ಬೆಂಗಳೂರು : ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಹೈಕಮಾಂಡ್ ಮಟ್ಟದಲ್ಲಿ ಮಹತ್ವದ ಬೆಳವಣಿಗೆಗಳು ನಡೆದಿವೆ. ಕಳೆದ ರಾತ್ರಿ ದೆಹಲಿಯಲ್ಲಿ ಹೈಕಮಾಂಡ್ ನಾಯಕರೊಂದಿಗೆ ನಡೆದ ಸಭೆ ಯಶಸ್ವಿಯಾಗಿದ್ದು, 17ರಿಂದ 18 ಸಚಿವ ಸ್ಥಾನಗಳಿಗೆ ಹಸಿರು ನಿಶಾನೆ ದೊರೆತಿದೆ ಎನ್ನಲಾಗಿದೆ. ಉಳಿದ 2ರಿಂದ 3 ಸಚಿವ ಸ್ಥಾನಗಳ ಕುರಿತು ಇಂದು ಮತ್ತೊಂದು ಸುತ್ತಿನ ಸಭೆ ನಡೆಯಲಿದ್ದು, ಇದೇ ಸಭೆಯಲ್ಲಿ 20ಕ್ಕೆ 20 ಸಚಿವರ ಪಟ್ಟಿಯನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ.
ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಾಗೂ 2028ರ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಜಿಲ್ಲಾ ಮತ್ತು ಜಾತಿವಾರು ಸಮತೋಲನ ಸಾಧಿಸುವ ರೀತಿಯಲ್ಲಿ ಸಚಿವ ಸ್ಥಾನ ಹಂಚಿಕೆ ಕುರಿತು ಚರ್ಚೆ ನಡೆದಿದೆ ಎನ್ನಲಾಗಿದೆ. ಈ ಹಿನ್ನೆಲೆ ಸಂಪುಟ ವಿಸ್ತರಣೆಯಲ್ಲಿ ರಾಜಕೀಯ ಲೆಕ್ಕಾಚಾರಕ್ಕೂ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.
ಇದರ ಜೊತೆಗೆ ಹೆಚ್ಚುವರಿ ಉಪ ಮುಖ್ಯಮಂತ್ರಿ (ಡಿಸಿಎಂ) ಹುದ್ದೆಗಳ ಬೇಡಿಕೆಗೂ ಹೈಕಮಾಂಡ್ ಒಪ್ಪಿಗೆ ಸೂಚಿಸಿದೆ ಎನ್ನಲಾಗುತ್ತಿದೆ. ಒಂದು ಡಿಸಿಎಂ ಹುದ್ದೆಯನ್ನು ಲಿಂಗಾಯತ ಸಮುದಾಯಕ್ಕೆ ಹಾಗೂ ಮತ್ತೊಂದು ಹುದ್ದೆಯನ್ನು ಒಬಿಸಿ (OBC) ಸಮುದಾಯಕ್ಕೆ ನೀಡುವ ಕುರಿತು ಚರ್ಚೆ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಲಿಂಗಾಯತ ಕೋಟಾದಲ್ಲಿ ಎಂ.ಬಿ. ಪಾಟೀಲ್ ಅಥವಾ ಈಶ್ವರ್ ಖಂಡ್ರೆ ಅವರ ಹೆಸರುಗಳು ಮುಂಚೂಣಿಯಲ್ಲಿದ್ದರೆ, ಒಬಿಸಿ ಕೋಟಾದಲ್ಲಿ ಸತೀಶ್ ಜಾರಕಿಹೊಳಿ ಅಥವಾ ಜಮೀರ್ ಅಹ್ಮದ್ ಖಾನ್ ಅವರ ಹೆಸರುಗಳು ಕೇಳಿಬರುತ್ತಿವೆ. ಆದರೆ, ಸದ್ಯದ ಮಾಹಿತಿಯ ಪ್ರಕಾರ ಎಂ.ಬಿ. ಪಾಟೀಲ್ ಹಾಗೂ ಸತೀಶ್ ಜಾರಕಿಹೊಳಿ ಅವರಿಗೆ ಡಿಸಿಎಂ ಹುದ್ದೆ ಸಿಗುವ ಸಾಧ್ಯತೆ ಹೆಚ್ಚು ಎನ್ನಲಾಗಿದೆ.
ಇಂದು ದೆಹಲಿಯಲ್ಲಿ ನಡೆಯಲಿರುವ ಸಭೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಸೇರಿದಂತೆ ಪ್ರಮುಖ ನಾಯಕರು ಅಂತಿಮ ಪಟ್ಟಿಗೆ ಒಪ್ಪಿಗೆ ಪಡೆದು ರಾಜ್ಯಕ್ಕೆ ಮರಳುವ ನಿರೀಕ್ಷೆಯಿದೆ.
ನಾಳೆ ಹಾಗೂ ನಾಡಿದ್ದು ರಾಜ್ಯಪಾಲರು ಕರ್ನಾಟಕದಲ್ಲಿ ಇರುವುದಿಲ್ಲ ಎಂಬ ಕಾರಣದಿಂದ ಯಾವುದೇ ಗೊಂದಲ ಉಂಟಾಗದಂತೆ ಗುರುವಾರ ಸಂಜೆ ನೂತನ ಸಚಿವರ ಪಟ್ಟಿಯನ್ನು ಪ್ರಕಟಿಸುವ ಸಾಧ್ಯತೆ ಇದೆ. ಬಳಿಕ ಶುಕ್ರವಾರ ಲೋಕಭವನದಲ್ಲಿ ನೂತನ ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭವನ್ನು ನಡೆಸುವ ಕುರಿತು ಕಾಂಗ್ರೆಸ್ ನಾಯಕರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ : ರಾಜ್ಯ ಸರ್ಕಾರಕ್ಕೆ ಸಂಕಷ್ಟ – ನೀಟ್ ರೀತಿ KPSC ಅಕ್ರಮದ ವಿರುದ್ಧ ಹೋರಾಟಕ್ಕೆ ಸಜ್ಜಾದ Gen-Zಗಳು!


















