ನವದೆಹಲಿ : ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (BCCI) ಮುಖ್ಯ ಆಯ್ಕೆಗಾರರಾಗಿರುವ ಅಜಿತ್ ಅಗರ್ಕರ್ ಅವರ ಅಧಿಕಾರಾವಧಿ ಶೀಘ್ರದಲ್ಲೇ ಮುಕ್ತಾಯಗೊಳ್ಳಲಿದ್ದು, ಅವರ ಸ್ಥಾನಕ್ಕೆ ಭಾರತ ತಂಡದ ಮಾಜಿ ದಿಗ್ಗಜ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಬರಲಿದ್ದಾರೆ ಎನ್ನುವ ವದಂತಿಗಳು ಕ್ರಿಕೆಟ್ ವಲಯದಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.
ಅಜಿತ್ ಅಗರ್ಕರ್ ಅವರ ಜಾಗಕ್ಕೆ ಅಶ್ವಿನ್ ಅವರೇ ಸೂಕ್ತ ಉತ್ತರಾಧಿಕಾರಿ ಎಂದು ಅಭಿಮಾನಿಗಳು ಹಾಗೂ ಕ್ರೀಡಾ ವಿಶ್ಲೇಷಕರು ಚರ್ಚಿಸುತ್ತಿದ್ದಾರೆ. ಆದರೆ, ವಾಸ್ತವದಲ್ಲಿ ಪ್ರಸ್ತುತ ಸಂದರ್ಭದಲ್ಲಿ ರವಿಚಂದ್ರನ್ ಅಶ್ವಿನ್ ಅವರು ಬಿಸಿಸಿಐ ಮುಖ್ಯ ಆಯ್ಕೆಗಾರರ ಸಮಿತಿಯ ಅಧ್ಯಕ್ಷರಾಗಲು ಸಾಧ್ಯವಿದೆಯೇ ಎನ್ನುವ ಪ್ರಶ್ನೆಗೆ ಮಂಡಳಿಯ ಕಟ್ಟುನಿಟ್ಟಿನ ನಿಯಮಗಳೇ ಸ್ಪಷ್ಟ ಉತ್ತರ ನೀಡುತ್ತವೆ.
ಬಿಸಿಸಿಐ ಕಠಿಣ ನಿಯಮಗಳು ಮತ್ತು ಅಶ್ವಿನ್ ನಿವೃತ್ತಿ
ಭಾರತೀಯ ಕ್ರಿಕೆಟ್ ಮಂಡಳಿಯ ಮುಖ್ಯ ಆಯ್ಕೆಗಾರ ಹುದ್ದೆಯನ್ನು ಏರಲು ಯಾವುದೇ ಅಭ್ಯರ್ಥಿಯು ಮಂಡಳಿಯು ನಿಗದಿಪಡಿಸಿರುವ ಕೆಲವು ಪ್ರಮುಖ ಮಾನದಂಡಗಳನ್ನು ಕಡ್ಡಾಯವಾಗಿ ಪೂರೈಸಬೇಕಾಗುತ್ತದೆ. ಬಿಸಿಸಿಐ ನಿಯಮಾವಳಿಯ ಪ್ರಕಾರ, ಆಯ್ಕೆ ಸಮಿತಿ ಸೇರಬಯಸುವ ಯಾವುದೇ ಮಾಜಿ ಆಟಗಾರ, ಅಂತಾರಾಷ್ಟ್ರೀಯ ಕ್ರಿಕೆಟ್‌ನ ಎಲ್ಲಾ ಮಾದರಿಗಳಿಂದ ನಿವೃತ್ತಿ ಹೊಂದಿ ಕನಿಷ್ಠ 5 ವರ್ಷಗಳು ಪೂರ್ಣಗೊಂಡಿರಬೇಕು.
ರವಿಚಂದ್ರನ್ ಅಶ್ವಿನ್ ಅವರು 2024ರ ಡಿಸೆಂಬರ್ 18ರಂದು ಆಸ್ಟ್ರೇಲಿಯಾ ಪ್ರವಾಸದ ವೇಳೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಹೀಗಾಗಿ, ಅವರು ನಿವೃತ್ತಿ ಘೋಷಿಸಿ ಕೇವಲ ಒಂದೆರಡು ವರ್ಷಗಳು ಕಳೆದಿದ್ದು, ಬಿಸಿಸಿಐ ಷರತ್ತಿನಂತೆ 5 ವರ್ಷಗಳ ಕಾಲಮಿತಿ ಇನ್ನೂ ಪೂರ್ಣಗೊಂಡಿಲ್ಲ. ವದಂತಿಗಳು ಎಷ್ಟೇ ಪ್ರಬಲವಾಗಿದ್ದರೂ, ಮಂಡಳಿಯ ನಿಯಮಗಳು ಪ್ರಸ್ತುತ ಅಶ್ವಿನ್ ಅವರಿಗೆ ಈ ಹುದ್ದೆಗೆ ಅರ್ಜಿ ಸಲ್ಲಿಸಲೂ ಅನುಮತಿ ನೀಡುವುದಿಲ್ಲ ಎಂಬುದು ಸ್ಪಷ್ಟ.
ಅಶ್ವಿನ್ ಅಧಿಕೃತವಾಗಿ ಯಾವಾಗ ಅರ್ಹತೆ ಪಡೆಯುತ್ತಾರೆ?
ರವಿಚಂದ್ರನ್ ಅಶ್ವಿನ್ ಅವರು ರಾಷ್ಟ್ರೀಯ ಕ್ರಿಕೆಟ್ ತಂಡದ ಮುಖ್ಯ ಆಯ್ಕೆಗಾರರಾಗಲು ಯಾವ ವರ್ಷದಲ್ಲಿ ಅಧಿಕೃತವಾಗಿ ಅರ್ಹತೆ ಗಳಿಸಿಕೊಳ್ಳುತ್ತಾರೆ ಎಂಬುದನ್ನು ಲೆಕ್ಕಾಚಾರ ಮಾಡುವುದಾದರೆ, 2024ರ ಡಿಸೆಂಬರ್ ತಿಂಗಳಿನಿಂದ 5 ವರ್ಷಗಳ ಅವಧಿಯನ್ನು ಪರಿಗಣಿಸಬೇಕಾಗುತ್ತದೆ. ಸಂಪೂರ್ಣ 5 ವರ್ಷಗಳ ವಿರಾಮದ ನಂತರವಷ್ಟೇ ಅವರು ಈ ಮಹತ್ವದ ಜವಾಬ್ದಾರಿಗೆ ನಾಮನಿರ್ದೇಶನಗೊಳ್ಳಲು ಅಥವಾ ಅರ್ಜಿ ಹಾಕಲು ಸಾಧ್ಯ. ಡಿಸೆಂಬರ್ 2029ಕ್ಕೆ ಅವರ ನಿವೃತ್ತಿಯ 5 ವರ್ಷಗಳ ಅವಧಿ ಪೂರ್ಣಗೊಳ್ಳಲಿದ್ದು, ಆ ನಂತರ, ಅಂದರೆ 2030ರ ಸೆಪ್ಟೆಂಬರ್ ವೇಳೆಗೆ ಸೂಕ್ತ ಪ್ರಕ್ರಿಯೆಗಳ ಮೂಲಕ ಅವರು ಅಧಿಕೃತವಾಗಿ ಈ ಹುದ್ದೆಗೆ ಸ್ಪರ್ಧಿಸಲು ಅಥವಾ ಆಯ್ಕೆಯಾಗಲು ಅರ್ಹರಾಗುತ್ತಾರೆ. ಅಲ್ಲಿಯವರೆಗೂ ಅವರುಮುಖ್ಯ ಆಯ್ಕೆಗಾರರಾಗಲಿದ್ದಾರೆ ಎಂಬ ಸುದ್ದಿ ಕೇವಲ ಕರಾರುವಕ್ಕಿಲ್ಲದ ಊಹಾಪೋಹವಷ್ಟೇ ಆಗಿರುತ್ತದೆ.
ಅಜಿತ್ ಅಗರ್ಕರ್ ಅವರ ಯಶಸ್ವಿ ಅಧಿಕಾರಾವಧಿ ಮತ್ತು ಸಾಧನೆ
2023ರ ಜುಲೈ ತಿಂಗಳಿನಿಂದ ಬಿಸಿಸಿಐ ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಮಾಜಿ ವೇಗಿ ಅಜಿತ್ ಅಗರ್ಕರ್, ತಂಡದ ಸಂಕ್ರಮಣ ಕಾಲದಲ್ಲಿ ಅತ್ಯಂತ ದಿಟ್ಟ ಹಾಗೂ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ. 2026ರ ಟಿ20 ವಿಶ್ವಕಪ್ ಗೆಲುವಿನ ನಂತರ ಅವರ ಒಪ್ಪಂದವನ್ನು ಮಂಡಳಿ ವಿಸ್ತರಿಸಿದೆ.
ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ (ಟಿ20 ಹಾಗೂ ಟೆಸ್ಟ್ ಕ್ರಿಕೆಟ್‌ನಿಂದ), ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ ಹಾಗೂ ರವಿಚಂದ್ರನ್ ಅಶ್ವಿನ್ ಅವರಂತಹ ದಿಗ್ಗಜರ ನಿವೃತ್ತಿಯಂತಹ ಸವಾಲಿನ ಘಟ್ಟಗಳನ್ನು ಅವರು ಅತ್ಯಂತ ಸಮರ್ಥವಾಗಿ ನಿಭಾಯಿಸಿದ್ದಾರೆ. ಈ ಹಿರಿಯ ಆಟಗಾರರ ನಿರ್ಗಮನದ ಹೊರತಾಗಿಯೂ, ಅಗರ್ಕರ್ ಅವರ ನೇತೃತ್ವದ ಆಯ್ಕೆ ಸಮಿತಿಯು ರಚಿಸಿದ ತಂಡ ಭಾರಿ ಯಶಸ್ಸನ್ನು ಸಾಧಿಸಿದೆ. 2024ರ ಟಿ20 ವಿಶ್ವಕಪ್, 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ, 2025ರ ಏಷ್ಯಾ ಕಪ್ ಹಾಗೂ 2026ರ ಟಿ20 ವಿಶ್ವಕಪ್ ಗೆಲುವುಗಳು ಅಗರ್ಕರ್ ಅವರ ಅಧಿಕಾರಾವಧಿಯ ಐತಿಹಾಸಿಕ ಮೈಲುಗಲ್ಲುಗಳಾಗಿವೆ. ಸದ್ಯ ಭಾರತ ತಂಡವು 2027ರ ಏಕದಿನ ವಿಶ್ವಕಪ್‌ಗೆ ಸಜ್ಜಾಗುತ್ತಿದ್ದು, ಈ ಟೂರ್ನಿಯಲ್ಲೂ ಟೀಮ್ ಇಂಡಿಯಾ ಗೆಲುವಿನ ನಗೆ ಬೀರಿದರೆ ಅಜಿತ್ ಅಗರ್ಕರ್ ಅವರ ವೃತ್ತಿಜೀವನಕ್ಕೆ ಮತ್ತೊಂದು ಶ್ರೇಷ್ಠ ಸಾಧನೆ ಸೇರ್ಪಡೆಯಾಗಲಿದೆ.
ಇದನ್ನೂ ಓದಿ : ಬಿಜೆಪಿಗೆ ಶೆಹಜಾದ್ ಪೂನಾವಾಲ ಗುಡ್ ಬೈ : ಸಕ್ರಿಯ ರಾಜಕೀಯಕ್ಕೆ ವಿದಾಯ ಹೇಳಿದ್ಯಾಕೆ ರಾಷ್ಟ್ರೀಯ ವಕ್ತಾರ?


















