ಚಿಕ್ಕಮಗಳೂರು : ಜಿಲ್ಲೆಯಲ್ಲಿ ಕಾಡಾನೆಗಳ ಉಪಟಳ ಮಿತಿಮೀರಿದ್ದು, ಸ್ಥಳೀಯರು ಹಾಗೂ ಎಸ್ಟೇಟ್ ಕಾರ್ಮಿಕರು ಭಯಭೀತರಾಗಿದ್ದಾರೆ. ಕಾಡಾನೆಗಳ ಹಿಂಡು ಎಸ್ಟೇಟ್ ಪ್ರದೇಶದಲ್ಲೇ ಬೀಡು ಬಿಟ್ಟಿರುವ ಪರಿಣಾಮ ಗ್ರಾಮಸ್ಥರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಚಿಕ್ಕಮಗಳೂರು ತಾಲೂಕಿನ ಕಡವಂತಿ ಗ್ರಾಮದ ವಡ್ಡಿಗುಡ್ಡ ಎಸ್ಟೇಟ್ ಪ್ರದೇಶದಲ್ಲಿ ಕಾಡಾನೆಗಳ ಗುಂಪು ಕಾಣಿಸಿಕೊಂಡಿದ್ದು, ಜನರು ಭಯದಿಂದ ಓಡಾಡುವ ಪರಿಸ್ಥಿತಿ ಎದುರಾಗಿದೆ.
ಕಡವಂತಿ, ಬಿಳಗೊಳ, ಹ್ಯಾರಂಬಿಪುರ, ಪುರ, ಮಲ್ಲಿಗೆಖಾನ್ ಹಾಗೂ ಬೇರಣಗೋಡು ಸುತ್ತಮುತ್ತ ಕಾಡಾನೆಗಳ ಸಂಚಾರ ಹೆಚ್ಚಾಗಿದ್ದು, ರಾತ್ರಿ ವೇಳೆ ಗ್ರಾಮಗಳಿಗೆ ನುಗ್ಗುತ್ತಿರುವ ಘಟನೆಗಳು ಹೆಚ್ಚುತ್ತಿವೆ. ಎಸ್ಟೇಟ್ ಪ್ರದೇಶದಲ್ಲಿ ಕಾರ್ಮಿಕರು ಕೆಲಸ ಮಾಡಲು ಹೆದರುತ್ತಿದ್ದು, ಕಾಡಾನೆಗಳ ಹಾವಳಿಯಿಂದ ದಿನನಿತ್ಯದ ಜೀವನವೇ ಅಸ್ತವ್ಯಸ್ತವಾಗಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಅರಣ್ಯ ಇಲಾಖೆ ತಕ್ಷಣ ಕ್ರಮ ಕೈಗೊಂಡು ಕಾಡಾನೆಗಳನ್ನು ಸ್ಥಳಾಂತರ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಈ ಘಟನೆ ಬಾಳೆಹೊನ್ನೂರು ವಲಯ ಅರಣ್ಯ ವ್ಯಾಪ್ತಿಯಲ್ಲಿ ನಡೆದಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಕಾಡಾನೆಗಳ ಚಲನವಲನದ ಮೇಲೆ ನಿಗಾ ವಹಿಸಿದ್ದಾರೆ.
ಇದನ್ನೂ ಓದಿ : ಬೆಂಗಳೂರು : ಹಳೇ ಲವ್ವರ್ ಜೊತೆ ಓಡಾಡಿದ್ದಕ್ಕೆ ಹೊಸ ಪ್ರೇಮಿಯಿಂದ ಅಟ್ಯಾಕ್!



















