ಬೆಂಗಳೂರು: ಕೇಂದ್ರ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರವು ದಸರಾ ಅಥವಾ ದೀಪಾವಳಿ ಸಂದರ್ಭದಲ್ಲಿ ತುಟ್ಟಿ ಭತ್ಯೆ ಘೋಷಿಸುತ್ತದೆ. ಆದರೆ, ಈ ಬಾರಿ ಕೇಂದ್ರದ ನೌಕರರಿಗೆ ಹಬ್ಬಕ್ಕೂ ಮೊದಲೇ ತುಟ್ಟಿಭತ್ಯೆ ಲಭಿಸುವ, ಆ ಮೂಲಕ ಹಬ್ಬದ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸುವ ಸಾಧ್ಯತೆ ಇದೆ. ಹೌದು, ಕೇಂದ್ರ ನೌಕರರ ತುಟ್ಟಿ ಭತ್ಯೆ ಹೆಚ್ಚಳದ ಘೋಷಣೆಯನ್ನು ಶೀಘ್ರವೇ ಮಾಡಬೇಕು ಎಂದು ನೌಕರರ ಒಕ್ಕೂಟವು ಸರ್ಕಾರಕ್ಕೆ ಮನವಿ ಮಾಡಿದೆ. ಸರ್ಕಾರ ಇದನ್ನು ಪರಿಗಣಿಸಿದರೆ ಶೀಘ್ರವೇ ತುಟ್ಟಿ ಭತ್ಯೆ ಸಿಗಲಿದೆ.
ಕೇಂದ್ರ ಸರ್ಕಾರಿ ನೌಕರರ ಒಕ್ಕೂಟವು ಹಣಕಾಸು ಸಚಿವಾಲಯಕ್ಕೆ ಪತ್ರ ಬರೆದು, ಗ್ರಾಹಕ ಬೆಲೆ ಸೂಚ್ಯಂಕದ ದತ್ತಾಂಶ ಆಧರಿಸಿ 2026ರ ಜುಲೈ ತುಟ್ಟಿಭತ್ಯೆ ಹೆಚ್ಚಳದ ಪ್ರಕ್ರಿಯೆಯನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕೆಂದು ಕೋರಿದೆ. ಪ್ರಸ್ತುತ ಜನವರಿ 2026ರಿಂದ ಜಾರಿಗೆ ಬರುವಂತೆ ಡಿಎ ಪ್ರಮಾಣವು ಶೇ.60ರಷ್ಟಿದೆ. ಹಣದುಬ್ಬರವನ್ನು ಸರಿದೂಗಿಸಲು ವರ್ಷಕ್ಕೆ ಎರಡು ಬಾರಿ (ಜನವರಿ ಮತ್ತು ಜುಲೈನಲ್ಲಿ) ಡಿಎ ಪರಿಷ್ಕರಿಸಲಾಗುತ್ತದೆ.
ಹಣದುಬ್ಬರ ದತ್ತಾಂಶದ ಆಧಾರದ ಮೇಲೆ ಇದು ಶೇ.64ಕ್ಕೆ ಏರಿಕೆಯಾಗುವ ನಿರೀಕ್ಷೆಯಿದೆ. ಹಬ್ಬದ ಸೀಸನ್, ಮಕ್ಕಳ ಶಿಕ್ಷಣ ಹಾಗೂ ದೈನಂದಿನ ಗೃಹೋಪಯೋಗಿ ಖರ್ಚುಗಳು ಹೆಚ್ಚಿರುವ ಈ ಸಮಯದಲ್ಲಿ ನೌಕರರಿಗೆ ಈ ಹೆಚ್ಚಳವು ಆರ್ಥಿಕವಾಗಿ ಬಹಳ ಮುಖ್ಯವಾಗಿದೆ ಎಂದು ಒಕ್ಕೂಟವು ತಿಳಿಸಿದೆ. ಆದಾಗ್ಯೂ ಸರ್ಕಾರ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಕೇಂದ್ರ ಸರ್ಕಾರಿ ನೌಕರರು 8ನೇ ವೇತನ ಆಯೊಗದ ಶಿಫಾರಸುಗಳ ಜಾರಿಗಾಗಿ ಕಾಯುತ್ತಿದ್ದಾರೆ. ಇದರ ಮಧ್ಯೆಯೇ, ಕೇಂದ್ರ ಸರ್ಕಾರವು ತುಟ್ಟಿಭತ್ಯೆಯನ್ನು ಹೆಚ್ಚಿಸುವ ಕುರಿತು ಘೋಷಣೆ ಮಾಡಿದರೆ ಅದು ನೌಕರರ ಪಾಲಿಗೆ ಮಹತ್ವದ ಸಂಗತಿಯಾಗಲಿದೆ. ಕಳೆದ ಬಾರಿ ಕೇಂದ್ರ ಸರ್ಕಾರವು ಶೇ.2ರಷ್ಟು ತುಟ್ಟಿಭತ್ಯೆಯನ್ನು ಏರಿಕೆ ಮಾಡಿತ್ತು.



















