ನವದೆಹಲಿ : ದಲಿತ ಮೀಸಲಾತಿಯಲ್ಲಿ ಒಳಮೀಸಲಾತಿ ಜಾರಿಗೆ ತರುವ ವಿಚಾರವಾಗಿ ಕೇಂದ್ರ ಸಚಿವರಾದ ಚಿರಾಗ್ ಪಾಸ್ವಾನ್ ಹಾಗೂ ಜಿತನ್ ರಾಮ್ ಮಾಂಝಿ ನಡುವೆ ತೀವ್ರ ವಾಕ್ಸಮರ ಏರ್ಪಟ್ಟಿದೆ. ಎನ್‌ಡಿಎ ಮೈತ್ರಿಕೂಟದ ಪ್ರಮುಖ ನಾಯಕರಾಗಿರುವ ಇಬ್ಬರೂ ನಾಯಕರು ಪರಸ್ಪರ ರಾಜೀನಾಮೆ ನೀಡುವಂತೆ ಬಹಿರಂಗವಾಗಿ ಸವಾಲು ಎಸೆದಿದ್ದಾರೆ.
ಲೋಕ ಜನಶಕ್ತಿ ಪಾರ್ಟಿ (ರಾಮ್ ವಿಲಾಸ್) ಮುಖ್ಯಸ್ಥ ಹಾಗೂ ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಅವರು ದಲಿತ ಸಮುದಾಯದಲ್ಲಿ ಒಳವರ್ಗೀಕರಣ(ಒಳಮೀಸಲಾತಿ) ಮಾಡುವುದನ್ನು ತೀವ್ರವಾಗಿ ವಿರೋಧಿಸಿದ್ದಾರೆ. “ಮೀಸಲಾತಿಯಲ್ಲಿ ಮತ್ತೆ ವರ್ಗೀಕರಣ ಮಾಡುವುದರಿಂದ ದಲಿತ ಸಮುದಾಯದ ಒಳಗೆ ಭೇದಭಾವ ಮತ್ತು ಬಿರುಕು ಮೂಡುತ್ತದೆ” ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ತಮ್ಮ ತಂದೆ ದಿ. ರಾಮ್ ವಿಲಾಸ್ ಪಾಸ್ವಾನ್ ಅವರ ನಿಲುವನ್ನೇ ಪುನರುಚ್ಚರಿಸಿದ ಚಿರಾಗ್, “ಕೆನೆಪದರ ಕಲ್ಪನೆಯನ್ನು ಮತ್ತು ಒಳಮೀಸಲಾತಿಯನ್ನು ಬೆಂಬಲಿಸುವುದಾದರೆ ಜಿತನ್ ರಾಮ್ ಮಾಂಝಿ ಹಾಗೂ ಅವರ ಪುತ್ರ ಸಂತೋಷ್ ಕುಮಾರ್ ಸುಮಾನ್ ತಮ್ಮ ಸಚಿವ ಸ್ಥಾನಗಳಿಗೆ ರಾಜೀನಾಮೆ ನೀಡಲಿ” ಎಂದು ನೇರ ಸವಾಲೆಸೆದಿದ್ದಾರೆ.
ಸಾಮಾಜಿಕ ನ್ಯಾಯಕ್ಕಾಗಿ ಒಳಮೀಸಲಾತಿ ಅಗತ್ಯ: ಮಾಂಝಿ ತಿರುಗೇಟು
ಚಿರಾಗ್ ಪಾಸ್ವಾನ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಹಾರ ಮಾಜಿ ಮುಖ್ಯಮಂತ್ರಿ ಹಾಗೂ ಎಚ್‌ಎಎಮ್ (HAM) ಮುಖ್ಯಸ್ಥ ಜಿತನ್ ರಾಮ್ ಮಾಂಝಿ, ರಾಜೀನಾಮೆ ನೀಡಬೇಕಿರುವುದು ನಾವಲ್ಲ, ಬದಲಿಗೆ ವಿಷಯದ ಗಂಭೀರತೆ ಅರಿಯದ ಚಿರಾಗ್ ಪಾಸ್ವಾನ್ ಎಂದು ತಿರುಗೇಟು ನೀಡಿದ್ದಾರೆ. “ದಲಿತರಲ್ಲಿಯೂ ಅತ್ಯಂತ ಹಿಂದುಳಿದ ಹಾಗೂ ವಂಚನೆಗೆ ಒಳಗಾದ ದುರ್ಬಲ ಜಾತಿಗಳಿದ್ದು, ಅವರಿಗೆ ತಲುಪಬೇಕಾದ ಸೌಲಭ್ಯಗಳನ್ನು ತಲುಪಿಸಲು ಒಳಮೀಸಲು ಅತ್ಯಗತ್ಯ” ಎಂದು ಅವರು ಪ್ರತಿಪಾದಿಸಿದ್ದಾರೆ.
ತಮ್ಮ ಸಮುದಾಯದ ಮೇಲಿನ ಪಾಸ್ವಾನ್ ಕುಟುಂಬದ ವಿರೋಧವನ್ನು ಉಲ್ಲೇಖಿಸಿದ ಮಾಂಝಿ, “ದುಸಾದ್ ಜಾತಿಯ ಪ್ರಾಬಲ್ಯವನ್ನು ಕಾಯ್ದುಕೊಳ್ಳುವ ಉದ್ದೇಶದಿಂದಲೇ ಪಾಸ್ವಾನ್ ಕುಟುಂಬವು ಇತರ ಅತ್ಯಂತ ಹಿಂದುಳಿದ ದಲಿತ ಸಮುದಾಯಗಳ ಏಳಿಗೆಯನ್ನು ತಡೆಯಲು ಯತ್ನಿಸುತ್ತಿದೆ” ಎಂದು ಕಿಡಿಕಾರಿದ್ದಾರೆ. ಅವರ ಪುತ್ರ ಹಾಗೂ ಬಿಹಾರ ಸಚಿವ ಸಂತೋಷ್ ಕುಮಾರ್ ಸುಮಾನ್ ಕೂಡ ಸಾಮಾಜಿಕ ಮಾಧ್ಯಮದಲ್ಲಿ ಈ ಕುರಿತು ಆಕ್ರೋಶ ಹೊರಹಾಕಿದ್ದು, ಒಳಮೀಸಲಾತಿ ಮತ್ತು ಕೆನೆಪದರ ನಡುವೆ ದೊಡ್ಡ ವ್ಯತ್ಯಾಸವಿದೆ, ದಲಿತರೊಳಗಿನ ಮುಸಹರ್, ಭುಯಿಯಾ, ನಾಟ್, ಡೋಮ್ ಮುಂತಾದ ಸಮುದಾಯಗಳು ಈಗಲೂ ತಾರತಮ್ಯ ಎದುರಿಸುತ್ತಿವೆ ಎಂದು ಹೇಳಿದ್ದಾರೆ.
ವಿವಾದಕ್ಕೆ ತೆರೆ ಎಳೆಯಲು ಜೆಡಿಯು ಯತ್ನ
ಎನ್‌ಡಿಎ ಮೈತ್ರಿಕೂಟದ ಈ ಇಬ್ಬರು ಪ್ರಮುಖ ನಾಯಕರ ನಡುವಿನ ಬಹಿರಂಗ ಜಗಳ ವಿಕೋಪಕ್ಕೆ ತಿರುಗುತ್ತಿದ್ದಂತೆ, ಜೆಡಿಯು ನಾಯಕ ಹಾಗೂ ಬಿಹಾರ ಸಚಿವ ಶ್ರವಣ್ ಕುಮಾರ್ ಈ ವಿವಾದವನ್ನು ಶಮನಗೊಳಿಸಲು ಯತ್ನಿಸಿದ್ದಾರೆ. “ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಮೀಸಲಾತಿಯನ್ನು ನೀಡಿದ್ದಾರೆ. ಹೀಗಾಗಿ ಈ ಕುರಿತು ಈಗ ಯಾವುದೇ ಅನಗತ್ಯ ವಿವಾದ ಅಥವಾ ಭಿನ್ನಾಭಿಪ್ರಾಯಗಳು ಇರಬಾರದು” ಎಂದು ಹೇಳುವ ಮೂಲಕ ಪರಿಸ್ಥಿತಿಯನ್ನು ತಿಳಿಗೊಳಿಸುವ ಪ್ರಯತ್ನ ಮಾಡಿದ್ದಾರೆ.
ಕಾಂಗ್ರೆಸ್ ವಿರುದ್ಧ ಜಂಟಿ ವಾಗ್ದಾಳಿ
ಒಳಮೀಸಲಾತಿ ವಿಚಾರದಲ್ಲಿ ಪರಸ್ಪರ ವಾಗ್ದಾಳಿ ನಡೆಸಿದರೂ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ದೇವಾಲಯ ಭೇಟಿಯ ನಂತರ ನಡೆದಿದೆ ಎನ್ನಲಾದ ‘ಶುದ್ಧೀಕರಣ’ ಘಟನೆಯ ಕುರಿತು ಮಾಡಿದ ಆರೋಪಗಳ ವಿಷಯದಲ್ಲಿ ಇಬ್ಬರೂ ನಾಯಕರು ಕಾಂಗ್ರೆಸ್ ವಿರುದ್ಧ ಒಂದಾಗಿದ್ದಾರೆ. ದೇಶವನ್ನು ದೀರ್ಘಕಾಲ ಆಳಿದ ಕಾಂಗ್ರೆಸ್, ಸಾಮಾಜಿಕ ಅಸಮಾನತೆಯನ್ನು ಜೀವಂತವಾಗಿಟ್ಟಿದೆ ಎಂದು ಚಿರಾಗ್ ವಾಗ್ದಾಳಿ ನಡೆಸಿದರೆ, ಮಾಂಝಿ ಅವರು 1978ರಲ್ಲಿ ಪ್ರಸಿದ್ಧ ದಲಿತ ನಾಯಕ ಜಗಜೀವನ್ ರಾಮ್ ಅವರು ಕಾಶಿ ವಿಶ್ವನಾಥ ದೇವಾಲಯಕ್ಕೆ ಭೇಟಿ ನೀಡಿದ ನಂತರ ಗಂಗಾಜಲದಿಂದ ಶುದ್ಧೀಕರಿಸಿದ ಐತಿಹಾಸಿಕ ಘಟನೆಯನ್ನು ನೆನಪಿಸಿ ಕಾಂಗ್ರೆಸ್ ಗೆ ಸವಾಲೆಸೆದಿದ್ದಾರೆ.
ಇದನ್ನೂ ಓದಿ : ತೆಂಡೂಲ್ಕರ್ ಶ್ರೇಷ್ಠ ಕ್ರಿಕೆಟಿಗ : ಕೊಹ್ಲಿಗಿಂತ ಬುಮ್ರಾಗೆ ಮಣೆಹಾಕಿದ ಅಶ್ವಿನ್



















