ಬೀದರ್ : ಬೀದರ್‌ನ ಬ್ರಿಮ್ಸ್ ಆಸ್ಪತ್ರೆಯಲ್ಲಿ ನಾಗರಿಕ ಸಮಾಜವೇ ತಲೆತಗ್ಗಿಸುವಂತಹ ಅಮಾನವೀಯ ಘಟನೆ ಬೆಳಕಿಗೆ ಬಂದಿದ್ದು, ಆಸ್ಪತ್ರೆ ಸಿಬ್ಬಂದಿಯೊಬ್ಬ ಸತ್ತ ಮಹಿಳೆಯರ ಬೆತ್ತಲೆ ಫೋಟೋಗಳನ್ನು ತನ್ನ ಮೊಬೈಲ್‌ನಲ್ಲಿ ಕ್ಲಿಕ್ಕಿಸಿಕೊಂಡಿದ್ದಾನೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಘಟನೆ ವೈದ್ಯಕೀಯ ಕ್ಷೇತ್ರದಲ್ಲೇ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದು, ಮೃತರ ಗೌರವ ಮತ್ತು ವೈದ್ಯಕೀಯ ಗೌಪ್ಯತೆಯ ಮೇಲೆಯೇ ದೊಡ್ಡ ಪ್ರಶ್ನೆ ಎಬ್ಬಿಸಿದೆ.
ಬ್ರಿಮ್ಸ್ ಆಸ್ಪತ್ರೆಯ ಶವಾಗಾರ ಕೋಣೆಯಲ್ಲಿ ಕೆಲಸ ಮಾಡುತ್ತಿದ್ದ ಅಟೆಂಡರ್ ಮುನೀರ್ ಅಹ್ಮದ್ ಎಂಬಾತನೇ ಈ ಹೀನ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಪಿಎಂಇ ಮಾಡುವ ವೇಳೆಯಲ್ಲಿ ಯಾವುದೇ ಅನುಮತಿ ಪಡೆಯದೇ ಸತ್ತ ಮಹಿಳೆಯರ ಶವಗಳ ಮೇಲಿನ ಬಟ್ಟೆ ತೆಗೆದು ಬೆತ್ತಲೆ ಫೋಟೋಗಳನ್ನು ತನ್ನ ಮೊಬೈಲ್‌ನಲ್ಲಿ ಕ್ಲಿಕ್ಕಿಸಿಕೊಳ್ಳುತ್ತಿದ್ದ ಎಂದು ಆರೋಪಿಸಲಾಗಿದೆ. ಮಹಿಳೆಯರ ಬೆತ್ತಲೆ ಫೋಟೋಗಳನ್ನು ಮೊಬೈಲ್‌ನಲ್ಲಿ ಸಂಗ್ರಹಿಸಿಕೊಂಡಿದ್ದಾನೆ ಎಂಬ ಮಾಹಿತಿ ಹೊರಬಂದಿದ್ದು, ಪ್ರಕರಣ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಂಡಿದೆ.
ಆರೋಪಿ ಮುನೀರ್ ಅಹ್ಮದ್‌ನ ಕೃತ್ಯದಿಂದ ಮೃತ ಮಹಿಳೆಯರ ಗೌರವಕ್ಕೆ ಧಕ್ಕೆ ಉಂಟಾಗಿದ್ದು, ಕುಟುಂಬಸ್ಥರ ಮಾನಸಿಕ ಸ್ಥಿತಿಗೂ ಭಾರೀ ಆಘಾತ ಉಂಟಾಗಿದೆ. ವೈದ್ಯಕೀಯ ವಲಯದಲ್ಲಿ ಪಾಲಿಸಬೇಕಾದ ಗೌಪ್ಯತೆ ಮತ್ತು ನೈತಿಕ ಮೌಲ್ಯಗಳನ್ನು ಸಂಪೂರ್ಣ ಉಲ್ಲಂಘಿಸಿರುವ ಘಟನೆ ಇದಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿಬ್ಬಂದಿಯ ಈ ಹೀನ ಕೃತ್ಯ ಬೆಳಕಿಗೆ ಬರುತ್ತಿದ್ದಂತೆ ಬ್ರಿಮ್ಸ್ ಆಸ್ಪತ್ರೆ ಮುಖ್ಯಸ್ಥ ಡಾ. ಮೋಸಿನ್ ಉಲ್ ಹಕ್ ನ್ಯೂ ಟೌನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು ಕಲಂ 301 ಹಾಗೂ 62 ಬಿಎನ್‌ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಈ ಘಟನೆ ಬಳಿಕ ಬ್ರಿಮ್ಸ್ ಆಸ್ಪತ್ರೆಯ ಆಡಳಿತದ ಮೇಲೂ ಪ್ರಶ್ನೆಗಳು ಕೇಳಿಬರುತ್ತಿವೆ. ಬದುಕಿದ್ದಾಗಲೇ ಚಿಕಿತ್ಸೆಗಾಗಿ ಪರದಾಡುವ ರೋಗಿಗಳಿಗೆ ಸರಿಯಾದ ಸೌಲಭ್ಯ ಸಿಗದ ಬ್ರಿಮ್ಸ್ ಆಸ್ಪತ್ರೆಯಲ್ಲಿ, ಸತ್ತ ಮೇಲೂ ಶವಗಳಿಗೆ ಗೌರವ ಸಿಗುತ್ತಿಲ್ಲ ಎಂಬ ಆಕ್ರೋಶ ವ್ಯಕ್ತವಾಗುತ್ತಿದೆ. ಮಹಿಳಾ ನಿರ್ದೇಶಕಿ ಇರುವ ಆಸ್ಪತ್ರೆಯಲ್ಲೇ ಇಂತಹ ಅಮಾನವೀಯ ಕೃತ್ಯ ನಡೆದಿರುವುದು ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.
ಇದನ್ನೂ ಓದಿ : ಸಾವನ್ನೇ ಗೆದ್ದು ಬಂದ ಕಂದಮ್ಮ.. ವೈದ್ಯರ ಸಮಯ ಪ್ರಜ್ಞೆಯಿಂದ ಬದುಕುಳಿದ 3 ವರ್ಷದ ಮಗು!



















