ನವದೆಹಲಿ : ಸಕ್ಕರೆ, ಉಪ್ಪು ಹಾಗೂ ಸ್ಯಾಚುರೇಟೆಡ್ ಕೊಬ್ಬಿನಂಶ ಹೆಚ್ಚಿರುವಂತಹ, ಪ್ಯಾಕ್ ಮಾಡಿದ ಆಹಾರ ಪದಾರ್ಥಗಳ (Packaged Foods) ಪ್ಯಾಕೆಟ್‌ಗಳ ಮುಂಭಾಗದಲ್ಲಿ ಕೆಂಪು ಬಣ್ಣದ ‘ಅಷ್ಟಕೋನಾಕೃತಿಯ’ (Hexagonal) ಎಚ್ಚರಿಕೆಯ ಸಂಕೇತ ಮುದ್ರಿಸುವುದನ್ನು ಕಡ್ಡಾಯಗೊಳಿಸಲು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ನಿರ್ಧರಿಸಿದೆ. ಆಹಾರ ಉತ್ಪನ್ನಗಳಲ್ಲಿನ ಅನಾರೋಗ್ಯಕರ ಅಂಶಗಳ ಬಗ್ಗೆ ಗ್ರಾಹಕರಿಗೆ ತಕ್ಷಣವೇ ಅರಿವು ಮೂಡಿಸುವ ಉದ್ದೇಶದಿಂದ ಈ ಮಹತ್ವದ ಹೆಜ್ಜೆ ಇಡಲಾಗುತ್ತಿದ್ದು, ಈ ಕುರಿತು ಪ್ರಾಧಿಕಾರ ಸುಪ್ರೀಂ ಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿದೆ.
ಸುಪ್ರೀಂ ಕೋರ್ಟ್ ತೀವ್ರ ತರಾಟೆ ಬೆನ್ನಲ್ಲೇ ಕ್ರಮ
‘3ಎಸ್ ಅಂಡ್ ಅವರ್ ಹೆಲ್ತ್ ಸೊಸೈಟಿ’ ಎಂಬ ಸರ್ಕಾರೇತರ ಸಂಸ್ಥೆ (NGO) ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಜೆ.ಬಿ. ಪರ್ದಿವಾಲಾ ನೇತೃತ್ವದ ಸುಪ್ರೀಂ ಕೋರ್ಟ್ ಪೀಠವು, ತಪ್ಪು ಲೇಬಲಿಂಗ್ ಮತ್ತು ಪೌಷ್ಟಿಕಾಂಶಗಳ ಸರಿಯಾದ ಮಾಹಿತಿ ನೀಡದ ಆಹಾರ ಸಂಸ್ಥೆಗಳನ್ನು ಹಾಗೂ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವನ್ನು ಇತ್ತೀಚೆಗೆ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತ್ತು. ದೇಶದಲ್ಲಿ ಮಕ್ಕಳ ಬೊಜ್ಜು (ಅತಿಕಾಯ) ಹೆಚ್ಚಾಗಲು ಇಂತಹ ಅತಿಯಾದ ಕೊಬ್ಬು, ಉಪ್ಪು ಮತ್ತು ಸಕ್ಕರೆ ಹೊಂದಿರುವ ಪ್ಯಾಕ್ ಮಾಡಿದ ಆಹಾರಗಳೇ ಪ್ರಮುಖ ಕಾರಣ ಎಂದು ಅಭಿಪ್ರಾಯಪಟ್ಟಿದ್ದ ನ್ಯಾಯಾಲಯ, ಗ್ರಾಹಕರಿಗೆ ಸ್ಪಷ್ಟ ಮಾಹಿತಿ ನೀಡದ ಕಂಪನಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚಿಸಿತ್ತು. ಈ ಚಾಟಿಯ ಬೆನ್ನಲ್ಲೇ ಪ್ರಾಧಿಕಾರ ಈ ಹೊಸ ಮಾರ್ಗಸೂಚಿಯನ್ನು ಸಿದ್ಧಪಡಿಸಿದೆ.
ಸ್ಟಾಪ್ ಸೈನ್ ಮಾದರಿಯ ಲೇಬಲ್
ಹೊಸ ಪ್ರಸ್ತಾವನೆಯ ಪ್ರಕಾರ, ನಿಗದಿತ ಮಿತಿಗಿಂತ ಹೆಚ್ಚು ಸಕ್ಕರೆ, ಉಪ್ಪು ಅಥವಾ ಕೊಬ್ಬಿನಂಶ ಹೊಂದಿರುವ ಆಹಾರ ಉತ್ಪನ್ನಗಳ ಮುಂಭಾಗದಲ್ಲಿ ‘ಸ್ಟಾಪ್ ಸೈನ್’ (Stop Sign) ಮಾದರಿಯ ಪ್ರಕಾಶಮಾನವಾದ ಕೆಂಪು ಅಷ್ಟಕೋನ ಗುರುತನ್ನು ಹಾಕುವುದು ಕಡ್ಡಾಯವಾಗಲಿದೆ. ಇದರೊಂದಿಗೆ “HIGH SUGAR” (ಅಧಿಕ ಸಕ್ಕರೆ), “HIGH SALT” (ಅಧಿಕ ಉಪ್ಪು) ಅಥವಾ “HIGH FAT” (ಅಧಿಕ ಕೊಬ್ಬು) ಎಂದು ದೊಡ್ಡ ಅಕ್ಷರಗಳಲ್ಲಿ ಸ್ಪಷ್ಟವಾಗಿ ಮುದ್ರಿಸಬೇಕು. ಈ ಎಚ್ಚರಿಕೆಯ ಅಕ್ಷರಗಳ ಗಾತ್ರವು ಪ್ಯಾಕೆಟ್ ಹಿಂಭಾಗದಲ್ಲಿರುವ ಪೌಷ್ಟಿಕಾಂಶಗಳ ಪಟ್ಟಿಯ ಅಕ್ಷರಗಳಿಗಿಂತ ಕನಿಷ್ಠ ಒಂದು ಪಾಯಿಂಟ್ ದೊಡ್ಡದಾಗಿರಬೇಕು, ಇದರಿಂದ ಗ್ರಾಹಕರು ಸುಲಭವಾಗಿ ಗುರುತಿಸಲು ಸಾಧ್ಯವಾಗುತ್ತದೆ.
2 ಹಂತಗಳಲ್ಲಿ ಜಾರಿ
ಈ ನೂತನ ನಿಯಮವನ್ನು ಪ್ರಾಧಿಕಾರ ಎರಡು ಹಂತಗಳಲ್ಲಿ ಜಾರಿಗೆ ತರಲು ಯೋಜಿಸಿದೆ. ಮೊದಲ ಹಂತದಲ್ಲಿ, ಪ್ರಸ್ತಾಪಿತ ಮೂರು ಅಂಶಗಳಲ್ಲಿ (ಸಕ್ಕರೆ, ಉಪ್ಪು, ಕೊಬ್ಬು) ಎರಡು ಅಥವಾ ಎರಡಕ್ಕಿಂತ ಹೆಚ್ಚು ಅಂಶಗಳು ಮಿತಿಮೀರಿರುವ ಉತ್ಪನ್ನಗಳಿಗೆ ಈ ಲೇಬಲ್ ಕಡ್ಡಾಯವಾಗಲಿದೆ. ಎರಡನೇ ಹಂತದಲ್ಲಿ, ಯಾವುದಾದರೂ ಒಂದೇ ಒಂದು ಅಂಶವು ಮಿತಿಮೀರಿದ್ದರೂ ಸಹ ಕೆಂಪು ಎಚ್ಚರಿಕೆ ಲೇಬಲ್ ಹಾಕುವುದು ಕಡ್ಡಾಯವಾಗಲಿದೆ. ಆದರೆ, ತುಪ್ಪ, ಖಾದ್ಯ ತೈಲ, ಉಪ್ಪು, ಸಕ್ಕರೆ, ಬೆಲ್ಲ ಮತ್ತು ಜೇನುತುಪ್ಪದಂತಹ ಏಕ-ಘಟಕಾಂಶ ಹೊಂದಿರುವ (Single-ingredient) ಮೂಲಭೂತ ಆಹಾರ ಉತ್ಪನ್ನಗಳಿಗೆ ಈ ನಿಯಮದಿಂದ ವಿನಾಯಿತಿ ನೀಡಲಾಗಿದೆ.
ಆಹಾರ ಉದ್ಯಮದ ವಿರೋಧ
ಈ ಕಠಿಣ ಕ್ರಮಕ್ಕೆ ಆಹಾರ ತಯಾರಿಕಾ ವಲಯದಿಂದ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದೆ. ಕೋಕಾ-ಕೋಲಾ, ನೆಸ್ಲೆ ಹಾಗೂ ಪೆಪ್ಸಿಕೋ ಸಂಸ್ಥೆಗಳನ್ನು ಪ್ರತಿನಿಧಿಸುವ ಪ್ರಮುಖ ಕೈಗಾರಿಕಾ ಒಕ್ಕೂಟಗಳು ಈ ಲೇಬಲಿಂಗ್ ನಿಯಮಗಳ ಕೆಲವು ಅಂಶಗಳನ್ನು ವಿರೋಧಿಸಿವೆ.
ಇದನ್ನೂ ಓದಿ : ಸೋನಿಯಾ ಗಾಂಧಿ ಆತ್ಮಕಥೆ ಪ್ರಕಟಣೆಗೆ ‘ಪೆಂಗ್ವಿನ್ ಇಂಡಿಯಾ’ ನಕಾರ : ಕಾಂಗ್ರೆಸ್-ಬಿಜೆಪಿ ವಾಕ್ಸಮರ



















