ಬೈಂದೂರು : ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಹತ್ವಾಕಾಂಕ್ಷೆಯ ಸಿದ್ದಾಪುರ ಏತ ನೀರಾವರಿ ಯೋಜನೆಯ ಕಾಮಗಾರಿಯನ್ನು ತಕ್ಷಣ ಪುನರಾರಂಭಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ ವೈ ರಾಘವೇಂದ್ರ ಸಿಎಂ ಡಿಕೆಗೆ ಮನವಿ ಮಾಡಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಹಾಗೂ ಸಂಬಂಧಿತ ಅಧಿಕಾರಿಗಳಿಗೆ ಮನವಿ ಸಲ್ಲಿಸಿರುವ ಅವರು, ಸಿದ್ದಾಪುರ ಏತ ನೀರಾವರಿ ಯೋಜನೆ ಎಲ್ಲಾ ತಾಂತ್ರಿಕ ಹಾಗೂ ತಜ್ಞರ ಸಮಿತಿಗಳ ಅನುಮೋದನೆ ಪಡೆದು ಆರಂಭಗೊಂಡಿದ್ದು, ಯೋಜನೆ ಪೂರ್ಣಗೊಂಡಲ್ಲಿ 7 ರಿಂದ 8 ಗ್ರಾಮಗಳ ಸುಮಾರು 1,200 ಹೆಕ್ಟೇರ್ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ದೊರೆಯಲಿದೆ ಎಂದು ತಿಳಿಸಿದ್ದಾರೆ.
ರೈತ ಸಮುದಾಯದ ಬಹುಕಾಲದ ಬೇಡಿಕೆಯಾಗಿರುವ ಈ ಯೋಜನೆಯ ಕಾಮಗಾರಿ ಈಗಾಗಲೇ ಶೇ.56ರಷ್ಟು ಪೂರ್ಣಗೊಂಡಿದ್ದು, ಕೆಲವು ತಪ್ಪು ಮಾಹಿತಿಗಳ ಆಧಾರದ ಮೇಲೆ ಯೋಜನೆಗೆ ತಡೆ ಉಂಟಾಗಿ ಕಳೆದ 6 ರಿಂದ 7 ತಿಂಗಳಿನಿಂದ ಕಾಮಗಾರಿ ಸಂಪೂರ್ಣ ಸ್ಥಗಿತಗೊಂಡಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದ್ದಾರೆ.
ವಾರಾಹಿ ನದಿಯಲ್ಲಿ ಸುಮಾರು 3,000 ಕ್ಯೂಸೆಕ್ಸ್ ನೀರಿನ ಹರಿವು ಲಭ್ಯವಿದ್ದು, ಯೋಜನೆಗೆ ಅಗತ್ಯವಿರುವುದು ಕೇವಲ 66 ಕ್ಯೂಸೆಕ್ಸ್ ನೀರಷ್ಟೇ ಆಗಿದೆ. ಹೀಗಾಗಿ ಯೋಜನೆ ಜಾರಿಯಾದರೆ ಇತರೆ ಯಾವುದೇ ನೀರಾವರಿ ಅಥವಾ ಜಲವಿದ್ಯುತ್ ಯೋಜನೆಗಳಿಗೆ ತೊಂದರೆಯಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಸಾವಿರಾರು ರೈತ ಕುಟುಂಬಗಳ ಹಿತದೃಷ್ಟಿಯಿಂದ ಹಾಗೂ ಕೃಷಿ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಸಿದ್ದಾಪುರ ಏತ ನೀರಾವರಿ ಯೋಜನೆಯನ್ನು ಮೂಲ ಅನುಮೋದಿತ ವಿನ್ಯಾಸದಂತೆ ಮುಂದುವರಿಸಲು ಸಂಬಂಧಿತ ಅಧಿಕಾರಿಗಳಿಗೆ ತಕ್ಷಣ ನಿರ್ದೇಶನ ನೀಡುವಂತೆ ಸಂಸದ ರಾಘವೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.



















