ಹಾವೇರಿ: ಜಿಲ್ಲೆಯಲ್ಲಿ ಪ್ರತಿ ಟನ್ ಕಬ್ಬಿಗೆ 3,225 ರೂಪಾಯಿ ನೀಡಲು ಕಾರ್ಖಾನೆ ಮಾಲೀಕರು ಒಪ್ಪಿದ್ದಾರೆ ಎಂದು ಸಕ್ಕರೆ ಸಚಿವ ರುದ್ರಪ್ಪ ಲಮಾಣಿ ಹೇಳಿದ್ದಾರೆ. ಹಾವೇರಿಯ ಡಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ರೈತರು 3,500 ರೂಪಾಯಿ ಬೇಡಿಕೆ ಇಟ್ಟಿದ್ದರು, ಆದರೆ ಅದಕ್ಕೆ ಮಾಲೀಕರು ಒಪ್ಪಲಿಲ್ಲ ಎಂದು ತಿಳಿಸಿದ್ದಾರೆ.
ಸಿಎಂ ಜೊತೆಗಿನ ಸಭೆಯಲ್ಲೂ ಮಾಲೀಕರು ತಮ್ಮ ಕಷ್ಟ ಹೇಳಿಕೊಂಡಿದ್ದರು. ಕೃಷ್ಣಾ ನದಿ ಭಾಗದಲ್ಲಿ ಇಳುವರಿ ಹೆಚ್ಚಿದ್ದು, ಹಾವೇರಿ ಭಾಗದಲ್ಲಿ ಕಡಿಮೆ ಇದೆ. ಹೀಗಾಗಿ ಸರಾಸರಿ ಇಳುವರಿ ಲೆಕ್ಕಾಚಾರದಲ್ಲಿ ದರ ನಿಗದಿಗೆ ಪ್ರಯತ್ನ ಮಾಡಲಾಗಿದೆ. ಕೊನೆಗೂ ಟನ್ಗೆ 3,225 ರೂಪಾಯಿ ನೀಡಲು ಮಾಲೀಕರು ಒಪ್ಪಿದ್ದು, ಅವರಿಗೂ ಈ ದರದಲ್ಲಿ ಸಮಾಧಾನ ಇದೆ ಎಂದು ಭಾವಿಸಿದ್ದೇನೆ ಎಂದಿದ್ದಾರೆ. ಮನುಷ್ಯನಿಗೆ ಆಸೆ ಇದ್ದೇ ಇರುತ್ತದೆ, ಎಷ್ಟು ಕೊಟ್ಟರೂ ಕಡಿಮೆಯೇ ಎಂದು ಸಚಿವರು ಹೇಳಿದ್ದಾರೆ.
ಕಬ್ಬಿನ ಗುಣಮಟ್ಟ ಪರೀಕ್ಷೆಗೆ ಜಿಲ್ಲೆಯಲ್ಲಿ ಪ್ರತ್ಯೇಕ ಲ್ಯಾಬ್ ಸ್ಥಾಪನೆಗೆ ಚಿಂತನೆ ನಡೆದಿದ್ದು, ಸಿಎಂ ಜೊತೆ ಚರ್ಚಿಸಿ ಲ್ಯಾಬ್ ಸ್ಥಾಪನೆ ಮಾಡುವುದಾಗಿ ರುದ್ರಪ್ಪ ಲಮಾಣಿ ಭರವಸೆ ನೀಡಿದ್ದಾರೆ. ಅಲ್ಲದೆ ಸುತ್ತಮುತ್ತಲಿನ ಕಾರ್ಖಾನೆಗಳ ರೈತರು ಯಾವುದೇ ಹೆಚ್ಚುವರಿ ಬೇಡಿಕೆ ಇಟ್ಟಿಲ್ಲ ಎಂದು ಅವರು ತಿಳಿಸಿದ್ದಾರೆ.


















