ಛತ್ರಪತಿ ಸಂಭಾಜಿನಗರ : ಐಫೋನ್ ಮೇಲೆ ಅತಿಯಾದ ಆಸೆಯಿಂದ ಅದನ್ನು ಇಎಂಐ (ಮಾಸಿಕ ಕಂತು) ಮೂಲಕ ಖರೀದಿಸಿದ್ದ ಯುವಕನೊಬ್ಬ, ಅದರ ಕಂತು ಪಾವತಿಸಲು ಹಣವಿಲ್ಲದೆ ಕುಟುಂಬದೊಂದಿಗೆ ಜಗಳವಾಡಿ ಬೆಟ್ಟದಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ವೇಳೆ, ಆತನನ್ನು ರಕ್ಷಿಸಲು ಹೋದ ತಂದೆ-ತಾಯಿಯೂ ಬೆಟ್ಟದಿಂದ ಬಿದ್ದು, ಮೂವರೂ ದುರ್ಮರಣಕ್ಕೀಡಾದ ಮನಕಲಕುವ ಘಟನೆ ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದ ತಿಸ್‌ಗಾಂವ್ ಪ್ರದೇಶದಲ್ಲಿ ನಡೆದಿದೆ.
ವಾಲುಜ್ ಎಂಐಡಿಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಘಟನೆಯಲ್ಲಿ ಮೃತಪಟ್ಟವರನ್ನು ಕುನಾಲ್ (19), ಆತನ ತಂದೆ ಮುರಳೀಧರ ಚಂದಗುಡೆ ಹಾಗೂ ತಾಯಿ ಸಂಗೀತಾ ಎಂದು ಗುರುತಿಸಲಾಗಿದೆ. ಇತ್ತೀಚೆಗೆ ಕುನಾಲ್ ದುಬಾರಿ ಐಫೋನ್ ಖರೀದಿಸಿದ್ದು, ಕಂತು ಕಟ್ಟಲು ಹಣ ನೀಡುವಂತೆ ತಂದೆಯ ಬಳಿ ಪಟ್ಟು ಹಿಡಿದಿದ್ದ. ಈ ವಿಚಾರವಾಗಿ ಆಗಸ್ಟ್ 21ರ ಬೆಳಿಗ್ಗೆ ತಂದೆ ಮತ್ತು ಮಗನ ನಡುವೆ ತೀವ್ರ ಸ್ವರೂಪದ ಮಾತಿನ ಚಕಮಕಿ ನಡೆದಿತ್ತು. ಇದರಿಂದ ತೀವ್ರ ಕೋಪಗೊಂಡ ಕುನಾಲ್, ಬೆಳಗ್ಗೆ ಸುಮಾರು 10 ಗಂಟೆಯ ವೇಳೆಗೆ ಸಮೀಪದ ಬೆಟ್ಟದ ತುದಿಗೆ ತೆರಳಿ ಜಿಗಿಯುತ್ತೇನೆ, ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಲು ಪ್ರಾರಂಭಿಸಿದ್ದ.
ಮೂರೂವರೆ ಗಂಟೆಗಳ ಕಾಲ ನಡೆದ ಕರುಣಾಜನಕ ಹೈಡ್ರಾಮಾ
ನಂತರ ಸಿಟ್ಟಿನಿಂದ ಆತ ಬೆಟ್ಟದ ಕಡೆಗೆ ಹೋಗಿದ್ದ. ಮಗ ನಿಜಕ್ಕೂ ಪ್ರಾಣ ಬಿಟ್ಟರೆ ಎಂಬ ಭಯದಿಂದ, ವಿಷಯ ತಿಳಿದ ತಕ್ಷಣ ಕುನಾಲ್‌ನ ಹೆತ್ತವರು ಹಾಗೂ ಸ್ಥಳೀಯ ಮಾಜಿ ಸರಪಂಚ್ ಸಂಜಯ್ ಜಾಧವ್ ಸೇರಿದಂತೆ ಗ್ರಾಮಸ್ಥರು, ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ಸ್ಥಳೀಯರು ಹಾಗೂ ಪೊಲೀಸರು ಕುನಾಲ್‌ನನ್ನು ಸಮಾಧಾನಪಡಿಸಲು ಸುಮಾರು ಮೂರು ಗಂಟೆಗಳ ಕಾಲ ಸತತ ಪ್ರಯತ್ನ ನಡೆಸಿದರು. “ನಿನ್ನ ತಾಯಿಯ ಮುಖ ನೋಡಿಕೊಂಡು ಕೆಳಗೆ ಬಾ, ನಿನಗೆ ಭವಿಷ್ಯವಿದೆ. ಅದನ್ನು ಹಾಳು ಮಾಡಿಕೊಳ್ಳಬೇಡ” ಎಂದು ಮನವಿ ಮಾಡಿಕೊಂಡರೂ, ಯುವಕ ಯಾರ ಮಾತಿಗೂ ಕಿವಿಕೊಡದೆ “ನನಗೆ ಸಾಯುವುದೊಂದೇ ದಾರಿ” ಎಂದು ಹಠ ಹಿಡಿದು ನಿಂತಿದ್ದ.
ಕ್ಷಣಮಾತ್ರದಲ್ಲಿ ನಡೆದ ಕಣ್ಣೀರ ಕಥನ
ಮಧ್ಯಾಹ್ನ 1 ಗಂಟೆಯ ಸುಮಾರಿಗೆ, ಬೆಟ್ಟದ ತುದಿಯಲ್ಲಿ ನಿಂತಿದ್ದ ಮಗನನ್ನು ಬಲವಂತವಾಗಿ ಹಿಂದಕ್ಕೆ ಎಳೆದು ರಕ್ಷಿಸಲು ತಂದೆ ಮುರಳೀಧರ ಅವರು ಯತ್ನಿಸಿದರು. ಆದರೆ, ಈ ವೇಳೆ ಅಪ್ಪನಿಂದ ತಪ್ಪಿಸಿಕೊಳ್ಳಲು ಯುವಕ ಯತ್ನಿಸಿದ್ದು, ಈ ವೇಳೆ ನಿಯಂತ್ರಣ ತಪ್ಪಿ ಇಬ್ಬರೂ ಪ್ರಪಾತಕ್ಕೆ ಬಿದ್ದರು. ಕಣ್ಣೆದುರೇ ಗಂಡ ಮತ್ತು ಮಗ ಪ್ರಪಾತಕ್ಕೆ ಬಿದ್ದು ಸಾವನ್ನಪ್ಪಿದ್ದನ್ನು ಕಂಡ ತಾಯಿ ಸಂಗೀತಾ ಕ್ಷಣಮಾತ್ರವೂ ಯೋಚಿಸದೇ ಬೆಟ್ಟದಿಂದ ಜಿಗಿದು ಜೀವ ತೊರೆದರು. ಘಟನೆಯ ದೃಶ್ಯಗಳು ಸ್ಥಳೀಯರ ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಪೊಲೀಸರು ಮೂವರ ಮೃತದೇಹಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.



















