂತುಗಳಲ್ಲಿ ಪಡೆದ ಅನುದಾನವನ್ನು ಬಡ್ಡಿ ರಹಿತವಾಗಿ ಹಿಂದಿರುಗಿಸಬೇಕು ಎಂದು ತಿಳಿಸಲಾಗಿದೆ. ಯೋಜನೆ ಕುರಿತ ಹೆಚ್ಚಿನ ಮಾಹಿತಿಗೆ 77954 83792 ಸಂಪರ್ಕಿಸಿ.
ಇದನ್ನೂ ಓದಿ : ಕೇಂದ್ರ ಸರ್ಕಾರದ RITES ಸಂಸ್ಥೆಯಲ್ಲಿ 4 ಹುದ್ದೆಗಳ ನೇಮಕಾತಿ : ತಿಂಗಳಿಗೆ 1.6 ಲಕ್ಷ ರೂ. ಸ್ಯಾಲರಿ


















