ನವದೆಹಲಿ : ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ಪರ ಆಡಿರುವ ಕ್ರಿಕೆಟಿಗ ಶಶಾಂಕ್ ಸಿಂಗ್ ವಿರುದ್ಧ ದಾಖಲಾಗಿರುವ ಹಲ್ಲೆ ಪ್ರಕರಣಕ್ಕೆ ಇದೀಗ ಹೊಸ ತಿರುವು ಸಿಕ್ಕಿದೆ. ತಮ್ಮ ಮನೆಯ ಅಡುಗೆ ಸಿಬ್ಬಂದಿಗೆ ಹಲ್ಲೆ ನಡೆಸಿ, ಅಕ್ರಮವಾಗಿ ಬಂಧನದಲ್ಲಿರಿಸಿದ್ದಾರ ಎಂಬ ಆರೋಪಗಳ ಬೆನ್ನಲ್ಲೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಪ್ರತಿಕ್ರಿಯಿಸಿರುವ ಶಶಾಂಕ್ ಸಿಂಗ್, ತಮ್ಮ ಮೇಲಿನ ಎಲ್ಲಾ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ಬದಲಾಗಿ, ತಮ್ಮ ಮನೆಯಲ್ಲಿ ಕೆಲಸಕ್ಕೆ ಬಂದಿದ್ದ ವ್ಯಕ್ತಿಯೇ ಅನುಮತಿ ಇಲ್ಲದೆ ಮನೆಯ ಖಾಸಗಿ ಭಾಗಗಳಿಗೆ ಪ್ರವೇಶಿಸಿ ವಿಡಿಯೋ ಹಾಗೂ ಫೋಟೋಗಳನ್ನು ಚಿತ್ರೀಕರಿಸಿದ್ದ ಎಂದು ಗಂಭೀರ ಆರೋಪ ಮಾಡಿದ್ದಾರೆ. ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸುತ್ತಿರುವ ನಡುವೆಯೇ ಶಶಾಂಕ್ ಅವರ ಹೇಳಿಕೆ ಪ್ರಕರಣಕ್ಕೆ ಹೊಸ ಆಯಾಮ ನೀಡಿದೆ.
‘ಬಂಧನದಲ್ಲಿಟ್ಟೇ ಇರಲಿಲ್ಲ’ ಎಂದು ಸ್ಪಷ್ಟನೆ
ಮಧ್ಯಪ್ರದೇಶದ ಭೋಪಾಲ್‌ನ ರತಿಬಾದ್ ಪೊಲೀಸ್ ಠಾಣೆಯಲ್ಲಿ ಶಶಾಂಕ್ ಸಿಂಗ್, ಅವರ ತಂದೆ ಹಾಗೂ ನಿವೃತ್ತ ಐಪಿಎಸ್ ಅಧಿಕಾರಿ ಶೈಲೇಶ್ ಸಿಂಗ್ ಮತ್ತು ಕುಟುಂಬದ ಚಾಲಕ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಮನೆಯ ಅಡುಗೆ ಸಿಬ್ಬಂದಿಯಾಗಿದ್ದ ವಿಪೇಂದ್ರ ಸಿಂಗ್ ತೋಮರ್, ತಮ್ಮ ಮೇಲೆ ಹಲ್ಲೆ ನಡೆಸಲಾಗಿದೆ, ನಿಂದಿಸಲಾಗಿದೆ ಹಾಗೂ ಬಲವಂತವಾಗಿ ಬಂಧನದಲ್ಲಿರಿಸಲಾಗಿತ್ತು ಎಂದು ದೂರು ನೀಡಿದ್ದರು. ಈ ಆರೋಪಗಳಿಗೆ ಪ್ರತಿಕ್ರಿಯಿಸಿದ ಶಶಾಂಕ್, “ಅಂತಹ ಯಾವುದೇ ಘಟನೆ ನಡೆದಿಲ್ಲ. ಜೂನ್ 25ರ ಸಂಜೆ ಮನೆಗೆ ಬಂದ ವ್ಯಕ್ತಿ ಜೂನ್ 28ರ ಬೆಳಗ್ಗೆ ಅಲ್ಲಿಂದ ಹೊರಟಿದ್ದಾನೆ. ಹಾಗಿದ್ದಾಗ ಅವರನ್ನು ಬಂಧನದಲ್ಲಿಟ್ಟಿದ್ದೆವು ಎಂದು ಹೇಗೆ ಹೇಳಬಹುದು?” ಎಂದು ಪ್ರಶ್ನಿಸಿದ್ದಾರೆ.
‘ಅಡುಗೆ ಮಾಡಲು ಬರುತ್ತದೆ ಎಂದು ಹೇಳಿ, ನಂತರ ತಾನೇ ಒಪ್ಪಿಕೊಂಡ’
ಅಡುಗೆ ಸಿಬ್ಬಂದಿ ತಮ್ಮ ಅನುಭವದ ಬಗ್ಗೆ ತಪ್ಪು ಮಾಹಿತಿ ನೀಡಿದ್ದ ಎಂದು ಶಶಾಂಕ್ ಆರೋಪಿಸಿದ್ದಾರೆ. “ಅವರು ಎಲ್ಲಾ ರೀತಿಯ ಅಡುಗೆ ಮಾಡಬಲ್ಲೆ ಎಂದು ಹೇಳಿದ್ದರು. ಆದರೆ ಕೆಲವೇ ದಿನಗಳಲ್ಲಿ ತಮಗೆ ಸರಿಯಾಗಿ ಅಡುಗೆ ಮಾಡಲು ಬರುವುದಿಲ್ಲ ಎಂದು ತಾವೇ ಒಪ್ಪಿಕೊಂಡರು. ಇಂತಹ ವ್ಯಕ್ತಿಯ ಮಾತನ್ನು ಹೇಗೆ ನಂಬಲು ಸಾಧ್ಯ?” ಎಂದು ಶಶಾಂಕ್ ಪ್ರಶ್ನಿಸಿದ್ದಾರೆ. ಅವರ ತಂದೆಯ ಸ್ನೇಹಿತರೊಬ್ಬರ ಶಿಫಾರಸಿನ ಮೇರೆಗೆ ಆ ವ್ಯಕ್ತಿಯನ್ನು ಕೆಲಸಕ್ಕೆ ನೇಮಿಸಲಾಗಿತ್ತು ಎಂದು ಕೂಡ ಅವರು ತಿಳಿಸಿದ್ದಾರೆ.
‘ಮಲಗುವ ಕೋಣೆಯಲ್ಲೂ ವಿಡಿಯೋ ಮಾಡಿದ್ದ’
ಪ್ರಕರಣದ ಅತ್ಯಂತ ಗಂಭೀರ ಅಂಶವನ್ನು ಪ್ರಸ್ತಾಪಿಸಿದ ಶಶಾಂಕ್, ಮನೆಯ ಖಾಸಗಿ ಪ್ರದೇಶಗಳಲ್ಲಿ ಅಡುಗೆ ಸಿಬ್ಬಂದಿ ಅನುಮತಿ ಇಲ್ಲದೆ ವಿಡಿಯೋ ಚಿತ್ರೀಕರಿಸಿದ್ದಾನೆ ಎಂದು ಆರೋಪಿಸಿದ್ದಾರೆ. “ಅವರು ಮನೆಯೊಳಗೆ ಬಂದ ನಂತರ ಬೆಡ್‌ರೂಮ್‌ಗಳವರೆಗೂ ಹೋಗಿ ವಿಡಿಯೋಗಳನ್ನು ಚಿತ್ರೀಕರಿಸುತ್ತಿದ್ದರು. ದುಬಾರಿ ವಸ್ತುಗಳನ್ನು ಇಟ್ಟಿದ್ದ ಕೊಠಡಿಗಳಲ್ಲಿಯೂ ವಿಡಿಯೋ ಮಾಡಿ, ಅವುಗಳನ್ನು ಇತರರಿಗೆ ಕಳುಹಿಸುತ್ತಿದ್ದರು. ಈ ನಡೆ ಅನುಮಾನ ಹುಟ್ಟಿಸಿತು,” ಎಂದು ಶಶಾಂಕ್ ಹೇಳಿದ್ದಾರೆ. ಈ ಕಾರಣದಿಂದಲೇ ಅವರನ್ನು ಕೆಲಸದಿಂದ ತೆಗೆದುಹಾಕುವ ನಿರ್ಧಾರ ಕೈಗೊಳ್ಳಲಾಯಿತು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಮುಂಗಡ ಹಣದ ಬೇಡಿಕೆಯ ಆರೋಪ
ಶಶಾಂಕ್ ಅವರ ಪ್ರಕಾರ, ಕೆಲಸಕ್ಕೆ ಸೇರಿದ ತಕ್ಷಣವೇ ಅಡುಗೆ ಸಿಬ್ಬಂದಿ 20,000 ರೂ. ಮುಂಗಡ ಹಣವನ್ನು ಕೇಳಿದ್ದರು. ಕುಟುಂಬದವರು ಮೊದಲು ಕೆಲವು ದಿನ ಕೆಲಸ ಮಾಡಿ ತೋರಿಸಲು ಸೂಚಿಸಿದ್ದು, ನಂತರ ಸಂಬಳ ಹಾಗೂ ಮುಂದಿನ ನೇಮಕಾತಿಯ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದರು. ಆದರೆ ಬಳಿಕ ಅವರ ವರ್ತನೆ ಅನುಮಾನಾಸ್ಪದವಾಗಿ ಕಂಡ ಕಾರಣ ಪರಿಸ್ಥಿತಿ ಬದಲಾಗಿದೆ ಎಂದು ಶಶಾಂಕ್ ಹೇಳಿದ್ದಾರೆ.
ಪ್ರಕರಣದ ತನಿಖೆ ಮುಂದುವರಿಕೆ
ಇದಕ್ಕೂ ಮೊದಲು ಅಡುಗೆ ಸಿಬ್ಬಂದಿಯ ದೂರಿನ ಆಧಾರದ ಮೇಲೆ ಪೊಲೀಸರು ಶಶಾಂಕ್ ಸಿಂಗ್, ಅವರ ತಂದೆ ಶೈಲೇಶ್ ಸಿಂಗ್ ಹಾಗೂ ಚಾಲಕ ವಿರುದ್ಧ ಹಲ್ಲೆ, ನಿಂದನೆ, ಮೊಬೈಲ್ ಕಸಿದುಕೊಂಡ ಆರೋಪ ಸೇರಿದಂತೆ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಿದ್ದರು. ದೂರಿನಲ್ಲಿ, ಕೆಲಸ ಬಿಟ್ಟು ಹೋಗುವುದಾಗಿ ತಿಳಿಸಿದ ಬಳಿಕ ತಮ್ಮ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಮತ್ತೊಂದೆಡೆ, ಈ ಎಲ್ಲಾ ಆರೋಪಗಳನ್ನು ಶಶಾಂಕ್ ಸಿಂಗ್ ಸಂಪೂರ್ಣವಾಗಿ ನಿರಾಕರಿಸಿದ್ದು, ದೂರುದಾರನ ವರ್ತನೆಯೇ ಅನುಮಾನಾಸ್ಪದವಾಗಿತ್ತು ಎಂದು ಪ್ರತಿಪಾದಿಸಿದ್ದಾರೆ. ಸದ್ಯ ಎರಡೂ ಕಡೆಯ ವಾದಗಳನ್ನು ಪರಿಶೀಲಿಸುತ್ತಿರುವ ಭೋಪಾಲ್ ಪೊಲೀಸರು ಪ್ರಕರಣದ ತನಿಖೆಯನ್ನು ಮುಂದುವರಿಸಿದ್ದಾರೆ. ಆರೋಪಗಳು ಮತ್ತು ಪ್ರತಿಯಾರೋಪಗಳ ಸತ್ಯಾಸತ್ಯತೆ ತನಿಖೆಯ ಬಳಿಕವೇ ಸ್ಪಷ್ಟವಾಗಲಿದೆ.
ಇದನ್ನೂ ಓದಿ : ಇಂಗ್ಲೆಂಡ್ ಸರಣಿ : ಸೂರ್ಯವಂಶಿ ಡೆಬ್ಯೂಗೆ ಬ್ರೇಕ್? ಸೀನಿಯರ್ ಆಟಗಾರ ಬೆಂಬಲಕ್ಕೆ ನಿಂತ ಅಯ್ಯರ್!


















