ನವದೆಹಲಿ: ಹೊಸ ಮತದಾರರ ನೋಂದಣಿಗೆ ಬಳಸಲಾಗುವ ಆನ್ಲೈನ್ ಫಾರ್ಮ್ 6 ಅನ್ನು ಅಕ್ರಮವಾಗಿ ತಿದ್ದುಪಡಿ ಮಾಡಲಾಗಿದೆ ಎಂದು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಡಿಜಿಟಲ್ ಮೂಲಸೌಕರ್ಯ ಮತ್ತು ಇಸಿಐನೆಟ್ (ECINET) ಪೋರ್ಟಲ್ ನಿರ್ವಹಿಸುವ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (TCS) ಸಂಸ್ಥೆಗೆ ಈ ಬದಲಾವಣೆ ಮಾಡಲು ಚುನಾವಣಾ ಆಯೋಗದಲ್ಲಿ ಯಾರು ಆದೇಶ ನೀಡಿದ್ದರು ಎಂದು ಅವರು ಪ್ರಶ್ನಿಸಿದ್ದಾರೆ.
ಸಾಮಾನ್ಯವಾಗಿ ಹೊಸ ಮತದಾರರ ಸೇರ್ಪಡೆ ಹಾಗೂ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಸಮಯದಲ್ಲಿ ಫಾರ್ಮ್ 6 ಅನ್ನು ಬಳಸಲಾಗುತ್ತದೆ. ಈ ಫಾರ್ಮ್ಗೆ ಪೂರ್ವಾಪರ ಪರಿಶೀಲನೆಗಾಗಿ ಹೆಚ್ಚುವರಿ ಮುಚ್ಚಳಿಕೆಯನ್ನು (Declaration) ಸೇರಿಸಲಾಗಿತ್ತು. ಈ ಕುರಿತು ತಮ್ಮ ಎಕ್ಸ್ (X) ಖಾತೆಯಲ್ಲಿ ಕಳವಳ ವ್ಯಕ್ತಪಡಿಸಿರುವ ರಾಹುಲ್ ಗಾಂಧಿ, “ಚುನಾವಣಾ ಆಯೋಗದ ಆಯುಕ್ತರೇ ದಾಖಲಿಸಿರುವಂತೆ ಆನ್ಲೈನ್ ಫಾರ್ಮ್ 6 ಅನ್ನು ಅಕ್ರಮವಾಗಿ ತಿದ್ದುಪಡಿ ಮಾಡಲಾಗಿದೆ. ಟಿಸಿಎಸ್ ಸಂಸ್ಥೆಗೆ ಈ ಬದಲಾವಣೆ ಮಾಡಲು ಇಸಿಐನಲ್ಲಿ ಯಾರು ಸೂಚಿಸಿದರು? ಟಿಸಿಎಸ್ನಿಂದ ಯಾರು ಇದಕ್ಕೆ ಸಹಿ ಹಾಕಿದರು ಮತ್ತು ಅವರ ಮೇಲೆ ಏನಾದರೂ ಒತ್ತಡವಿತ್ತೇ?” ಎಂದು ಸಾಲು ಸಾಲು ಪ್ರಶ್ನೆಗಳನ್ನು ಕೇಳಿದ್ದಾರೆ.
ಆಯುಕ್ತರ ಅಸಮ್ಮತಿ
ಇಸಿಐನೆಟ್ ಪೋರ್ಟಲ್ನಲ್ಲಿ ಫಾರ್ಮ್ 6 ಗೆ ಹೆಚ್ಚುವರಿ ಮುಚ್ಚಳಿಕೆ ಸೇರಿಸಿರುವುದಕ್ಕೆ ಚುನಾವಣಾ ಆಯುಕ್ತರಾದ ಸುಖ್ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು ಎಂದು ‘ದಿ ಇಂಡಿಯನ್ ಎಕ್ಸ್ಪ್ರೆಸ್’ ತನಿಖಾ ವರದಿ ಹೇಳಿದೆ. ಅರ್ಜಿದಾರರ ಅಥವಾ ಅವರ ಪೋಷಕರ ಹೆಸರು ಹಿಂದಿನ ಎಸ್ಐಆರ್ ಮತದಾರರ ಪಟ್ಟಿಯಲ್ಲಿದೆಯೇ ಎಂಬುದನ್ನು ತಿಳಿಯಲು ಈ ಡಿಕ್ಲರೇಷನ್ ಅನ್ನು ಸೇರಿಸಲಾಗಿತ್ತು. ಆದರೆ, ನಿಯಮಗಳ ಪ್ರಕಾರ ಚುನಾವಣಾ ನಿಯಮಾವಳಿಗಳು 1960ರ ಅಡಿಯಲ್ಲಿ ನಿಗದಿಪಡಿಸಿದ ನಮೂನೆಯನ್ನು ಕಾನೂನು ಸಚಿವಾಲಯದ ಅನುಮತಿಯಿಲ್ಲದೆ ತಿದ್ದುಪಡಿ ಮಾಡಲು ಆಯೋಗಕ್ಕೆ ಅಧಿಕಾರವಿಲ್ಲ. ಹೀಗಾಗಿ ಈ ಕ್ರಮವು ಆಯೋಗದ ವ್ಯಾಪ್ತಿಯನ್ನು ಮೀರಿದ್ದಾಗಿದೆ ಎಂದು ಇಬ್ಬರೂ ಆಯುಕ್ತರು ತಮ್ಮ ಅಸಮ್ಮತಿ ಟಿಪ್ಪಣಿಯಲ್ಲಿ ಉಲ್ಲೇಖಿಸಿದ್ದರು.
ಚುನಾವಣಾ ಆಯೋಗದ ಸ್ಪಷ್ಟನೆ
ಈ ವಿವಾದಕ್ಕೆ ಸ್ಪಷ್ಟನೆ ನೀಡಿರುವ ಚುನಾವಣಾ ಆಯೋಗ, ಶಾಸನಬದ್ಧ ಫಾರ್ಮ್ 6 ಗೆ ಯಾವುದೇ ಮೂಲಭೂತ ಬದಲಾವಣೆ ಮಾಡಿಲ್ಲ, ಬದಲಿಗೆ ಎಸ್ಐಆರ್ ಪ್ರಕ್ರಿಯೆಯ ಭಾಗವಾಗಿ ಅನುಬಂಧ-ಡಿ (Annexures-D) ಅನ್ನು ಮಾತ್ರ ತಾತ್ಕಾಲಿಕವಾಗಿ ಲಗತ್ತಿಸಲಾಗಿತ್ತು ಎಂದು ತಿಳಿಸಿದೆ. ಎಸ್ಐಆರ್ ಪ್ರಕ್ರಿಯೆ ಪೂರ್ಣಗೊಂಡಿರುವ ರಾಜ್ಯಗಳಲ್ಲಿ ಈ ಹೆಚ್ಚುವರಿ ನಿಯಮವನ್ನು ಇಸಿಐನೆಟ್ ಪೋರ್ಟಲ್ನಿಂದ ತೆರವುಗೊಳಿಸಲಾಗಿದ್ದು, ಸೆಪ್ಟೆಂಬರ್ 30 ರಿಂದ ಇದು ಜಾರಿಗೆ ಬಂದಿದೆ. ಪ್ರಸ್ತುತ ಎಸ್ಐಆರ್ ನಡೆಯುತ್ತಿರುವ 13 ರಾಜ್ಯಗಳಲ್ಲಿ ಮಾತ್ರ ಈ ನಿಯಮ ಮುಂದುವರಿಯಲಿದೆ.
ಬುಧವಾರವಷ್ಟೇ ಸಭೆ ಸೇರಿದ್ದ ‘ಇಂಡಿಯಾ’ ಮೈತ್ರಿಕೂಟದ ನಾಯಕರು ಆಯೋಗದ ಈ ನಡವಳಿಕೆ ವಿರುದ್ಧ ದೇಶವ್ಯಾಪಿ ಪ್ರತಿಭಟನೆಗೆ ಕರೆ ನೀಡಿದ್ದಾರೆ. ಅಕ್ಟೋಬರ್ 2 ರಿಂದ 8 ರವರೆಗೆ ಜಿಲ್ಲಾ ಮಟ್ಟದಲ್ಲಿ ‘ಪ್ರಜಾಪ್ರಭುತ್ವ ಉಳಿಸಿ’ ಪಾದಯಾತ್ರೆ ನಡೆಸುವುದು, ಅಕ್ಟೋಬರ್ 6 ರಂದು ಚುನಾವಣಾ ಆಯೋಗದ ಕಚೇರಿಗೆ ಜಾಥಾ ನಡೆಸುವುದು ಹಾಗೂ ಅಕ್ಟೋಬರ್ ಎರಡನೇ ವಾರದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲು ವಿಪಕ್ಷಗಳು ನಿರ್ಧರಿಸಿವೆ.



















