ಚೆನ್ನೈ : ಮುಂಬರುವ 2027ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾದ ಪ್ರಮುಖ ಸ್ಪಿನ್ನರ್ ಆಗಿ ಕುಲದೀಪ್ ಯಾದವ್ ಅವರನ್ನು ಕಣಕ್ಕಿಳಿಸಬೇಕು ಎಂದು ಭಾರತದ ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಬಲವಾಗಿ ಪ್ರತಿಪಾದಿಸಿದ್ದಾರೆ. ಪ್ರಸ್ತುತ ಭಾರತ ತಂಡದಲ್ಲಿರುವ ಅತ್ಯಂತ ಅನುಭವಿ ಸ್ಪಿನ್ನರ್‌ಗಳಲ್ಲಿ ಒಬ್ಬರಾಗಿರುವ ಕುಲದೀಪ್ ಯಾದವ್, ಆಗಾಗ ಪ್ಲೇಯಿಂಗ್ 11 (ಆಡುವ ಬಳಗ) ನಿಂದ ಹೊರಗುಳಿಯುತ್ತಿರುವುದು ಅವರ ಭವಿಷ್ಯದ ಬಗ್ಗೆ ಅನಿಶ್ಚಿತತೆ ಮೂಡಿಸಿದೆ.
ಈ ಬಗ್ಗೆ ಕ್ರಿಕ್‌ಇನ್ಫೋ ವಿಡಿಯೋವೊಂದರಲ್ಲಿ ಮಾತನಾಡಿರುವ ಅಶ್ವಿನ್, ಕುಲದೀಪ್ ಅವರ ಸಾಮರ್ಥ್ಯ ಮತ್ತು ಸಾಧನೆಯನ್ನು ಪರಿಗಣಿಸಿ ಅವರಿಗೆ ತಂಡದಲ್ಲಿ ಕಾಯಂ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಆಡುವ ಬಳಗದಲ್ಲಿ ಸ್ಥಾನ ಪಡೆಯಲು ಅರ್ಹ ಆಟಗಾರ
ಕುಲದೀಪ್ ಯಾದವ್ ಈಗಾಗಲೇ ಹಲವು ಬಾರಿ ತಮ್ಮ ಅದ್ಭುತ ಸ್ಪಿನ್ ಮೋಡಿಯನ್ನು ಸಾಬೀತುಪಡಿಸಿದ್ದಾರೆ. ಹೀಗಾಗಿ ಅವರು ಯಾವುದೇ ಅನುಮಾನವಿಲ್ಲದೆ ಆಡುವ ಬಳಗದಲ್ಲಿ ಸ್ಥಾನ ಪಡೆಯಲು ಅರ್ಹರಾಗಿದ್ದಾರೆ ಎಂದು ಅಶ್ವಿನ್ ಹೇಳಿದ್ದಾರೆ. “ಕುಲದೀಪ್ ತಮ್ಮ ಸಾಮರ್ಥ್ಯವನ್ನು ತೋರಿಸಲು ಆಡುವ ಹನ್ನೊಂದರ ಬಳಗಕ್ಕೆ ನೇರವಾಗಿ ಪ್ರವೇಶಿಸಲು ಅರ್ಹರು ಎಂದು ನಾನು ಭಾವಿಸುತ್ತೇನೆ.
ಅವರಿಗೆ ಆ ರೀತಿಯ ನಿರಂತರ ಅವಕಾಶಗಳನ್ನು ಯಾರೂ ನೀಡಿಲ್ಲ. ನಾನೇ ಅಲ್ಲಿ ಇದ್ದಿದ್ದರೆ ಖಂಡಿತವಾಗಿಯೂ ನನಗೆ ಅವಕಾಶ ನೀಡಬೇಕೆಂದು ಬಯಸುತ್ತಿದ್ದೆ. ಒಬ್ಬ ಆಟಗಾರ ತನ್ನದೇ ಆದ ನಿಯಮಗಳ ಮೇಲೆ ಯಶಸ್ವಿಯಾಗಬೇಕು ಅಥವಾ ವಿಫಲನಾಗಬೇಕು” ಎಂದು ಅಶ್ವಿನ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವಕಾಶ ನೀಡಿದಾಗ ವಿಫಲರಾದರೆ ಅದು ಬೇರೆ ಮಾತು, ಆದರೆ ಅವರಿಗೆ ತಂಡಕ್ಕೆ ಕೊಡುಗೆ ನೀಡುವ ಹಕ್ಕಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಒತ್ತಡ ನಿಭಾಯಿಸುವ ಕಲೆ ಅರಿತಿರುವ ಕುಲದೀಪ್
ಈವರೆಗೆ 18 ಟೆಸ್ಟ್ ಪಂದ್ಯಗಳನ್ನಾಡಿ 79 ವಿಕೆಟ್‌ಗಳನ್ನು ಕಬಳಿಸಿರುವ ಕುಲದೀಪ್ ಯಾದವ್, ಒತ್ತಡದ ಸಂದರ್ಭಗಳನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ಚೆನ್ನಾಗಿ ಅರಿತಿದ್ದಾರೆ. ಅವರ ಬೌಲಿಂಗ್ ಕೌಶಲ್ಯ, ಛಲ ಮತ್ತು ಮಾನಸಿಕ ಸ್ಥೈರ್ಯವು ದೀರ್ಘ ಮಾದರಿಯ ಆಟಕ್ಕೂ ಹೇಳಿ ಮಾಡಿಸಿದಂತಿದೆ. ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾದಲ್ಲಿ ನಡೆಯಲಿರುವ 2027ರ ಏಕದಿನ ವಿಶ್ವಕಪ್‌ಗಾಗಿ ಗೌತಮ್ ಗಂಭೀರ್ ನೇತೃತ್ವದ ಟೀಮ್ ಮ್ಯಾನೇಜ್‌ಮೆಂಟ್ 31 ವರ್ಷದ ಈ ಸ್ಪಿನ್ನರ್‌ಗೆ ಬೆಂಬಲ ನೀಡಬೇಕು ಎಂದು ಅಶ್ವಿನ್ ಆಗ್ರಹಿಸಿದ್ದಾರೆ. “ಕೋಚ್‌ಗಳು ಹಾಗೂ ಸಹ ಆಟಗಾರರು ಅವರ ಬೆನ್ನಿಗೆ ನಿಂತು, ಅವರಲ್ಲಿ ಆತ್ಮವಿಶ್ವಾಸ ತುಂಬಬೇಕು. ಯಾವುದೇ ಒತ್ತಡವಿಲ್ಲದೆ ಅವರು ತಮ್ಮ ಕೌಶಲ್ಯವನ್ನು ಪ್ರದರ್ಶಿಸಲು ಅವಕಾಶ ಮಾಡಿಕೊಡಬೇಕು” ಎಂದು ಅಶ್ವಿನ್ ಸಲಹೆ ನೀಡಿದ್ದಾರೆ.
ರೋಹಿತ್ ಶರ್ಮಾ ನಾಯಕತ್ವದಲ್ಲಿ ಕುಲದೀಪ್ ಕಮಾಲ್
ಮಾಜಿ ನಾಯಕ ರೋಹಿತ್ ಶರ್ಮಾ ಅವರು ಕುಲದೀಪ್ ಯಾದವ್ ಅವರನ್ನು ಅದ್ಭುತವಾಗಿ ಬಳಸಿಕೊಂಡಿದ್ದರು ಎಂಬುದನ್ನು ಅಶ್ವಿನ್ ಇದೇ ವೇಳೆ ಸ್ಮರಿಸಿದ್ದಾರೆ. “ರೋಹಿತ್ ಶರ್ಮಾ ಅವರ ನಾಯಕತ್ವದಲ್ಲಿ ಕುಲದೀಪ್ ಯಾದವ್ ತಮ್ಮ ನೈಜ ಸಾಮರ್ಥ್ಯಕ್ಕೆ ಮರಳಿದರು ಮತ್ತು ತಮ್ಮನ್ನು ತಾವು ಅದ್ಭುತವಾಗಿ ವ್ಯಕ್ತಪಡಿಸಲು ಸಾಧ್ಯವಾಯಿತು” ಎಂದು ಅಶ್ವಿನ್ ಶ್ಲಾಘಿಸಿದ್ದಾರೆ. ಇದೇ ರೀತಿಯ ಒಡನಾಟ ಮತ್ತು ಬೆಂಬಲವನ್ನು ಪ್ರಸ್ತುತ ತಂಡದ ನಾಯಕ ಶುಭಮನ್ ಗಿಲ್ ಮತ್ತು ಮ್ಯಾನೇಜ್ಮೆಂಟ್‌ನಿಂದ ಕುಲದೀಪ್ ನಿರೀಕ್ಷಿಸುತ್ತಿದ್ದಾರೆ. ಅವರು ಖಂಡಿತವಾಗಿಯೂ ಈ ಬೆಂಬಲಕ್ಕೆ ಅರ್ಹರಾಗಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : 2027ರ ಏಕದಿನ ವಿಶ್ವಕಪ್ ಮೇಲೆ ಕಣ್ಣು : ಟೀಮ್ ಇಂಡಿಯಾ ಮುಖ್ಯ ಆಯ್ಕೆಗಾರನಾಗಿ ಅಗರ್ಕರ್ ಅಧಿಕಾರಾವಧಿ ವಿಸ್ತರಣೆ



















