ಬೆಂಗಳೂರು : ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯು (EPFO) ತನ್ನ 7 ಕೋಟಿಗೂ ಅಧಿಕ ಸದಸ್ಯರಿಗೆ ಸೈಬರ್ ವಂಚನೆಗಳು ಮತ್ತು ನಕಲಿ ವೆಬ್ ಲಿಂಕ್ ಗಳ ಬಗ್ಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ. ಇತ್ತೀಚಿನ ದಿನಗಳಲ್ಲಿ ನಕಲಿ ವೆಬ್ ಸೈಟ್ ಗಳು ಮತ್ತು ವಂಚಕರ ಸಂದೇಶಗಳು ಹೆಚ್ಚಾಗುತ್ತಿದ್ದು, ನೌಕರರ ಪ್ರಮುಖ ವೈಯಕ್ತಿಕ ವಿವರಗಳನ್ನು ಕದಿಯುವ ಯತ್ನಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಖಾಸಗಿ ಕಂಪನಿಗಳ ಉದ್ಯೋಗಿಗಳು ಎಚ್ಚರ ವಹಿಸುವುದು ಬಹಳ ಮುಖ್ಯವಾಗಿದೆ.
ನಿಮ್ಮ ಯುಎಎನ್ (UAN), ಪ್ಯಾನ್ ಕಾರ್ಡ್, ಬ್ಯಾಂಕ್ ಡಿಟೇಲ್ಸ್ ಮತ್ತು ಆನ್ ಲೈನ್ ನಲ್ಲಿ ಗೌಪ್ಯ ಮಾಹಿತಿಯನ್ನು ಸುರಕ್ಷಿತವಾಗಿಡಲು ಇಪಿಎಫ್ಒ ಕೆಲವು ಪ್ರಮುಖ ಸುರಕ್ಷತಾ ಕ್ರಮಗಳನ್ನು ಸೂಚಿಸಿದೆ. ಆನ್ ಲೈನ್ ವಂಚನೆಯಿಂದ ಪಾರಾಗಲು ಇಪಿಎಫ್ಒ ಸದಸ್ಯರು ಈ ಕೆಳಗಿನ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬಹುದಾಗಿದೆ.
- ಅಧಿಕೃತ ವೆಬ್ ಸೈಟ್ ಮಾತ್ರ ಬಳಸಿ : ಯಾವುದೇ ವ್ಯವಹಾರಕ್ಕಾಗಿ ಅಥವಾ ಮಾಹಿತಿ ಪಡೆಯಲು ಇಪಿಎಫ್ಒದ ಅಧಿಕೃತ ಪೋರ್ಟಲ್ ಅನ್ನು ಮಾತ್ರ ಬಳಸಿ. ಅಪರಿಚಿತ ಅಥವಾ ಅನುಮಾನಾಸ್ಪದ ಲಿಂಕ್ ಮೇಲೆ ಕ್ಲಿಕ್ ಮಾಡಬೇಡಿ.
- ವೈಯಕ್ತಿಕ ವಿವರಗಳನ್ನು ಹಂಚಿಕೊಳ್ಳಬೇಡಿ : ನಿಮ್ಮ ಯುಎಎನ್ ಸಂಖ್ಯೆ, ಒಟಿಪಿ ಅಥವಾ ಬ್ಯಾಂಕ್ ಖಾತೆ ವಿವರಗಳನ್ನು ಯಾರೊಂದಿಗೂ ಫೋನ್ ಅಥವಾ ಸಂದೇಶಗಳ ಮೂಲಕ ಹಂಚಿಕೊಳ್ಳಬೇಡಿ.
- ಯು ಆರ್ ಎಲ್ ಪರಿಶೀಲಿಸಿ : ನೀವು ಭೇಟಿ ನೀಡುವ ವೆಬ್ ಸೈಟ್ ವಿಳಾಸವು ಅಧಿಕೃತ ಸರ್ಕಾರಿ ಡೊಮೈನ್ ನಲ್ಲಿದೆಯೇ (ಉದಾಹರಣೆಗೆ .gov.in) ಎಂಬುದನ್ನು ಖಚಿತಪಡಿಸಿಕೊಳ್ಳಿ.
- ಒಟಿಪಿ ರಹಸ್ಯವಾಗಿರಲಿ : ಮೊಬೈಲ್ ಗೆ ಬರುವ ಒಟಿಪಿ ನಂಬರ್ ಗಳನ್ನು ಯಾರಿಗೂ ತಿಳಿಸಬೇಡಿ. ಇಪಿಎಫ್ಒ ಎಂದಿಗೂ ಕರೆ ಮಾಡಿ ಒಟಿಪಿ ಕೇಳುವುದಿಲ್ಲ.
- ಸೈಬರ್ ವಂಚನೆ ವರದಿ ಮಾಡಿ : ಒಂದು ವೇಳೆ ಯಾವುದೇ ವಂಚನೆ ಅಥವಾ ಅನುಮಾನಾಸ್ಪದ ಚಟುವಟಿಕೆ ಕಂಡುಬಂದಲ್ಲಿ ತಕ್ಷಣವೇ ಹತ್ತಿರದ ಸೈಬರ್ ಕ್ರೇಮ್ ವಿಭಾಗಕ್ಕೆ ಅಥವಾ ಅಧಿಕೃತ ಪೋರ್ಟಲ್ ಮೂಲಕ ದೂರು ದಾಖಲಿಸಿ.
- ಪಾಸ್ ವರ್ಡ್ ಬದಲಾಯಿಸಿ : ನಿಮ್ಮ ಆನ್ ಲೈನ್ ಖಾತೆಯ ಪಾಸ್ ವರ್ಡ್ ಅನ್ನು ಕಾಲಕಾಲಕ್ಕೆ ಬದಲಾಯಿಸುತ್ತಿರಿ.
ಇದನ್ನೂ ಓದಿ : ಟ್ರಂಪ್ ಹತ್ಯೆಗೆ ಸಂಚು : ಇರಾನ್ ಬೆದರಿಕೆ ಬೆನ್ನಲ್ಲೇ ಟ್ರಕ್ ಬಳಸಿ ವಿಮಾನ ಬದಲಾಯಿಸಿದ ಅಮೆರಿಕ ಸೇನೆ!



















