ಭೋಪಾಲ್: “ಹಲೋ, ನಾನು ದಿವ್ಯಾ ಮಾತನಾಡುತ್ತಿದ್ದೇನೆ” ಎಂಬ ಒಂದೇ ಒಂದು ವಾಟ್ಸ್‌ಆ್ಯಪ್ ಸಂದೇಶ ಮಧ್ಯಪ್ರದೇಶದ ಸೈಬರ್ ಅಪರಾಧ ಇತಿಹಾಸದಲ್ಲೇ ಅತ್ಯಂತ ದೊಡ್ಡ ವಂಚನೆ ಪ್ರಕರಣವನ್ನು ಬಯಲಿಗೆಳೆದಿದೆ. ಗ್ವಾಲಿಯರ್‌ನ 70 ವರ್ಷದ ಚಾರ್ಟರ್ಡ್ ಅಕೌಂಟೆಂಟ್ ಅಶೋಕ್ ವಿಜಯವರ್ಗೀಯ ಎಂಬವರಿಗೆ ಕ್ರಿಪ್ಟೋಕರೆನ್ಸಿ ಹೂಡಿಕೆಯಲ್ಲಿ ಅಪಾರ ಲಾಭದ ಆಮಿಷ ಒಡ್ಡಿ ಬರೋಬ್ಬರಿ 21.06 ಕೋಟಿ ರೂ.ಗಳನ್ನು ದೋಚಲಾಗಿದೆ. ಇದು ಉದ್ಯಮಿಗಳನ್ನು ಹಾದಿತಪ್ಪಿಸುವ ಗ್ಯಾಂಗ್‌ವೊಂದರ ತಂತ್ರ ಎಂಬುದು ಬಯಲಾಗಿದೆ. ಆರಂಭದಲ್ಲಿ ವಿಶ್ವಾಸಗಳಿಸಲು ಸಣ್ಣ ಪ್ರಮಾಣದ ಹಣ ಹಿಂಪಡೆಯಲು ಅವಕಾಶ ನೀಡಿ, ನಂತರ ನಕಲಿ ಟ್ರೇಡಿಂಗ್ ಪೋರ್ಟಲ್‌ನಲ್ಲಿ ಹೂಡಿಕೆ ಮೊತ್ತ 33 ಕೋಟಿ ರೂ.ಗೆ ಏರಿದೆ ಎಂದು ನಂಬಿಸಿ ಈ ಜಾಲ ಹಂತ ಹಂತವಾಗಿ ಕೋಟಿಗಟ್ಟಲೆ ಹಣವನ್ನು ಲೂಟಿ ಮಾಡಿದೆ.
ಬಿಜೆಪಿ ನಾಯಕನ ಬಂಧನ:
ಈ ಪ್ರಕರಣದ ತನಿಖೆ ನಡೆಸಿದ ಮಧ್ಯಪ್ರದೇಶ ಸೈಬರ್ ಪೊಲೀಸರು, ಶಾಜಾಪುರದ ಜಿಲ್ಲಾ ಪಂಚಾಯತ್ ಸದಸ್ಯ ಹಾಗೂ ಬಿಜೆಪಿ ನಾಯಕ ಜಗದೀಶ್ ಕುಮಾರ್ ಮಾಳವೀಯ ಎಂಬಾತನನ್ನು ಬಂಧಿಸಿದ್ದಾರೆ. ಸಂತ್ರಸ್ತರಿಂದ ದೋಚಲಾದ ಹಣದ ಪೈಕಿ 50 ಲಕ್ಷ ರೂ. ನೇರವಾಗಿ ಜಗದೀಶ್ ಮಾಳವೀಯನ ಖಾತೆಗೆ ವರ್ಗಾವಣೆಯಾಗಿರುವುದು ಪತ್ತೆಯಾಗಿದೆ. ತಾನು ಅಧ್ಯಕ್ಷನಾಗಿದ್ದ ಸಂಸ್ಥೆಯ ಬ್ಯಾಂಕ್ ಖಾತೆ ಮತ್ತು ಇಂಟರ್ನೆಟ್ ಬ್ಯಾಂಕಿಂಗ್ ವಿವರಗಳನ್ನು ಅಕ್ರಮ ಹಣ ವರ್ಗಾವಣೆಗೆ ಬಳಸಿಕೊಳ್ಳಲು ಬಿಟ್ಟುಕೊಟ್ಟಿದ್ದ ಈತ, ಅದಕ್ಕಾಗಿ ಶೇ.2ರಷ್ಟು ಕಮಿಷನ್ ಪಡೆಯುತ್ತಿದ್ದ ಎಂದು ತಿಳಿದುಬಂದಿದೆ. ಈತನ ಖಾತೆಗಳಲ್ಲಿ 2.5 ಕೋಟಿಗೂ ಹೆಚ್ಚು ಶಂಕಿತ ವ್ಯವಹಾರಗಳು ನಡೆದಿದ್ದು, ತನಿಖೆ ತೀವ್ರಗೊಳ್ಳುತ್ತಿದ್ದಂತೆ ಈತ ಬ್ಯಾಂಕಾಕ್‌ಗೆ ಪ್ರವಾಸ ಕೈಗೊಂಡು ವಿಲಾಸಿ ಜೀವನ ನಡೆಸಿದ್ದೂ ಬಯಲಾಗಿದೆ.
20,000 ಬ್ಯಾಂಕ್ ಖಾತೆಗಳು, 15 ಹಂತಗಳ ಜಾಲ
ವಂಚನೆಗೊಳಗಾದ 21.06 ಕೋಟಿ ರೂಪಾಯಿ ಮೊತ್ತವನ್ನು ಆರೋಪಿಗಳು ಕೇವಲ ಒಂದೆರಡು ಖಾತೆಗಳಲ್ಲಿ ಇಡದೆ, ಅತ್ಯಂತ ಸಂಕೀರ್ಣ ಜಾಲದ ಮೂಲಕ ಹರಡಿದ್ದಾರೆ. ಸಂತ್ರಸ್ತ ಸಿಎ ಅವರಿಂದ 76 ಬ್ಯಾಂಕ್ ಖಾತೆಗಳಿಗೆ 106 ವಹಿವಾಟುಗಳಲ್ಲಿ ಹಣ ಜಮೆ ಮಾಡಿಸಿದ್ದು, ಅಲ್ಲಿಂದ ಸುಮಾರು 15 ಹಂತಗಳಲ್ಲಿ 20,000ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳಿಗೆ ಹಣವನ್ನು ವಿಂಗಡಿಸಿ ಜಮಾ ಮಾಡಲಾಗಿದೆ. ಈ ಪೈಕಿ ಶೇಕಡಾ 35 ರಷ್ಟು ಹಣ ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಕೇರಳದ ಖಾತೆಗಳ ಮೂಲಕ ಹಾದುಹೋಗಿದೆ. ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಸುಮಾರು 2 ಕೋಟಿ ರೂಪಾಯಿಗಳನ್ನು ಫ್ರೀಜ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಭಾವಿಗಳ ಒತ್ತಡ ಮೆಟ್ಟಿ ನಿಂತು ಸೈಬರ್ ಪೊಲೀಸ್ ಕಾರ್ಯಚರಣೆ
ಆರೋಪಿ ಜಗದೀಶ್ ಮಾಳವೀಯನನ್ನು ಬಂಧಿಸಿದ ತಕ್ಷಣವೇ ಆತನನ್ನು ರಕ್ಷಿಸಲು ಕೆಲವು ಪ್ರಭಾವಿ ವ್ಯಕ್ತಿಗಳು ಪೊಲೀಸರ ಮೇಲೆ ಒತ್ತಡ ಹೇರಲು ಯತ್ನಿಸಿದ್ದರು ಎಂದು ಮೂಲಗಳು ತಿಳಿಸಿವೆ. ಆದರೆ ಇದು ರಾಜ್ಯದ ಅತ್ಯಂತ ದೊಡ್ಡ ಸೈಬರ್ ವಂಚನೆ ಪ್ರಕರಣ ಎಂದು ತಿಳಿದ ನಂತರ ಅವರು ಹಿಂದೆ ಸರಿದಿದ್ದಾರೆ. ಪ್ರಸ್ತುತ ನಕಲಿ ಕ್ರಿಪ್ಟೋ ಟ್ರೇಡಿಂಗ್ ಪ್ಲಾಟ್‌ಫಾರ್ಮ್ ಹಿನ್ನೆಲೆಯಲ್ಲಿರುವ ಮಾಸ್ಟರ್‌ಮೈಂಡ್‌ಗಳನ್ನು ಹುಡುಕಲು, ಅಮೆರಿಕದ ಕಂಟ್ರಿ ಕೋಡ್ ಹೊಂದಿರುವ ವಾಟ್ಸಾಪ್ ಸಂಖ್ಯೆಗಳು ಮತ್ತು ಐಪಿ ವಿಳಾಸಗಳನ್ನು ವಿಶ್ಲೇಷಿಸಲು ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.



















