ಬೆಂಗಳೂರು : ಪ್ರಮುಖ ಆನ್ಲೈನ್ ಆಹಾರ ವಿತರಣಾ ಸಂಸ್ಥೆ ಸ್ವಿಗ್ಗಿ ವಿರುದ್ಧ ಹೋಟೆಲ್ ಮಾಲೀಕರ ಸಂಘ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಆಗಸ್ಟ್ 15ರ ನಂತರ ಸ್ವಿಗ್ಗಿ ಸೇವೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವುದಾಗಿ ಬೆಂಗಳೂರು ಹೊಟೇಲ್ ಮಾಲೀಕರ ಸಂಘದ ಗೌರವಾಧ್ಯಕ್ಷ ಪಿಸಿ ರಾವ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಹೌದು.. ಆನ್ಲೈನ್ ಆಹಾರ ವಿತರಣಾ ಸಂಸ್ಥೆಯಾದ ಸ್ವಿಗ್ಗಿ ವಿರುದ್ಧ ಬೆಂಗಳೂರಿನ ಹೋಟೆಲ್ ಮಾಲೀಕರು ಸಿಡಿದೆದ್ದು, ಅನಗತ್ಯ ಕಮಿಷನ್ ಹಾಗೂ ವಿವಿಧ ಶುಲ್ಕಗಳ ಹೆಸರಿನಲ್ಲಿ ಭಾರಿ ಮೊತ್ತ ಕಡಿತ ಮಾಡಲಾಗುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಇನ್ನು ಮುಂದೆ ಸ್ವಿಗ್ಗಿಯೊಂದಿಗೆ ಯಾವುದೇ ವ್ಯವಹಾರ ನಡೆಸುವುದಿಲ್ಲ. ರಾಜ್ಯಾದ್ಯಂತ ಸ್ವಿಗ್ಗಿ ಸೇವೆಯನ್ನು ಸ್ಥಗಿತಗೊಳಿಸುವುದಾಗಿ ಎಚ್ಚರಿಕೆಯನ್ನೂ ನೀಡಿದ್ದಾರೆ.
ಆಕ್ರೋಶಕ್ಕೆ ಕಾರಣವೇನು?
ಆರಂಭದಲ್ಲಿ ಕೇವಲ 5% ಕಮಿಷನ್ ಪಡೆಯುತ್ತಿದ್ದ ಸ್ವಿಗ್ಗಿ ಸಂಸ್ಥೆ, ಈಗ ಸುಮಾರು 24% ಕಮಿಷನ್ ಪಡೆಯುತ್ತಿದ್ದು, ಅದರ ಮೇಲೂ ಜಿಎಸ್ಟಿ ವಿಧಿಸುತ್ತಿವೆ. ಇದಲ್ಲದೆ Clicks, Search Ads, Promotion, Top Picks, Brandverse Social Media Marketing Charge, Swiggy One Fee, Long Distance Fee ಹಾಗೂ Collection Charges ಸೇರಿದಂತೆ ಹಲವು ಹೆಸರಿನಲ್ಲಿ ಹೆಚ್ಚುವರಿ ಮೊತ್ತವನ್ನು ಕಡಿತ ಮಾಡಲಾಗುತ್ತಿದೆ ಎಂದು ಹೋಟೆಲ್ ಮಾಲೀಕರು ಆರೋಪಿಸಿದ್ದಾರೆ.
ಗ್ರಾಹಕರು ಪಾವತಿಸುವ ಮೊತ್ತಕ್ಕೆ ಹೋಲಿಸಿದರೆ ಹೋಟೆಲ್ಗಳಿಗೆ ಕೇವಲ 45ರಿಂದ 50% ಮಾತ್ರ ಪಾವತಿ ತಲುಪುತ್ತಿದೆ. ಕೆಲವು ಪ್ರಕರಣಗಳಲ್ಲಿ 160 ಆರ್ಡರ್ಗಳು ಬಂದಿದ್ದರೂ ಪೇಔಟ್ ಶೂನ್ಯವಾಗಿದ್ದು, ₹80 ಸಾವಿರ ವ್ಯವಹಾರ ನಡೆದಿದ್ದರೂ ಕೇವಲ ₹2 ಸಾವಿರ ಮಾತ್ರ ಪಾವತಿಯಾಗಿರುವ ಉದಾಹರಣೆಗಳಿವೆ ಎಂದು ಹೋಟೆಲ್ ಮಾಲೀಕರು ತಿಳಿಸಿದ್ದಾರೆ.
ಇನ್ನು, Toing Appನಲ್ಲಿ 20% ಕಮಿಷನ್ ಪಡೆಯುತ್ತಿದ್ದರೂ, ಹೋಟೆಲ್ ಮಾಲೀಕರ ಅನುಮತಿ ಪಡೆಯದೆ ಗ್ರಾಹಕರಿಗೆ ಡಿಸ್ಕೌಂಟ್ ನೀಡಲಾಗುತ್ತಿದೆ ಎಂದು ದೂರಿದ್ದಾರೆ. ಜೊತೆಗೆ ಆ್ಯಪ್ನಲ್ಲಿ Order On/Off, Order Reject ಅಥವಾ ಆಹಾರದ ಬೆಲೆ ನಿಯಂತ್ರಿಸುವ ಅಧಿಕಾರವೇ ಹೋಟೆಲ್ ಮಾಲೀಕರಿಗೆ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಾಗೆಯೇ ತಿಂಗಳ ಕೊನೆಯಲ್ಲಿ CPC, Ads, Promotion ಸೇರಿದಂತೆ ಹಲವು ಕಡಿತಗಳು ಆಗಿರುವುದು ನಂತರವೇ ಗೊತ್ತಾಗುತ್ತಿದೆ. ಹೋಟೆಲ್ ಮಾಲೀಕರಿಗೆ ತಿಳಿಯದ ರೀತಿಯಲ್ಲಿ ಪೇಔಟ್ನಲ್ಲಿ ಕಡಿತ ಮಾಡಲಾಗುತ್ತಿದೆ. ಈ ಕುರಿತು ಹಲವು ಬಾರಿ ಸ್ವಿಗ್ಗಿ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರೂ ಯಾವುದೇ ಶಾಶ್ವತ ಪರಿಹಾರ ಸಿಕ್ಕಿಲ್ಲ. ಸಂಬಂಧಪಟ್ಟ POC (Point of Contact) ಅಧಿಕಾರಿಗಳಿಗೆ ಇ-ಮೇಲ್ ಕಳುಹಿಸಿದರೂ ಸಮರ್ಪಕ ಸ್ಪಂದನೆ ದೊರೆಯುತ್ತಿಲ್ಲ. ಹಲವಾರು POC ಅಧಿಕಾರಿಗಳಿಗೆ ಕನ್ನಡ ಭಾಷೆ ತಿಳಿದಿಲ್ಲದ ಕಾರಣ ಸಮಸ್ಯೆಗಳನ್ನು ವಿವರಿಸುವುದಕ್ಕೂ ತೊಂದರೆಯಾಗುತ್ತಿದೆ ಎಂದು ಹೋಟೆಲ್ ಮಾಲೀಕರು ಹೇಳಿದ್ದಾರೆ.
ಇನ್ನು, ಹೋಟೆಲ್ ಮಾಲೀಕರೊಂದಿಗೆ ಸಮಾನ ಒಪ್ಪಂದದ ಆಧಾರದ ಮೇಲೆ ವ್ಯವಹಾರ ನಡೆಸುತ್ತಿಲ್ಲ. ಯಾವುದೇ ಪೂರ್ವ ಸೂಚನೆ ನೀಡದೆ ಹೊಸಹೊಸ ಶುಲ್ಕಗಳನ್ನು ಸೇರಿಸಲಾಗುತ್ತಿದೆ. “ಸ್ವಿಗ್ಗಿ ಹೋಟೆಲ್ಗಳಿಂದಲೇ ಬೆಳೆದಿವೆ. ಈಗ ಅದೇ ಹೋಟೆಲ್ ಉದ್ಯಮವನ್ನು ಸಂಕಷ್ಟಕ್ಕೆ ತಳ್ಳುತ್ತಿವೆ. ನಾವು ಸಾಮಾನ್ಯ ಹೋಟೆಲ್ ಉದ್ಯಮಿಗಳು. ನಷ್ಟದಲ್ಲಿ ವ್ಯವಹಾರ ನಡೆಸಲು ಸಾಧ್ಯವಿಲ್ಲ” ಎಂದು ಮಾಲೀಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಎಲ್ಲಾ ಸಮಸ್ಯೆಗಳ ಕುರಿತು ಚರ್ಚಿಸಲು ಸ್ವಿಗ್ಗಿ ಆಡಳಿತ ಮಂಡಳಿ ತಕ್ಷಣವೇ ಮಾತುಕತೆಗೆ ಬರಬೇಕು ಎಂದು ಹೋಟೆಲ್ ಮಾಲೀಕರು ಆಗ್ರಹಿಸಿದ್ದಾರೆ. ಒಂದೊಮ್ಮೆ ಮಾತುಕತೆ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ವಿಫಲವಾದರೆ ಆಗಸ್ಟ್ 15ರ ನಂತರ ಬೆಂಗಳೂರಿನ ಯಾವುದೇ ರೆಸ್ಟೋರೆಂಟ್ಗಳಿಂದ ಸ್ವಿಗ್ಗಿಗೆ ಪಾರ್ಸೆಲ್ ನೀಡುವುದನ್ನು ಸಂಪೂರ್ಣವಾಗಿ ನಿಲ್ಲಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ : 232 ಅಂಗನವಾಡಿ ಕಾರ್ಯಕರ್ತೆಯರ ಹುದ್ದೆ ನೇಮಕ : SSLC, ಪಿಯುಸಿ ಪಾಸಾದವರಿಗೆ ಚಾನ್ಸ್!



















