ತೂತ್ತುಕುಡಿ : ತಮಿಳುನಾಡಿನ ದೇವಸ್ಥಾನಕ್ಕೆಂದು ತೆರಳಿದ್ದ ನವವಿವಾಹಿತೆಯೊಬ್ಬಳು ಮಂಗಗಳ ಹಿಂಡನ್ನು ಕಂಡು ಗಾಬರಿಗೊಂಡು ಬೆಟ್ಟದ ಮೇಲಿಂದ ಪ್ರಪಾತಕ್ಕೆ ಬಿದ್ದು ದಾರುಣವಾಗಿ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ತೂತ್ತುಕುಡಿ ಜಿಲ್ಲೆಯಲ್ಲಿ ನಡೆದಿದೆ. ದೇವಸ್ಥಾನದ ಆವರಣದಲ್ಲಿ ಮಂಗಗಳಿಗೆ ಹಣ್ಣು ನೀಡುತ್ತಿದ್ದಾಗ ಈ ದುರಂತ ಸಂಭವಿಸಿದ್ದು, ಕಣ್ಣೆದುರಲ್ಲೇ ಪತ್ನಿಯನ್ನು ಕಳೆದುಕೊಂಡ ಪತಿಯ ಆಕ್ರಂದನ ಮುಗಿಲುಮುಟ್ಟಿತ್ತು.
ದೇವಸ್ಥಾನಕ್ಕೆ ಭೇಟಿ ನೀಡಿದ್ದ ನವದಂಪತಿ
ಮೃತ ಮಹಿಳೆಯನ್ನು ತೂತ್ತುಕುಡಿಯ ದಕ್ಷಿಣ ತಿಟ್ಟಂಕುಲಂ ನಿವಾಸಿ 24 ವರ್ಷದ ಅನಿತಾ ಎಂದು ಗುರುತಿಸಲಾಗಿದೆ. ಅನಿತಾ ಅವರಿಗೆ ಕೇವಲ ಒಂದು ತಿಂಗಳ ಹಿಂದೆಯಷ್ಟೇ 29 ವರ್ಷದ ಸುರೇಶ್ ಅವರೊಂದಿಗೆ ವಿವಾಹವಾಗಿತ್ತು. ವಿದೇಶದಲ್ಲಿ ಉದ್ಯೋಗದಲ್ಲಿರುವ ಸುರೇಶ್ ಅವರು ಇತ್ತೀಚೆಗಷ್ಟೇ ತಾಯ್ನಾಡಿಗೆ ಮರಳಿದ್ದರು. ಮದುವೆಯ ನಂತರ ದೇವರ ದರ್ಶನ ಪಡೆಯುವ ಉದ್ದೇಶದಿಂದ ಈ ನವದಂಪತಿ ಕಳುಗುಮಲೈನಲ್ಲಿರುವ ಕಲುಗಾಸಲಮೂರ್ತಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಮುಖ್ಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ, ಇಬ್ಬರೂ ಬೆಟ್ಟದ ಮೇಲಿರುವ ಉಚ್ಚಿಪಿಳ್ಳಯ್ಯಾರ್ ಸನ್ನಿಧಿಗೆ ತೆರಳಿದ್ದರು.
ಮಂಗಗಳಿಗೆ ಹಣ್ಣು ನೀಡುವಾಗ ದುರಂತ
ಬೆಟ್ಟದ ಮೇಲೆ ದಂಪತಿಯು ಕೋತಿಗಳಿಗೆ ಹಣ್ಣುಗಳನ್ನು ನೀಡುತ್ತಿದ್ದರು. ಈ ವೇಳೆ ಏಕಾಏಕಿ ಹೆಚ್ಚಿನ ಸಂಖ್ಯೆಯಲ್ಲಿ ಮಂಗಗಳು ಅವರ ಸುತ್ತಲೂ ಜಮಾಯಿಸಿವೆ. ಇದರಿಂದ ತೀವ್ರವಾಗಿ ಗಾಬರಿಗೊಂಡ ಅನಿತಾ, ಆತಂಕದಲ್ಲಿ ಆಯತಪ್ಪಿ ಬೆಟ್ಟದ ಮೇಲಿಂದ ಕೆಳಕ್ಕೆ ಬಿದ್ದಿದ್ದಾರೆ. ಪ್ರಪಾತಕ್ಕೆ ಬಿದ್ದ ರಭಸಕ್ಕೆ ಅವರು ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಈ ಅನಿರೀಕ್ಷಿತ ಘಟನೆಯಿಂದ ದಿಗ್ಭ್ರಮೆಗೊಂಡ ಪತಿ ಸುರೇಶ್, ಪತ್ನಿಯ ಮೃತದೇಹದ ಬಳಿ ಕುಳಿತು ಕಣ್ಣೀರು ಹಾಕುತ್ತಿದ್ದ ದೃಶ್ಯಗಳು ಮನಕಲಕುವಂತಿದ್ದವು.
ಘಟನೆಯ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಮತ್ತು ರಕ್ಷಣಾ ಪಡೆ ಸಿಬ್ಬಂದಿ ಹಾಗೂ ಪೊಲೀಸರು, ಮೃತದೇಹವನ್ನು ಮೇಲಕ್ಕೆತ್ತಿ ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಮಂಗಗಳ ಗುಂಪನ್ನು ಕಂಡು ಹೆದರಿದ ಪರಿಣಾಮವೇ ಈ ದುರಂತ ಸಂಭವಿಸಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ದುರ್ಘಟನೆಯ ಹಿಂದಿನ ನಿಖರ ಕಾರಣಗಳ ಕುರಿತು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ : ನಿರ್ಮಾಪಕ ಭಾ.ಮಾ ಹರೀಶ್ ಪುತ್ರ ಉಲ್ಲಾಸ್ ಗೌಡ ನಿಧನ.. ಟ್ರೆಕ್ಕಿಂಗ್‌ಗೆ ಹೋಗಿದ್ದಾಗಲೇ ಹೃದಯಾಘಾತ!



















