ಬೆಂಗಳೂರು : ವೃದ್ಧ ದಂಪತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಬೆಂಗಳೂರಿನ ಮಂಜುನಾಥ ನಗರದಲ್ಲಿ ನಡೆದಿದೆ. ಮೃತರನ್ನು ಈಶ್ವರ್ ಆಚಾರಿ (73) ಹಾಗೂ ಗೌರಿ (66) ಎಂದು ಗುರುತಿಸಲಾಗಿದೆ.
ಇಬ್ಬರು ಹೆಣ್ಣುಮಕ್ಕಳಿಗೆ ಮದುವೆ ಮಾಡಿಕೊಟ್ಟಿದ್ದ ದಂಪತಿ, ಮನೆಯಲ್ಲಿ ಇಬ್ಬರೇ ವಾಸವಾಗಿದ್ದರು. ಗೌರಿ ಅನಾರೋಗ್ಯದಿಂದ ಬಳಲುತ್ತಿದ್ದು, ಸೊಂಟದ ಸ್ವಾಧೀನ ಕಳೆದುಕೊಂಡು ಹಾಸಿಗೆ ಹಿಡಿದಿದ್ದರು ಎನ್ನಲಾಗಿದೆ. ಅವರ ಚಿಕಿತ್ಸೆಯ ವೆಚ್ಚವನ್ನು ಇಬ್ಬರು ಹೆಣ್ಣುಮಕ್ಕಳು ನೋಡಿಕೊಳ್ಳುತ್ತಿದ್ದರು. ಆದರೆ, ತಮ್ಮಿಂದ ಮಕ್ಕಳಿಗೆ ಕಷ್ಟವಾಗುತ್ತಿದೆ ಎಂದು ನೊಂದುಕೊಂಡಿದ್ದ ದಂಪತಿ, ರಾತ್ರಿ ಮನೆಯಲ್ಲಿ ವಿಷ ಸೇವಿಸಿ ಮಲಗಿದ್ದರು.
ಬೆಳಗ್ಗೆ ಮಗಳು ಕರೆ ಮಾಡಿದಾಗ ಇಬ್ಬರೂ ಕರೆ ಸ್ವೀಕರಿಸಿರಲಿಲ್ಲ. ಅನುಮಾನಗೊಂಡು ಮನೆಗೆ ಬಂದು ನೋಡಿದಾಗ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿರುವ ಬಸವೇಶ್ವರ ನಗರ ಪೊಲೀಸರು ಪರಿಶೀಲನೆ ನಡೆಸುತ್ತಿದ್ದು, ಪ್ರಕರಣದ ಕುರಿತು ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ : ಪ್ರಧಾನಿ ಮೋದಿಯನ್ನು ನಿಂದಿಸಿದ್ದ ಯುವಕ ಪೊಲೀಸ್ ವಶಕ್ಕೆ!



















