ತುಮಕೂರು : ಜಿಲ್ಲೆಯಲ್ಲಿ ಮೂರು ವರ್ಷದ ಪುಟ್ಟ ಮಗು ಸಾವಿನ ದವಡೆಯಿಂದ ಬದುಕಿ ಬಂದ ಘಟನೆ ನಡೆದಿದೆ. ಮನೆಯ ಸಮೀಪದಲ್ಲಿದ್ದ ನೀರಿನ ಸಂಪಿಗೆ ಬಿದ್ದು ಉಸಿರುಗಟ್ಟಿದ್ದ ಮಗುವನ್ನು ವೈದ್ಯರು ಸಮಯಪ್ರಜ್ಞೆ ಹಾಗೂ ತಕ್ಷಣದ ಚಿಕಿತ್ಸೆಯಿಂದ ಬದುಕುಳಿಸಿದ್ದು, ಗ್ರಾಮಸ್ಥರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಕಳ್ಳಂಬೆಳ್ಳ ಹೋಬಳಿಯ ಯಲದಬಾಗಿ ಅಂಡೇ ಚಿಕ್ಕನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಬಸವರಾಜು ಎಂಬ ಮೂರು ವರ್ಷದ ಮಗು ಮನೆಯ ಹತ್ತಿರ ಆಟವಾಡುತ್ತಿದ್ದ ವೇಳೆ ಅಜಾಗರೂಕತೆಯಿಂದ ನೀರಿನ ಸಂಪಿಗೆ ಬಿದ್ದಿತ್ತು. ಕೆಲಕಾಲ ನೀರಿನೊಳಗೇ ಇದ್ದ ಪರಿಣಾಮ ಮಗುವಿಗೆ ಉಸಿರಾಟದ ತೊಂದರೆ ಉಂಟಾಗಿ, ಸಾವು-ಬದುಕಿನ ನಡುವೆ ಹೋರಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ತಂದೆ-ತಾಯಿ ತಕ್ಷಣವೇ ಮಗುವನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಆ ವೇಳೆ ಮಗುವಿನ ಸ್ಥಿತಿ ಗಂಭೀರವಾಗಿದ್ದು, ವೈದ್ಯ ಡಾ. ರಮೇಶ್ ಸಮಯಪ್ರಜ್ಞೆಯಿಂದ ತಕ್ಷಣ ಚಿಕಿತ್ಸೆ ಆರಂಭಿಸಿದ್ದಾರೆ. ಸೂಕ್ತ ಚಿಕಿತ್ಸೆ ಹಾಗೂ ವೈದ್ಯರ ತುರ್ತು ಕ್ರಮದಿಂದ ಮಗು ಬಸವರಾಜು ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಸಾವಿನ ದವಡೆಯಿಂದ ಬದುಕಿ ಬಂದ ಮಗುವನ್ನು ನೋಡಿ ತಂದೆ-ತಾಯಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಹಾಗೆಯೇ ಕಣ್ಣೀರಿಟ್ಟೇ ವೈದ್ಯರಿಗೆ ಧನ್ಯವಾದ ತಿಳಿಸಿರುವ ಪೋಷಕರು, “ಡಾಕ್ಟರ್ ದೇವರಂತೆ ಬಂದು ನಮ್ಮ ಮಗುವಿನ ಜೀವ ಉಳಿಸಿದರು” ಎಂದು ಭಾವುಕರಾಗಿದ್ದಾರೆ.
ಮೂರು ವರ್ಷದ ಮಗುವಿನ ಜೀವ ಉಳಿಸಿದ ವೈದ್ಯ ಡಾ. ರಮೇಶ್ ಅವರ ಕಾರ್ಯಕ್ಕೆ ಗ್ರಾಮಸ್ಥರು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದು, ವೈದ್ಯರ ಸಮಯಪ್ರಜ್ಞೆ ಮತ್ತು ಮಾನವೀಯತೆ ಶ್ಲಾಘನೀಯ ಎಂದು ಹೇಳಿದ್ದಾರೆ. ಘಟನೆ ಕಳ್ಳಂಬೆಳ್ಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಇದನ್ನೂ ಓದಿ : ಎಸ್ಟೇಟ್ನಲ್ಲೇ ಬೀಡುಬಿಟ್ಟ ಕಾಡಾನೆಗಳ ಹಿಂಡು : ಸ್ಥಳೀಯರಲ್ಲಿ ಹೆಚ್ಚಿದ ಭೀತಿ!



















