ಬೆಳಗಾವಿ : ಜಿಲ್ಲೆಯಲ್ಲಿ ಜಾತ್ರೆಯ ಸಂಭ್ರಮದ ನಡುವೆ ಭೀಕರ ಕೊಲೆ ಪ್ರಕರಣೊಂದು ಬೆಳಕಿಗೆ ಬಂದಿದೆ. ಕುಡಿದ ಅಮಲಿನಲ್ಲಿ ಬೇರೆಯವರ ಮನೆಯಲ್ಲಿ ಮಲಗಿದ್ದ ವಿಚಾರಕ್ಕೆ ಉಂಟಾದ ಜಗಳ ಕೊಲೆಯಲ್ಲಿ ಅಂತ್ಯಗೊಂಡಿದೆ.
ಆರೋಪಿಯೊಬ್ಬ ತಲೆ ಮೇಲೆ ಕಲ್ಲು ಎತ್ತಿಹಾಕಿ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಜಿಲ್ಲೆಯ ದೇವಗಾಂವ ಗ್ರಾಮದಲ್ಲಿ ನಡೆದಿದ್ದು, ಜನರನ್ನು ಬೆಚ್ಚಿಬೀಳಿಸಿದೆ. ಮಹಾಂತೇಶ ಹುಚ್ಚನವರ (52) ಕೊಲೆಯಾದ ದುರ್ದೈವಿ. ಮಹಾರಾಷ್ಟ್ರದಲ್ಲಿ ಕೆಲಸ ಮಾಡುತ್ತಿದ್ದ ಮಹಾಂತೇಶ, ಊರಿನ ಜಾತ್ರೆ ಹಿನ್ನೆಲೆ ಸ್ವಗ್ರಾಮಕ್ಕೆ ಬಂದಿದ್ದರು. ಜಾತ್ರೆಯ ಸಂಭ್ರಮದ ಮಧ್ಯೆ ಈ ದುರ್ಘಟನೆ ಸಂಭವಿಸಿದೆ.
ಮದ್ಯದ ಅಮಲಿನಲ್ಲಿದ್ದ ಮಹಾಂತೇಶ, ಆರೋಪಿಯಾದ ಪ್ರಕಾಶ ಕಾಳಾರ (30) ಮನೆಯಲ್ಲಿ ಹೋಗಿ ಮಲಗಿದ್ದಾನೆ ಎನ್ನಲಾಗಿದೆ. ಇದೇ ವಿಚಾರಕ್ಕೆ ಇಬ್ಬರ ಮಧ್ಯೆ ವಾಗ್ವಾದ ಶುರುವಾಗಿದೆ. ಮಾತಿನ ಚಕಮಕಿ ಬಳಿಕ ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಸಿಟ್ಟಿಗೆದ್ದ ಪ್ರಕಾಶ ಕಾಳಾರ, ಮಹಾಂತೇಶ ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಗಂಭೀರವಾಗಿ ಗಾಯಗೊಂಡ ಮಹಾಂತೇಶ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಕೊಲೆ ಮಾಡಿದ ಬಳಿಕ ಆರೋಪಿ ಶವವನ್ನು ಮನೆಯಿಂದ ಹೊರತೆಗೆದು ರಸ್ತೆಯಲ್ಲಿ ಬಿಸಾಕಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಬೆಳಗ್ಗೆ ಸ್ಥಳೀಯರು ರಕ್ತದ ಮಡುವಿನಲ್ಲಿ ಶವ ಕಂಡು ಬೆಚ್ಚಿಬಿದ್ದಿದ್ದು, ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಎಸ್ಪಿ ರಾಮರಾಜನ್, ಹಿರಿಯ ಅಧಿಕಾರಿಗಳು, ಡಿವೈಎಸ್‌ಪಿ ವೀರಯ್ಯ ಹಿರೇಮಠ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ತ್ವರಿತ ಕಾರ್ಯಾಚರಣೆ ನಡೆಸಿ ಆರೋಪಿ ಪ್ರಕಾಶ ಕಾಳಾರನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಪ್ರಕರಣ ಸಂಬಂಧ ಕಿತ್ತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ : ಸಲೂನ್‌ಗೆ ಬಂದು ಹೇರ್ ಕಟ್ ಮಾಡಿಸಿಕೊಂಡ ಮಂಗಣ್ಣ.. ವಿಡಿಯೋ ವೈರಲ್!



















