ನವದೆಹಲಿ: ಇತ್ತೀಚೆಗೆ ನಡೆದ ಸಂಘಟನಾತ್ಮಕ ಸರ್ಜರಿ ಬಳಿಕ ಇದೇ ಮೊದಲ ಬಾರಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರು ಇಂದು(ಶನಿವಾರ) ತಮ್ಮ ನೂತನ ಪದಾಧಿಕಾರಿಗಳ ತಂಡದ ಮೊದಲ ಪರಿಚಯಾತ್ಮಕ ಹಾಗೂ ಮಹತ್ವದ ಸಭೆ ನಡೆಸಿದರು. ಸಂಘಟನಾತ್ಮಕ ಪುನರ್ರಚನೆಯ ನಂತರ ನಡೆದ ಈ ಸಭೆಯಲ್ಲಿ, ಪಕ್ಷದ ಹಿರಿಯ ನಾಯಕರು ಹಾಗೂ ನೂತನವಾಗಿ ನೇಮಕಗೊಂಡ ಪದಾಧಿಕಾರಿಗಳು ಭಾಗವಹಿಸಿದ್ದು, ಬಿಜೆಪಿಯ ಭವಿಷ್ಯದ ರಾಜಕೀಯ ಹಾಗೂ ಚುನಾವಣಾ ನೀಲನಕ್ಷೆಯ ಕುರಿತು ಸುದೀರ್ಘ ಚರ್ಚೆ ನಡೆಸಲಾಯಿತು.
ಸಭೆಯ ಪ್ರಮುಖ ಅಜೆಂಡಾವೇನು?
ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ. ಎಲ್. ಸಂತೋಷ್, ಕಾರ್ಯಕ್ರಮಗಳ ಉಸ್ತುವಾರಿ ವಿನೋದ್ ತಾವ್ಡೆ ಸೇರಿದಂತೆ ವಿವಿಧ ರಾಜ್ಯಗಳ ಬಿಜೆಪಿ ಅಧ್ಯಕ್ಷರು ಹಾಗೂ ಉಸ್ತುವಾರಿಗಳು ಈ ಸಭೆಯಲ್ಲಿ ಭಾಗವಹಿಸಿದ್ದರು. ‘ಮೋದಿ ಅಟ್ 25’ (Modi at 25) ಸಂಭ್ರಮಾಚರಣೆಗೆ ದೇಶಾದ್ಯಂತ ಬೃಹತ್ ಕಾರ್ಯಕ್ರಮ ರೂಪಿಸುವುದು ಮತ್ತು 2027ರಲ್ಲಿ ನಡೆಯಲಿರುವ ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆಗಳಿಗೆ ಕಾರ್ಯತಂತ್ರ ಸಿದ್ಧಪಡಿಸುವುದು ಈ ಸಭೆಯ ಮುಖ್ಯ ಉದ್ದೇಶವಾಗಿತ್ತು. ವಿಶೇಷವಾಗಿ ‘ಜೆನ್-ಝಿ’ (Gen Z) ಅಂದರೆ ನೂತನ ಪೀಳಿಗೆಯ ಯುವ ಮತದಾರರನ್ನು ತಲುಪಲು ವಿಶೇಷ ಯೋಜನೆಯನ್ನು ಸಿದ್ಧಪಡಿಸಲಾಗುತ್ತಿದೆ.
ಅನುಭವ ಮತ್ತು ಯುವ ಉತ್ಸಾಹದ ಸಮ್ಮಿಶ್ರಣ
ಜನವರಿ 20 ರಂದು ನಿತಿನ್ ನವೀನ್ ಅವರು ಪಕ್ಷದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಸುಮಾರು ಏಳು ತಿಂಗಳ ಸುದೀರ್ಘ ಸಂಘಟನಾತ್ಮಕ ಪ್ರಕ್ರಿಯೆಯ ನಂತರ ಈ 65 ಸದಸ್ಯರ ನೂತನ ತಂಡವನ್ನು ರಚಿಸಲಾಗಿದೆ. ಈ ತಂಡದಲ್ಲಿದ್ದ ಶೇ.75 ಕ್ಕೂ ಹೆಚ್ಚು ನಾಯಕರು ಹೊಸಬರಾಗಿದ್ದು, ಪದಾಧಿಕಾರಿಗಳ ಸರಾಸರಿ ವಯಸ್ಸು 55 ವರ್ಷಗಳಾಗಿದೆ. ಪಕ್ಷಕ್ಕೆ ಹೊಸ ಎನರ್ಜಿ ನೀಡುವ ನಿಟ್ಟಿನಲ್ಲಿ ಯುವ ನಾಯಕರಿಗೆ ಆದ್ಯತೆ ನೀಡಲಾಗಿದ್ದರೂ, ವಿನೋದ್ ತಾವ್ಡೆ ಮತ್ತು ಸುನಿಲ್ ಬನ್ಸಲ್ ಅವರಂತಹ ಅನುಭವಿ ನಾಯಕರನ್ನು ಒಳಗೊಳ್ಳುವ ಮೂಲಕ ಹಳೆಯ ಮತ್ತು ಹೊಸ ನಾಯಕರ ನಡುವೆ ಸಮತೋಲನ ಕಾಯ್ದುಕೊಳ್ಳಲಾಗಿದೆ.
ರಾಮ್ ಮಾಧವ್ ಪುನರಾಗಮನ, ಸ್ಮೃತಿ ಇರಾನಿಗೆ ಪ್ರಮುಖ ಹೊಣೆ
ನೂತನ ಪದಾಧಿಕಾರಿಗಳ ಪಟ್ಟಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಹಾಗೂ ಬಿಜೆಪಿಯಲ್ಲಿ ಅಪಾರ ಅನುಭವ ಹೊಂದಿರುವ ಹಿರಿಯ ನಾಯಕ ರಾಮ್ ಮಾಧವ್ ಅವರನ್ನು ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಮತ್ತೊಂದೆಡೆ, ಮಾಜಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಗಿದ್ದು, ಅವರಿಗೆ ಸಂಘಟನೆಯಲ್ಲಿ ಪ್ರಮುಖ ಹೊಣೆಗಾರಿಕೆ ನೀಡಲಾಗಿದೆ. ಪಂಜಾಬ್‌ನಲ್ಲಿ ಪಕ್ಷದ ನೆಲೆ ವಿಸ್ತರಿಸುವುದು ಹಾಗೂ ಉತ್ತರ ಪ್ರದೇಶದ ಆಂತರಿಕ ಭಿನ್ನಾಭಿಪ್ರಾಯಗಳನ್ನು ಶಮನಗೊಳಿಸಿ 2029ರ ಲೋಕಸಭಾ ಚುನಾವಣೆಗೆ ಬಲವಾದ ಅಡಿಪಾಯ ಹಾಕುವುದು ಈ ನೂತನ ತಂಡದ ಮುಂದಿರುವ ಬಹುದೊಡ್ಡ ಸವಾಲಾಗಿದೆ.
ಇದನ್ನೂ ಓದಿ : ಆರ್‌ಎಸ್‌ಎಸ್ ವಿರುದ್ಧ ನಿರ್ಬಂಧಕ್ಕೆ ಆಗ್ರಹಿಸಿದ ಅಮೆರಿಕದ ಆಯೋಗಕ್ಕೆ ಭಾರತ ವಿದೇಶಾಂಗ ಇಲಾಖೆ ಚಾಟಿ!



















