ಕೋಲಾರ: ಕೋಲಾರ ಜಿಲ್ಲೆಯ ಮಾಲೂರು ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ತಾಲೂಕು ಆಸ್ಪತ್ರೆಯಲ್ಲಿ ರೋಗಿ ದಾಖಲಿಸಿಕೊಳ್ಳದೆ, ಸ್ನಾನ ಮಾಡಿಸಿ ನಾಳೆ ಕರೆತನ್ನಿ ಎಂದು ಆಸ್ಪತ್ರೆಯ ವೈದ್ಯ ಡಾ. ಪ್ರಕಾಶ್ ತಾಕೀತು ಮಾಡಿ, ಎರಡು ಗಂಟೆ ರೋಗಿಯನ್ನ ಹೊರಗೆ ನಿಲ್ಲಿಸಿದ ಆರೋಪ ಕೇಳಿ ಬಂದಿದೆ.
ತೀವ್ರ ನಿಶ್ಯಕ್ತಿಯಿಂದ ಬಳಲುತ್ತಿದ್ದ ಗೀತಾ ಎಂಬ ಮಹಿಳೆಯನ್ನ ಪೋಷಕರು ಆಸ್ಪತ್ರೆಗೆ ದಾಖಲಿಸಲು ಬಂದಿದ್ದರು. ಈ ವೇಳೆ ರೋಗಿ ಧರಿಸಿದ್ದ ಉಡುಪನ್ನು ಗಮನಿಸಿದ ವೈದ್ಯರು ಸ್ನಾನ ಮಾಡಿಸಿ ನಾಳೆ ಕರೆತನ್ನಿ ಎಂದು ಹೇಳಿದ್ದಾರೆ.
ಸತತ 2 ಗಂಟೆಗಳ ಕಾಲ ಚಿಕಿತ್ಸೆ ಸಿಗದೆ, ಆಸ್ಪತ್ರೆ ಹೊರಗೆ ಸ್ಟ್ರೆಚರ್ ಮೇಲೆ ರೋಗಿ ನರಳಾಡಿದ್ದಾರೆ. ಬಳಿಕ ರೋಗಿಯ ಪೋಷಕರ ಸಹಾಯಕ್ಕೆ ಮಾಜಿ ನಗರಸಭೆ ಸದಸ್ಯ ಭಾನುತೇಜ ದಾವಿಸಿ, ಆಸ್ಪತ್ರೆ ವೈದ್ಯರೊಂದಿಗೆ ಮಾತುಕತೆ ನಡೆಸಿದ ನಂತರ, ರೋಗಿಯನ್ನು ವೈದ್ಯರು ದಾಖಲಿಸಿಕೊಂಡಿಸಿದ್ದಾರೆ.
ರೋಗಿಯನ್ನ ಆಸ್ಪತ್ರೆಗೆ ಕರೆತಂದಾಗ, ಚಿಕಿತ್ಸೆ ನೀಡದೆ ಸ್ನಾನ ಮಾಡಿಸಿ ಕರೆತನ್ನಿ ಎಂದು ವೈದ್ಯರ ನಿರ್ಲಕ್ಷ್ಯ ಮಾಡಿದ್ದು, ಚಿಕಿತ್ಸೆ ನೀಡದೆ, 2 ಗಂಟೆ ಆಸ್ಪತ್ರೆ ಹೊರಗೆ ಕಾಯಿಸಿದ್ದಾರೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿರ್ಲಕ್ಷ್ಯ ತೋರಿದ ವೈದ್ಯರ ವಿರುದ್ದ ಶಿಸ್ತು ಕ್ರಮ ಜರುಗಿಸಬೇಕೆಂದು ನಗರಸಭೆ ಮಾಜಿ ಸದಸ್ಯ ಭಾನುತೇಜ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಯಾದಗಿರಿಯಲ್ಲಿ ಮುಖಾಮುಖಿ ಡಿಕ್ಕಿಯಾಗಿ ಹೊತ್ತಿ ಉರಿದ ಬಸ್ಸು-ಕಾರು.. 7 ಮಂದಿ ಸಜೀವ ದಹನ!



















