ಬೆಂಗಳೂರು: ಬಹುತೇಕ ರೈಲ್ವೆ ಪ್ರಯಾಣಿಕರಿಗೆ ರೈಲ್ವೆ ಇಲಾಖೆಯ ಸೇವೆಗಳ ಬಗ್ಗೆ ಮಾಹಿತಿ ಇರುವುದಿಲ್ಲ. ಅದರಲ್ಲೂ, ಕೇವಲ 45 ರೂಪಾಯಿಗೆ ಲಭಿಸುವ, 10 ಲಕ್ಷ ರೂಪಾಯಿ ಕವರ್ ಇರುವ ವಿಮೆಯ ಬಗ್ಗೆ ಗೊತ್ತಿರುವುದಿಲ್ಲ. ಹೌದು, ಭಾರತೀಯ ರೈಲ್ವೆಯು ಐಆರ್ ಸಿಟಿಸಿ (IRCTC) ವೆಬ್ ಸೈಟ್ ಅಥವಾ ಮೊಬೈಲ್ ಆ್ಯಪ್ ಮೂಲಕ ಆನ್ ಲೈನ್ ನಲ್ಲಿ ಟಿಕೆಟ್ ಬುಕ್ ಮಾಡುವ ಪ್ರಯಾಣಿಕರಿಗೆ ಕೇವಲ 45 ಪೈಸೆ ಪ್ರೀಮಿಯಂಗೆ ಪ್ರಯಾಣ ವಿಮೆಯನ್ನು ಒದಗಿಸುತ್ತದೆ.
ಕನ್‌ಫರ್ಮ್ ಆಗಿರುವ ಅಥವಾ ಆರ್‌ಎಸಿ ಟಿಕೆಟ್ ಪಡೆದ ಭಾರತೀಯ ನಿವಾಸಿಗಳು ಮಾತ್ರ ಈ ವಿಮೆಗೆ ಅರ್ಹರು. ರೈಲ್ವೆ ಕೌಂಟರ್ ಗಳಲ್ಲಿ ಟಿಕೆಟ್ ಪಡೆಯುವವರು, ವೇಟಿಂಗ್ ಲಿಸ್ಟ್ ನಲ್ಲಿರುವ ಪ್ರಯಾಣಿಕರು ಮತ್ತು 5 ವರ್ಷದೊಳಗಿನ ಮಕ್ಕಳಿಗೆ ಇದು ಅನ್ವಯಿಸುವುದಿಲ್ಲ. ಆನ್ ಲೈನ್ ಮೂಲಕ ಟಿಕೆಟ್ ಬುಕ್ ಮಾಡುವಾಗ ಗ್ರಾಹಕರು 45 ಪೈಸೆಯನ್ನು ಹೆಚ್ಚುವರಿಯಾಗಿ ಖರ್ಚು ಮಾಡಿದರೆ ಸಾಕು, ವಿಮೆಯ ಕವರ್ ಲಭಿಸುತ್ತದೆ.
ವಿಮೆಯ ಪ್ರಮುಖ ಮಾಹಿತಿ
ಅಪಘಾತದಿಂದ ಮರಣ ಅಥವಾ ಶಾಶ್ವತ ಸಂಪೂರ್ಣ ಅಂಗವೈಕಲ್ಯಕ್ಕೆ: 10 ಲಕ್ಷ ರೂ. ಪರಿಹಾರ
ಶಾಶ್ವತ ಭಾಗಶಃ ಅಂಗವೈಕಲ್ಯಕ್ಕೆ: 7.5 ಲಕ್ಷ ರೂಪಾಯಿ
ಗಾಯಗೊಂಡರೆ ಆಸ್ಪತ್ರೆ ವೆಚ್ಚಕ್ಕೆ: 2 ಲಕ್ಷ ರೂಪಾಯಿ
ಮೃತದೇಹ ಸಾಗಾಟ ವೆಚ್ಚಕ್ಕೆ: 10 ಸಾವಿರ ರೂಪಾಯಿ
ಐಆರ್ ಸಿಟಿಟಿ ವೆಬ್ ಸೈಟ್ ಅಥವಾ ಆ್ಯಪ್ ಮೂಲಕ ಇ-ಟಿಕೆಟ್ ಬುಕ್ ಮಾಡುವಾಗ ವಿಮಾ ಆಪ್ಶನ್ ನ ಚೆಕ್ ಬಾಕ್ಸ್ ಮೇಲೆ ಟಿಕ್ ಮಾಡಬೇಕು. ಹಾಗೆಯೇ, ಟಿಕೆಟ್ ಬುಕ್ ಆದ ನಂತರ ವಿಮಾ ಕಂಪನಿಯಿಂದ ನಿಮ್ಮ ಮೊಬೈಲ್ ಮತ್ತು ಇಮೇಲ್ ಗೆ ಪಾಲಿಸಿ ವಿವರ ಹಾಗೂ ನಾಮಿನಿಯನ್ನು ನೋಂದಣಿ ಮಾಡಲು ಲಿಂಕ್ ಬರುತ್ತದೆ. ಅಪಘಾತ ಸಂದರ್ಭದಲ್ಲಿ ಕ್ಲೇಮ್ ಪಡೆಯಲು ನಾಮಿನಿ ವಿವರಗಳನ್ನು ತಕ್ಷಣವೇ ಭರ್ತಿ ಮಾಡುವುದು ಬಹಳ ಮುಖ್ಯ. ಟಿಕೆಟ್ ಕಾಯ್ದಿರಿಸುವಾಗ ಕೇವಲ 45 ಪೈಸೆ ಖರ್ಚು ಮಾಡಿ ಈ ಸಣ್ಣ ಹೆಜ್ಜೆ ಇರಿಸುವುದರಿಂದ ತುರ್ತು ಸಂದರ್ಭಗಳಲ್ಲಿ ನಿಮ್ಮ ಕುಟುಂಬಕ್ಕೆ ದೊಡ್ಡ ಆರ್ಥಿಕ ಭದ್ರತೆ ಸಿಗುತ್ತದೆ.
















