ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ವಿರೋಧ ಪಕ್ಷಗಳ ನಾಯಕರು ನಡೆಸುತ್ತಿದ್ದ ದಿಢೀರ್ ಪ್ರತಿಭಟನೆ ವೇಳೆ ತೀವ್ರ ಹೈಡ್ರಾಮಾ ನಡೆದಿದ್ದು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಪೊಲೀಸರು ವಶಕ್ಕೆ ಪಡೆಯುತ್ತಿದ್ದ ಸಂದರ್ಭದಲ್ಲಿ ಕರ್ತವ್ಯನಿರತ ಪೊಲೀಸ್ ಸಿಬ್ಬಂದಿಯೊಬ್ಬರ ಮೇಲೆ ಪ್ರತಿಭಟನಾಕಾರರು ಬರ್ಬರವಾಗಿ ಹಲ್ಲೆ ನಡೆಸಿದ್ದಾರೆ.ದೆಹಲಿ ಪೊಲೀಸರ ಸಂಸತ್ ಪೊಲೀಸ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾನ್‌ಸ್ಟೆಬಲ್ ಅನ್ಕಿತ್ ಕಸಾನಾ ಎಂಬುವವರೇ ಹಲ್ಲೆಗೊಳಗಾದ ನತದೃಷ್ಟ. ರಾಹುಲ್ ಗಾಂಧಿ ಬಂಧನ ಖಂಡಿಸಿ ರೊಚ್ಚಿಗೆದ್ದ ಮೂವತ್ತಕ್ಕೂ ಹೆಚ್ಚು ಮಂದಿಯ ಗುಂಪು ತಮ್ಮನ್ನು ಸುತ್ತುವರಿದು, ಸಮವಸ್ತ್ರ ಹರಿದು, ಉಗುರುಗಳಿಂದ ಪರಚಿ, ಕೈಗೆ ಕಚ್ಚಿ ಮಾಂಸ ಕಿತ್ತುಬರುವಂತೆ ಹಲ್ಲೆ ನಡೆಸಿದೆ ಎಂದು ಕಾನ್‌ಸ್ಟೆಬಲ್ ಗಂಭೀರ ಆರೋಪ ಮಾಡಿದ್ದಾರೆ.
ರಾಹುಲ್ ಗಾಂಧಿ ವಶಕ್ಕೆ ಪಡೆಯುವಾಗ ಭುಗಿಲೆದ್ದ ಆಕ್ರೋಶ
ಚುನಾವಣಾ ಆಯೋಗದ ಕಾರ್ಯವೈಖರಿ, ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿನ ಲೋಪ ಸೇರಿದಂತೆ ವಿವಿಧ ವಿಚಾರಗಳನ್ನು ಖಂಡಿಸಿ ಬುಧವಾರ ದೆಹಲಿಯ ಜಂತರ್ ಮಂತರ್ ಸಮೀಪ ಇಂಡಿಯಾ ಮೈತ್ರಿಕೂಟದ ಸಂಸದರು ಮತ್ತು ಬೆಂಬಲಿಗರು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದರು. ಈ ವೇಳೆ ಪರಿಸ್ಥಿತಿ ನಿಯಂತ್ರಿಸಲು ಮತ್ತು ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಮುಂದಾಗಿದ್ದಾರೆ. ಇದೇ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಪೊಲೀಸರು ವಶಕ್ಕೆ ಪಡೆಯಲು ಯತ್ನಿಸಿದಾಗ ಸ್ಥಳದಲ್ಲಿ ತೀವ್ರ ಗೊಂದಲ, ನೂಕುನುಗ್ಗಲು ಹಾಗೂ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ಜನದಟ್ಟಣೆಯನ್ನು ನಿಯಂತ್ರಿಸುವ ಮತ್ತು ಭದ್ರತೆ ಒದಗಿಸುವ ಕರ್ತವ್ಯದಲ್ಲಿದ್ದ ಕಾನ್‌ಸ್ಟೆಬಲ್ ಅನ್ಕಿತ್ ಕಸಾನಾ ಅವರ ಪ್ರಕಾರ, ರಾಹುಲ್ ಗಾಂಧಿ ಅವರನ್ನು ಪೊಲೀಸ್ ವಾಹನಕ್ಕೆ ಹತ್ತಿಸುವ ಸಂದರ್ಭದಲ್ಲಿ ಏಕಾಏಕಿ ರೊಚ್ಚಿಗೆದ್ದ ಪ್ರತಿಭಟನಾಕಾರರ ಗುಂಪೊಂದು ಅವರ ಮೇಲೆ ಮುಗಿಬಿದ್ದಿದೆ. ಮಹಿಳೆಯರು ಮತ್ತು ಹಿರಿಯ ನಾಗರಿಕರು ಸೇರಿದಂತೆ ಮೂವತ್ತರಿಂದ ಮೂವತ್ತೈದು ಜನರಿದ್ದ ಗುಂಪು ಈ ದಾಳಿ ನಡೆಸಿದೆ.
ಸಮವಸ್ತ್ರ ಹರಿದು, ಉಗುರಿನಿಂದ ಪರಚಿ ಕೃತ್ಯ!
ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಸಾನಾ, ತಮ್ಮ ಮೇಲಾದ ಭೀಕರ ದಾಳಿಯನ್ನು ಮಾಧ್ಯಮಗಳ ಮುಂದೆ ಬಿಚ್ಚಿಟ್ಟಿದ್ದಾರೆ. ಪ್ರತಿಭಟನಾಕಾರರು ತಮ್ಮನ್ನು ಹಿಂದಿನಿಂದ ಎಳೆದಾಡಿ, ಕುತ್ತಿಗೆ ಪಟ್ಟಿ ಹಿಡಿದು ಸಮವಸ್ತ್ರವನ್ನು ಸಂಪೂರ್ಣವಾಗಿ ಹರಿದುಹಾಕಿದರು. ಅಷ್ಟಕ್ಕೇ ಸುಮ್ಮನಾಗದ ಕೆಲವರು ಉಗುರುಗಳಿಂದ ಮುಖ ಹಾಗೂ ಕುತ್ತಿಗೆಯ ಭಾಗಕ್ಕೆ ಪರಚಿದ್ದಾರೆ. ಈ ಪೈಕಿ ಒಬ್ಬ ವ್ಯಕ್ತಿ ತಮ್ಮ ಕೈಗೆ ಬಲವಾಗಿ ಕಚ್ಚಿದ್ದು, ಮಾಂಸದ ತುಂಡನ್ನೇ ಕಿತ್ತುಕೊಳ್ಳುವ ಮಟ್ಟಿಗೆ ಪೈಶಾಚಿಕವಾಗಿ ವರ್ತಿಸಿದ್ದಾನೆ ಎಂದು ಅವರು ಅಳಲು ತೋಡಿಕೊಂಡಿದ್ದಾರೆ. ‘ನಾನು ಕೇವಲ ನನ್ನ ಕರ್ತವ್ಯ ನಿರ್ವಹಿಸುತ್ತಿದ್ದೇನೆ, ದಯವಿಟ್ಟು ನನ್ನನ್ನು ಬಿಟ್ಟುಬಿಡಿ’ ಎಂದು ಪದೇಪದೇ ಅಂಗಲಾಚಿ ಬೇಡಿಕೊಂಡರೂ ಆ ಗುಂಪು ಕರುಣೆ ತೋರದೆ ಹಲ್ಲೆ ಮುಂದುವರಿಸಿತು. ಕೊನೆಗೆ ತಮ್ಮ ಸಹೋದ್ಯೋಗಿಗಳು ಸ್ಥಳಕ್ಕೆ ಧಾವಿಸಿ ಗುಂಪನ್ನು ಚದುರಿಸಿ ತಮ್ಮನ್ನು ರಕ್ಷಿಸಿದರು ಎಂದು ವಿವರಿಸಿದ್ದಾರೆ.
ಆಸ್ಪತ್ರೆಗೆ ದಾಖಲು, ಎಫ್‌ಐಆರ್‌ಗೆ ಸಿದ್ಧತೆ
ಹಲ್ಲೆಯಿಂದ ಗಾಯಗೊಂಡಿರುವ ಕಾನ್‌ಸ್ಟೆಬಲ್ ಅನ್ಕಿತ್ ಕಸಾನಾ ಅವರನ್ನು ತಕ್ಷಣವೇ ದೆಹಲಿಯ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದೆ. ವೈದ್ಯಕೀಯ ವರದಿ ಹಾಗೂ ಘಟನಾ ಸ್ಥಳದ ವಿಡಿಯೋ ತುಣುಕುಗಳ ಪರಿಶೀಲನೆಯ ನಂತರ ಹಲ್ಲೆಕೋರರ ವಿರುದ್ಧ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ. ಆದರೆ, ಈ ಘಟನೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರ ಉನ್ನತ ಅಧಿಕಾರಿಗಳು ಇನ್ನೂ ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ.
ಶಾಂತಿಯುತವಾಗಿ ನಡೆಯಬೇಕಿದ್ದ ಪ್ರತಿಭಟನೆ ಹಿಂಸಾರೂಪ ಪಡೆದುಕೊಂಡಿದ್ದು, ಕರ್ತವ್ಯನಿರತ ಪೊಲೀಸ್ ಮೇಲೆ ನಡೆದಿರುವ ಈ ಹಲ್ಲೆ ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ :‘ನನಗೆ 4–5 ಬಾರಿ ನೊಬೆಲ್ ಸಿಗಬೇಕಿತ್ತು’ ; ಮತ್ತೊಮ್ಮೆ ಶಾಂತಿ ಪ್ರಶಸ್ತಿಗೆ ಬೇಡಿಕೆ ಇಟ್ಟ ಅಮೆರಿಕದ ಅಧ್ಯಕ್ಷ!


















