ಬೆಂಗಳೂರು: ಜುಲೈ-28 : ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನೇಮಕಾತಿ ಅಕ್ರಮಗಳ ಕುರಿತು ಸಮಗ್ರ ಸಿಬಿಐ ತನಿಖೆ ನಡೆಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.
ಈ ಕುರಿತು ಪ್ರಕಟಣೆ ನೀಡಿರುವ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ, ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ವಿರುದ್ಧ ಕೇಳಿಬಂದಿರುವ ನೇಮಕಾತಿ ಅಕ್ರಮ, ಸ್ವಜನಪಕ್ಷಪಾತ ಹಾಗೂ ಭ್ರಷ್ಟಾಚಾರದ ಆರೋಪಗಳು ರಾಜ್ಯದ ಲಕ್ಷಾಂತರ ಉದ್ಯೋಗಾಕಾಂಕ್ಷಿಗಳ ವಿಶ್ವಾಸವನ್ನು ಕುಸಿಯುವಂತೆ ಮಾಡಿವೆ ಎಂದು ಹೇಳಿದ್ದಾರೆ.
ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತದ ಆರೋಪಗಳ ಹಿನ್ನೆಲೆಯಲ್ಲಿ ಶಿವಶಂಕರಪ್ಪ ಸಾಹುಕಾರ್ ಅವರನ್ನು ಅಮಾನತುಗೊಳಿಸಲಾಗಿದ್ದು, ಹೈಕೋರ್ಟ್‌ನಲ್ಲಿಯೂ ಸಿಬಿಐ ತನಿಖೆಗೆ ಸಂಬಂಧಿಸಿದ ಅರ್ಜಿಗಳು ವಿಚಾರಣೆಯಲ್ಲಿವೆ. ಆದರೆ ಕೇವಲ ಇಲಾಖಾ ಮಟ್ಟದ ತನಿಖೆ ಸಾಕಾಗುವುದಿಲ್ಲ. ಕೆಪಿಎಸ್‌ಸಿಯ ವಿವಿಧ ನೇಮಕಾತಿಗಳಲ್ಲಿ ನಡೆದಿರುವ ಎಲ್ಲ ಅಕ್ರಮಗಳ ಕುರಿತು ಕೇಂದ್ರ ತನಿಖಾ ದಳ (ಸಿಬಿಐ)ದಿಂದ ಸ್ವತಂತ್ರ ಹಾಗೂ ಸಮಗ್ರ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಪಶುವೈದ್ಯಾಧಿಕಾರಿಗಳ ನೇಮಕಾತಿ ಸೇರಿದಂತೆ ಹಲವು ನೇಮಕಾತಿಗಳಲ್ಲಿ ಹಣದ ವ್ಯವಹಾರ ನಡೆದಿದೆ ಹಾಗೂ ಮಧ್ಯವರ್ತಿಗಳ ಮೂಲಕ ಉದ್ಯೋಗ ಮಾರಾಟವಾಗಿದೆ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ. ಈ ಎಲ್ಲ ಆರೋಪಗಳ ಸತ್ಯಾಸತ್ಯತೆಯನ್ನು ಸಮಗ್ರ ತನಿಖೆಯ ಮೂಲಕ ಬಹಿರಂಗಪಡಿಸಬೇಕಿದೆ ಎಂದು ತಿಳಿಸಿದ್ದಾರೆ.
ಸಾಹುಕಾರ್ ಅವರ ಅಧ್ಯಕ್ಷತೆಯ ಅವಧಿಯಲ್ಲಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದ ಸಾವಿರಾರು ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿರುವ ನಾರಾಯಣಗೌಡ, ಈ ಕುರಿತು ಪ್ರತ್ಯೇಕ ನ್ಯಾಯಾಂಗ ಅಥವಾ ಉನ್ನತ ಮಟ್ಟದ ತನಿಖೆ ನಡೆಸಿ ಅರ್ಹ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಕೆಪಿಎಸ್‌ಸಿ ರಾಜ್ಯದ ಆಡಳಿತ ವ್ಯವಸ್ಥೆಗೆ ಅಧಿಕಾರಿಗಳನ್ನು ಆಯ್ಕೆ ಮಾಡುವ ಸಾಂವಿಧಾನಿಕ ಸಂಸ್ಥೆಯಾಗಿದ್ದು, ಅದರ ಮೇಲಿನ ಸಾರ್ವಜನಿಕರ ವಿಶ್ವಾಸವನ್ನು ಮರುಸ್ಥಾಪಿಸಲು ಕಳೆದ ಹಲವು ವರ್ಷಗಳ ನೇಮಕಾತಿ ಪ್ರಕ್ರಿಯೆಗಳು, ಮೌಲ್ಯಮಾಪನ, ಮೀಸಲಾತಿ ಅನುಷ್ಠಾನ, ಅಂಕಗಳ ಹಂಚಿಕೆ ಹಾಗೂ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಗಳ ಸಮಗ್ರ ಪರಿಶೀಲನೆ ನಡೆಸಬೇಕು ಎಂದು ಅವರು ಹೇಳಿದ್ದಾರೆ.
ಕೆಪಿಎಸ್‌ಸಿಯ ಎಲ್ಲ ಪ್ರಮುಖ ನೇಮಕಾತಿ ಅಕ್ರಮಗಳ ಕುರಿತು ತಕ್ಷಣ ಸಿಬಿಐ ತನಿಖೆಗೆ ಶಿಫಾರಸು ಮಾಡುವುದು, ಸಾಹುಕಾರ್ ಅವರ ಅಧ್ಯಕ್ಷತೆಯ ಅವಧಿಯ ನೇಮಕಾತಿಗಳನ್ನು ಮರುಪರಿಶೀಲಿಸುವುದು, ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಆಗಿರುವ ಅನ್ಯಾಯದ ಕುರಿತು ಪ್ರತ್ಯೇಕ ತನಿಖೆ ನಡೆಸುವುದು, ಅಕ್ರಮ ಸಾಬೀತಾದರೆ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವುದು ಹಾಗೂ ಕೆಪಿಎಸ್‌ಸಿಯಲ್ಲಿ ಪಾರದರ್ಶಕತೆ ಮತ್ತು ವಿಶ್ವಾಸ ಮರುಸ್ಥಾಪಿಸಲು ಶಾಶ್ವತ ಸುಧಾರಣಾ ಕ್ರಮಗಳನ್ನು ಜಾರಿಗೊಳಿಸುವಂತೆ ಸರ್ಕಾರವನ್ನು ಕರ್ನಾಟಕ ರಕ್ಷಣಾ ವೇದಿಕೆ ಒತ್ತಾಯಿಸಿದೆ.
ರಾಜ್ಯದ ಲಕ್ಷಾಂತರ ಯುವಜನರ ಭವಿಷ್ಯದ ಪ್ರಶ್ನೆಯಾಗಿರುವ ಈ ಪ್ರಕರಣದಲ್ಲಿ ಸರ್ಕಾರ ಯಾವುದೇ ಮುಚ್ಚಿಹಾಕುವ ಪ್ರಯತ್ನ ಮಾಡದೆ, ಸತ್ಯ ಹೊರತಂದು ತಪ್ಪಿತಸ್ಥರಿಗೆ ಶಿಕ್ಷೆ ಹಾಗೂ ಅರ್ಹ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಬೇಕು ಎಂದು ಟಿ.ಎ. ನಾರಾಯಣಗೌಡ ಹೇಳಿದ್ದಾರೆ.
ಇದನ್ನೂ ಓದಿ : ಕ್ರೋಮಾ ಶೋರೂಮ್ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು : ಆರೋಪಿ ಬಂಧನ!


















