ಬೆಳಗಾವಿ : ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ನೀಡಿದ ದೂರು ಹಾಗೂ ಮಾಲಿನ್ಯ ಸಮಸ್ಯೆಗಳ ಕುರಿತು ಕೇಳಿಬಂದ ಆಕ್ಷೇಪಗಳ ಬೆನ್ನಲ್ಲೇ ‘ಉಗಾರ್ ಶುಗರ್ ವರ್ಕ್ಸ್’ ಕಂಪನಿ ವಿರುದ್ಧ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕಠಿಣ ಕ್ರಮ ಕೈಗೊಂಡಿದ್ದು, ಕಾರ್ಖಾನೆಯ ಕಾರ್ಯಾಚರಣೆಯನ್ನು ತಕ್ಷಣದಿಂದಲೇ ಬಂದ್ ಮಾಡುವಂತೆ ಆದೇಶಿಸಿದೆ.
ಕಾರ್ಖಾನೆಯಿಂದ ಸಂಸ್ಕರಿಸದ ತ್ಯಾಜ್ಯ ನೀರು ಹೊರಬಿಡಲಾಗುತ್ತಿದೆ, ಬಾಯ್ಲರ್‌ಗಳಿಂದ ವಾಯು ಮಾಲಿನ್ಯ ಉಂಟಾಗುತ್ತಿದೆ, ಬಗಾಸ್ ಸಂಗ್ರಹಣೆಯಿಂದ ಧೂಳು ಹರಡುತ್ತಿದೆ ಹಾಗೂ ಎಥನಾಲ್ ಘಟಕದಿಂದ ದುರ್ವಾಸನೆ ಮತ್ತು ಶಬ್ದ ಮಾಲಿನ್ಯ ಉಂಟಾಗುತ್ತಿದೆ ಎಂಬ ದೂರುಗಳು ಕೇಳಿಬಂದಿದ್ದವು. ಈ ಕುರಿತು ಸಾರ್ವಜನಿಕರಿಂದಲೂ ಹಲವು ದೂರುಗಳು ಮಾಲಿನ್ಯ ನಿಯಂತ್ರಣ ಮಂಡಳಿಗೆ ಸಲ್ಲಿಕೆಯಾಗಿದ್ದವು.
ಈ ಹಿಂದೆ ಕಾರ್ಖಾನೆಗೆ ಹಲವು ಬಾರಿ ನಿರ್ದೇಶನ ನೀಡಲಾಗಿದ್ದರೂ, ಕೆಲವು ಪ್ರಮುಖ ನಿಯಮ ಪಾಲನೆಗಳು ಬಾಕಿಯಿವೆ ಎಂದು ಮಂಡಳಿ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಪರಿಶೀಲನೆ ವೇಳೆ ಕಾರ್ಖಾನೆಯಿಂದ ಹೊರಬಿಡಲಾಗುತ್ತಿದ್ದ ತ್ಯಾಜ್ಯ ನೀರಿನ ಮಾದರಿಗಳು ನಿಗದಿತ ಮಾನದಂಡಗಳಿಗೆ ಅನುಗುಣವಾಗಿರಲಿಲ್ಲ ಎಂಬ ಅಂಶವೂ ದಾಖಲಾಗಿದೆ.
ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕಾರ್ಖಾನೆಯನ್ನು ತಕ್ಷಣದಿಂದಲೇ ಹಾಗೂ ಮುಂದಿನ ಆದೇಶದವರೆಗೆ ಬಂದ್ ಮಾಡುವಂತೆ ನಿರ್ದೇಶನ ನೀಡಿದೆ. ಜೊತೆಗೆ ಕಾರ್ಖಾನೆಗೆ ಕಬ್ಬು ಹಂಚಿಕೆ ಮಾಡದಂತೆ ಕಬ್ಬು ಅಭಿವೃದ್ಧಿ ಆಯುಕ್ತ ಹಾಗೂ ಸಕ್ಕರೆ ನಿರ್ದೇಶಕರಿಗೆ ಸೂಚಿಸಲಾಗಿದೆ.
ಇದರೊಂದಿಗೆ ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಕಾರ್ಖಾನೆಯನ್ನು ವಶಕ್ಕೆ ಪಡೆಯುವಂತೆ ಹಾಗೂ ಹೆಸ್ಕಾಂಗೆ ಕಾರ್ಖಾನೆಯ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುವಂತೆ ಆದೇಶಿಸಲಾಗಿದೆ. ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಸೇರಿದಂತೆ ಸಾರ್ವಜನಿಕರಿಂದ ಕೇಳಿಬಂದ ದೂರುಗಳ ಬೆನ್ನಲ್ಲೇ ‘ಉಗಾರ್ ಶುಗರ್ ವರ್ಕ್ಸ್’ ವಿರುದ್ಧ ಮಾಲಿನ್ಯ ನಿಯಂತ್ರಣ ಮಂಡಳಿ ಕಠಿಣ ಕ್ರಮಕ್ಕೆ ಮುಂದಾಗಿದೆ.
ಇದನ್ನೂ ಓದಿ : ನೇಪಾಳ ಜಲಪ್ರಳಯ : 9 ದಿನಗಳ ಬಳಿಕ ಜಲವಿದ್ಯುತ್ ಸುರಂಗದಿಂದ ಇಬ್ಬರು ಕಾರ್ಮಿಕರ ರಕ್ಷಣೆ



















