ಬೆಂಗಳೂರು : ನೂತನ ಸಚಿವ ಹಾಗೂ ಅಥಣಿ ಶಾಸಕ ಲಕ್ಷ್ಮಣ್ ಸವದಿ ಅವರು ಸಾರ್ವಜನಿಕ ಸ್ಥಳದಲ್ಲಿ ಖಡ್ಗ ಪ್ರದರ್ಶಿಸಿರುವ ಆರೋಪಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ದೂರು ಸಲ್ಲಿಸಿ, ಈ ಬಗ್ಗೆ ಸಮಗ್ರ ತನಿಖೆ ನಡೆಸಿ, ಕಾನೂನು ಮತ್ತು ಆಡಳಿತಾತ್ಮಕ ನಿಯಮಗಳ ಉಲ್ಲಂಘನೆ ಕಂಡುಬಂದರೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಆಗಸ್ಟ್ 8ರಂದು ನೂತನ ಸಚಿವರಾಗಿ ಸ್ವಕ್ಷೇತ್ರ ಅಥಣಿಗೆ ಆಗಮಿಸಿದ ಹಿನ್ನೆಲೆ ಅಥಣಿ-ಮೀರಜ್ ರಸ್ತೆಯ ಶಿವಾಜಿ ಸರ್ಕಲ್‌ನಿಂದ ಸಿದ್ದೇಶ್ವರ ದೇವಸ್ಥಾನದವರೆಗೆ ಹಾಗೂ ಅಲ್ಲಿಂದ ಸತ್ತಿ ರಸ್ತೆಯಲ್ಲಿರುವ ಅವರ ನಿವಾಸದವರೆಗೆ ರೋಡ್ ರ್ಯಾಲಿ ಆಯೋಜಿಸಲಾಗಿತ್ತು. ಈ ವೇಳೆ ಸಂಜೆ ಸುಮಾರು 5.30ಕ್ಕೆ ಶಿವಾಜಿ ಸರ್ಕಲ್‌ನಲ್ಲಿರುವ ಶಿವಾಜಿ ಮಹಾರಾಜರ ಪ್ರತಿಮೆಗೆ ಗೌರವ ಸಲ್ಲಿಸುವ ಸಂದರ್ಭದಲ್ಲಿ ಲಕ್ಷ್ಮಣ್ ಸವದಿ ಅವರು ಸಾರ್ವಜನಿಕವಾಗಿ ಖಡ್ಗ ಪ್ರದರ್ಶಿಸಿರುವ ವಿಡಿಯೋ ವೈರಲ್ ಆಗಿದೆ.
ಸಾರ್ವಜನಿಕವಾಗಿ ಪ್ರದರ್ಶಿಸಲಾದ ಖಡ್ಗದ ಸ್ವರೂಪ, ಅದು ಅನ್ವಯಿಸುವ ಕಾನೂನಿನ ಅಡಿಯಲ್ಲಿ ನಿಯಂತ್ರಿತ ಆಯುಧದ ವ್ಯಾಪ್ತಿಗೆ ಬರುತ್ತದೆಯೇ, ಅದರ ಕಾನೂನುಬದ್ಧ ಸ್ವಾಧೀನ ಮತ್ತು ಸಾಗಣೆಗೆ ಅನುಮತಿ ಅಗತ್ಯವಿತ್ತೇ ಹಾಗೂ ಸಾರ್ವಜನಿಕವಾಗಿ ಪ್ರದರ್ಶಿಸಲು ಯಾವುದೇ ಪರವಾನಗಿ ಅಥವಾ ಅನುಮತಿ ಬೇಕಿತ್ತೇ ಎಂಬುದನ್ನು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಬೇಕು ಎಂದು ದಿನೇಶ್ ಕಲ್ಲಹಳ್ಳಿ ದೂರಿನಲ್ಲಿ ಆಗ್ರಹಿಸಿದ್ದಾರೆ. ಈ ಬಗ್ಗೆ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆ ಹಾಗೂ ಪೊಲೀಸ್ ಮಹಾನಿರ್ದೇಶಕರಿಂದ ವಾಸ್ತವಾಂಶಾಧಾರಿತ ವರದಿ ಪಡೆಯುವಂತೆ ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ.
ಸಚಿವರ ಸಾರ್ವಜನಿಕ ನಡವಳಿಕೆ ಸಾಮಾನ್ಯ ನಾಗರಿಕರ ನಡವಳಿಕೆಯಷ್ಟೇ ಅಲ್ಲದೆ, ಸಚಿವರಿಗೆ ಅನ್ವಯಿಸುವ ಸರ್ಕಾರದ ನಡತೆ ಸಂಹಿತೆ, ಆಡಳಿತಾತ್ಮಕ ಶಿಷ್ಟಾಚಾರ, ಸಾರ್ವಜನಿಕ ಹುದ್ದೆಯ ಘನತೆ ಹಾಗೂ ಜವಾಬ್ದಾರಿತನದ ಮಾನದಂಡಗಳ ಅಡಿಯಲ್ಲಿಯೂ ಪರಿಶೀಲಿಸಬೇಕಿದೆ ಎಂದು ದೂರಿನಲ್ಲಿ ದಿನೇಶ್ ಕಲ್ಲಹಳ್ಳಿ ತಿಳಿಸಿದ್ದಾರೆ. ಸಾರ್ವಜನಿಕ ಹುದ್ದೆಯಲ್ಲಿರುವ ವ್ಯಕ್ತಿಗಳು ಕಾನೂನು ಪಾಲನೆ, ಸಂಯಮ ಮತ್ತು ಜವಾಬ್ದಾರಿಯುತ ನಡವಳಿಕೆಗೆ ಮಾದರಿಯಾಗಬೇಕು. ಅವರ ನಡೆ ಸಾರ್ವಜನಿಕರು ಹಾಗೂ ಅನುಯಾಯಿಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ, ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ದೂರಿನಲ್ಲಿ ಮನವಿ ಮಾಡಲಾಗಿದೆ.
ಇನ್ನು, ಈ ದೂರು ಯಾವುದೇ ರಾಜಕೀಯ ಪಕ್ಷ ಅಥವಾ ವ್ಯಕ್ತಿಯ ವಿರುದ್ಧದ ವೈಯಕ್ತಿಕ ದ್ವೇಷದಿಂದ ಸಲ್ಲಿಸಿರುವುದಲ್ಲ. ಸಾರ್ವಜನಿಕ ಹುದ್ದೆಯಲ್ಲಿರುವ ಪ್ರತಿಯೊಬ್ಬರೂ ಕಾನೂನು ಮತ್ತು ಸಂವಿಧಾನಾತ್ಮಕ ಮೌಲ್ಯಗಳಿಗೆ ಒಳಪಟ್ಟಿರಬೇಕು ಹಾಗೂ ಕಾನೂನು ಎಲ್ಲರಿಗೂ ಸಮಾನವಾಗಿ ಅನ್ವಯಿಸಬೇಕು ಎಂಬ ಸಾರ್ವಜನಿಕ ಹಿತಾಸಕ್ತಿಯ ಉದ್ದೇಶದಿಂದ ದೂರು ಸಲ್ಲಿಸಲಾಗಿದೆ ಎಂದು ದಿನೇಶ್ ಕಲ್ಲಹಳ್ಳಿ ಸ್ಪಷ್ಟಪಡಿಸಿದ್ದಾರೆ.
ಹೀಗಾಗಿ ಘಟನೆ ಕುರಿತು ಸ್ವತಂತ್ರ, ನಿಷ್ಪಕ್ಷಪಾತ ಹಾಗೂ ಸಮಗ್ರ ತನಿಖೆ ನಡೆಸಿ, ಯಾವುದೇ ಕಾನೂನು ಅಥವಾ ನಡತೆ ಸಂಹಿತೆ ಉಲ್ಲಂಘನೆ ಕಂಡುಬಂದಲ್ಲಿ ಅನ್ವಯಿಸುವ ಕಾನೂನು ಮತ್ತು ನಿಯಮಗಳ ಪ್ರಕಾರ ಸಚಿವ ಲಕ್ಷ್ಮಣ್ ಸವದಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಅಗತ್ಯ ನಿರ್ದೇಶನ ನೀಡಬೇಕು ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ದೂರು ನೀಡಿದ್ದಾರೆ.
ಇದನ್ನೂ ಓದಿ : ಅಹೋರಾತ್ರಿ ಧರಣಿಗೆ ಪೊಲೀಸ್ ರಕ್ಷಣೆ ನೀಡುವಂತೆ ಸಮತಾ ಸೈನಿಕ ದಳ ಮನವಿ!



















