ಪುಣೆ : ಮಹಾರಾಷ್ಟ್ರದ ಲೋಹಗಢ್ ಕೋಟೆಯಲ್ಲಿ ನಡೆದ ಯುವ ಉದ್ಯಮಿ ಕೇತನ್ ಅಗರ್ವಾಲ್ ಹತ್ಯೆ ಪ್ರಕರಣದ ತನಿಖೆ ಮುಂದುವರಿದಂತೆ, ಆರೋಪಿಗಳಾದ ಸಿಯಾ ಗೋಯಲ್ ಮತ್ತು ಆಕೆಯ ಪ್ರಿಯಕರ ಚೇತನ್ ಚೌಧರಿ ನಡೆಸಿರುವ ಅತ್ಯಂತ ವ್ಯವಸ್ಥಿತ ಹಾಗೂ ಕ್ರೂರ ಸಂಚಿನ ಆಘಾತಕಾರಿ ವಿವರಗಳು ಬಹಿರಂಗವಾಗಿವೆ. ಇವರಿಬ್ಬರೂ ಕೊಲೆಗೂ ಮುನ್ನ ಹೇಗೆಲ್ಲ ಕೊಲೆ ಮಾಡಬಹುದು ಎಂದು ಗೂಗಲ್‌ನಲ್ಲಿ ಸರ್ಚ್ ಮಾಡಿದ್ದರು. ಹತ್ಯೆ ಮಾಡುವ ವಿವಿಧ ವಿಧಾನಗಳ ಬಗ್ಗೆ ಹುಡುಕಾಟ ನಡೆಸಿದ್ದಲ್ಲದೆ, ಸಿಕ್ಕಿಬಿದ್ದರೆ ಪೊಲೀಸರ ಮುಂದೆ ನೀಡಬೇಕಾದ ಉತ್ತರಗಳನ್ನೂ ಮುಂಚಿತವಾಗಿಯೇ ಸಿದ್ಧಪಡಿಸಿಕೊಂಡು ತಾಲೀಮು ನಡೆಸಿದ್ದರು ಎಂಬ ಸಂಗತಿ ಪೊಲೀಸ್ ತನಿಖೆಯಿಂದ ಬಹಿರಂಗಗೊಂಡಿದೆ.
ಹತ್ಯೆಗಾಗಿ ಕೋಟೆಯಲ್ಲೇ ನಡೆದಿತ್ತು ‘ರಿಹರ್ಸಲ್’
ಪೊಲೀಸ್ ಮೂಲಗಳ ಪ್ರಕಾರ, ಆರೋಪಿಗಳಾದ ಸಿಯಾ ಮತ್ತು ಚೇತನ್ ಕೃತ್ಯ ಎಸಗುವ ಮುನ್ನವೇ ಲೋಹಗಢ್ ಕೋಟೆಗೆ ಇಬ್ಬರೇ ಭೇಟಿ ನೀಡಿ, ಕೊಲೆ ಹೇಗೆ ಮಾಡಬೇಕು ಎಂಬುದರ ತಾಲೀಮು (ರಿಹರ್ಸಲ್) ನಡೆಸಿದ್ದರು. ಅಷ್ಟೇ ಅಲ್ಲದೆ, ಕೃತ್ಯದ ವೇಳೆ ಯಾರಿಗೂ ಸಂಶಯ ಬಾರದಂತೆ ತಡೆಯಲು ವೇಷ ಮರೆಸಿಕೊಳ್ಳುವ ಯೋಜನೆಯನ್ನೂ ಹಾಕಿಕೊಂಡಿದ್ದರು. ಒಂದು ವೇಳೆ ತಾವು ರೂಪಿಸಿದ್ದ ಮೊದಲ ಎರಡು ಯೋಜನೆಗಳು ವಿಫಲವಾದರೆ ಬಳಸಲು ‘ಪ್ಲಾನ್ ಸಿ’ ಎಂಬ ಮತ್ತೊಂದು ಪರ್ಯಾಯ ಯೋಜನೆಯನ್ನೂ ಈ ಜೋಡಿ ಸಿದ್ಧವಾಗಿಟ್ಟಿತ್ತು ಎಂದು ತಿಳಿದುಬಂದಿದೆ. ಡಿಜಿಟಲ್ ಸಾಕ್ಷ್ಯಗಳನ್ನು ನಾಶಪಡಿಸುವ ಉದ್ದೇಶದಿಂದ ಇಬ್ಬರೂ ತಮ್ಮ ಮೊಬೈಲ್‌ನ ಚಾಟ್ ಹಿಸ್ಟರಿ ಮತ್ತು ರಿಸೈಕಲ್ ಬಿನ್‌ಗಳನ್ನು ಸಂಪೂರ್ಣವಾಗಿ ಅಳಿಸಿಹಾಕಿದ್ದು, ಪ್ರಸ್ತುತ ಡಿಲೀಟ್ ಆಗಿರುವ ಡೇಟಾವನ್ನು ಮರುಪಡೆಯಲು ಮೊಬೈಲ್‌ಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಹಿಸಲಾಗಿದೆ.
ಮೊದಲ ಯತ್ನ ವಿಫಲವಾದಾಗ ಹಾವಿನ ನಾಟಕ!
ಕಳೆದ ಫೆಬ್ರವರಿಯಲ್ಲಿ ಕೇತನ್ ಮತ್ತು ಸಿಯಾ ಅವರ ನಿಶ್ಚಿತಾರ್ಥ ಅದ್ಧೂರಿಯಾಗಿ ನಡೆದಿತ್ತು. ನವೆಂಬರ್‌ನಲ್ಲಿ ಜೈಪುರದ ಅರಮನೆಯೊಂದರಲ್ಲಿ ಸುಮಾರು 17 ಕೋಟಿ ರೂಪಾಯಿ ವೆಚ್ಚದಲ್ಲಿ ಇವರ ವಿವಾಹ ನಿಶ್ಚಯವಾಗಿತ್ತು. ಅತಿಥಿಗಳನ್ನು ಕರೆತರಲು ಎರಡು ಖಾಸಗಿ ವಿಮಾನಗಳನ್ನೂ ಬುಕ್ ಮಾಡಲಾಗಿತ್ತು. ಆದರೆ, ಈ ವಿವಾಹ ಇಷ್ಟವಿಲ್ಲದ ಸಿಯಾ, ಜೂನ್ 14ರಂದೇ ಕೇತನ್‌ನನ್ನು ಕೋಟೆಗೆ ಕರೆದೊಯ್ದು ಕಣಿವೆಗೆ ತಳ್ಳಲು ಮೊದಲ ಪ್ರಯತ್ನ ನಡೆಸಿದ್ದಳು. ಆದರೆ ಆ ವೇಳೆ ಕೇತನ್ ಪ್ರಪಾತದ ಬದಿಯಲ್ಲಿದ್ದ ಪೊದೆಯನ್ನು ಗಟ್ಟಿಯಾಗಿ ಹಿಡಿದು ಪ್ರಾಣಾಪಾಯದಿಂದ ಪಾರಾಗಿದ್ದ. ಆಗ ತನ್ನ ಕೃತ್ಯವನ್ನು ಮುಚ್ಚಿಹಾಕಲು ಸಿಯಾ, ಅಲ್ಲಿ ಹಾವು ಇದೆ ಎಂದು ಜೋರಾಗಿ ಕೂಗಾಡಿ, ನಾಟಕೀಯವಾಗಿ ಕೇತನ್‌ನನ್ನು ಅಪ್ಪಿಕೊಂಡು ಎಲ್ಲರ ಗಮನ ಬೇರೆಡೆ ಸೆಳೆದು ತಾನು ಬಚಾವಾಗಿದ್ದಳು.
ಎರಡನೇ ಯತ್ನದಲ್ಲಿ ಕೊಂದೇ ಬಿಟ್ಟರು
ಮೊದಲ ಪ್ರಯತ್ನ ವಿಫಲವಾದ ಕೆಲವೇ ದಿನಗಳಲ್ಲಿ, ಸಿಯಾ ಮತ್ತೆ ಕೇತನ್‌ನನ್ನು ನಂಬಿಸಿ ಲೋಹಗಢ್ ಕೋಟೆಗೆ ಕರೆತಂದಿದ್ದಾಳೆ. ಆದರೆ ಈ ಬಾರಿ ತನ್ನ ಪ್ರಿಯಕರ ಚೇತನ್‌ನನ್ನೂ ಅಲ್ಲಿಗೆ ಕರೆಯಿಸಿಕೊಂಡಿದ್ದಾಳೆ. ಕೋಟೆಯ ತುದಿಯಲ್ಲಿ ಇಬ್ಬರೂ ಸೇರಿ ಕೇತನ್‌ನನ್ನು ಹಿಂದಿನಿಂದ ಪ್ರಪಾತಕ್ಕೆ ತಳ್ಳಿ ಕೊಲೆ ಮಾಡಿದ್ದಾರೆ. ಸದ್ಯ ತನಿಖೆಯನ್ನು ಚುರುಕುಗೊಳಿಸಿರುವ ಪುಣೆ ಗ್ರಾಮಾಂತರ ಪೊಲೀಸರು, ಭಾನುವಾರ ಇಬ್ಬರೂ ಆರೋಪಿಗಳನ್ನು ಕೃತ್ಯ ನಡೆದ ಸ್ಥಳಕ್ಕೆ ಕರೆದೊಯ್ದು ಕ್ರೈಮ್ ಸೀನ್ ಮರುಸೃಷ್ಟಿ ಮಾಡಿದ್ದಾರೆ.
ಇದನ್ನೂ ಓದಿ : ಲೋಹಗಢ್ ಕೋಟೆಯಲ್ಲಿ ಕೊಲೆ ಕೃತ್ಯದ ಮರುಸೃಷ್ಟಿ : ಸಿಯಾ, ಚೇತನ್‌ನನ್ನು ಸ್ಥಳಕ್ಕೆ ಕರೆದೊಯ್ದ ಪೊಲೀಸರು!



















