ಬೆಂಗಳೂರು : ಬೆಂಗಳೂರು DCRE ಪಶ್ಚಿಮ ವಿಭಾಗದ DySP ಮಹೇಶ್ವರ್ ಗೌಡ ಹಾಗೂ ಕಾನ್ಸ್‌ಟೇಬಲ್ ಬಸವರಾಜು ವಿರುದ್ಧ ಲಂಚಕ್ಕೆ ಬೇಡಿಕೆಯಿಟ್ಟ ಆರೋಪದ ಹಿನ್ನೆಲೆ ಲೋಕಾಯುಕ್ತ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಇತ್ತೀಚೆಗೆ DCREನಿಂದ ಸಿಐಡಿಗೆ ವರ್ಗಾವಣೆಗೊಂಡಿದ್ದ ಮಹೇಶ್ವರ್ ಗೌಡ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿದ್ದು, ಪ್ರಕರಣ ಈಗ ಲೋಕಾಯುಕ್ತ ತನಿಖೆಗೆ ಒಳಪಟ್ಟಿದೆ.
ಸುಕನ್ಯಾ ಎಂಬ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಈ ಪ್ರಕರಣ ದಾಖಲಾಗಿದ್ದು, ಅಟ್ರಾಸಿಟಿ ಪ್ರಕರಣವನ್ನು ‘ಬಿ ರಿಪೋರ್ಟ್’ ಹಾಕಲು ಲಂಚಕ್ಕೆ ಬೇಡಿಕೆಯಿಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.
ಮಾಹಿತಿಯ ಪ್ರಕಾರ, ಆರ್‌ಆರ್ ನಗರದಲ್ಲಿ ನಡೆದ ಜಗಳದ ಹಿನ್ನೆಲೆಯಲ್ಲಿ ಸುಕನ್ಯಾ ಸೇರಿದಂತೆ 19 ಮಂದಿಯ ವಿರುದ್ಧ ಅಟ್ರಾಸಿಟಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣವನ್ನು ಮುಕ್ತಾಯಗೊಳಿಸಲು ಲಂಚ ಕೇಳಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಕಾನ್ಸ್‌ಟೇಬಲ್ ಬಸವರಾಜು ಪ್ರತಿ ವ್ಯಕ್ತಿಗೆ 35 ಸಾವಿರ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದರೆ, ನಂತರ ಸುಕನ್ಯಾ ಅವರನ್ನು DySP ಮಹೇಶ್ವರ್ ಗೌಡ ಬಳಿ ಕರೆದೊಯ್ದಿದ್ದಾರೆ ಎನ್ನಲಾಗಿದೆ. ಅಲ್ಲಿ DySP ಕೂಡ “ಬೇಲ್‌ಗೆ ಎಷ್ಟು ಖರ್ಚು ಆಗಿದೆಯೋ ಅಷ್ಟೇ ಹಣ ನೀಡಬೇಕು” ಎಂದು ಹೇಳಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ
ಈ ಸಂಬಂಧ ಸುಕನ್ಯಾ ಅವರು ರಾಜ್ಯ ಪೊಲೀಸ್ ಮಹಾನಿರ್ದೇಶಕರು, ನಗರ ಪೊಲೀಸ್ ಆಯುಕ್ತರು ಹಾಗೂ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ದೂರು ಆಧರಿಸಿ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಆದರೆ DySP ವಿರುದ್ಧದ ಟ್ರ್ಯಾಪ್ ಕಾರ್ಯಾಚರಣೆ ವಿಫಲವಾಗಿದೆ ಎಂದು ತಿಳಿದುಬಂದಿದೆ.
ಲಂಚದ ಆರೋಪಕ್ಕೆ ಸಂಬಂಧಿಸಿದ ಆಡಿಯೋ ದಾಖಲೆಗಳ ಆಧಾರದಲ್ಲಿ ತನಿಖೆ ಮುಂದುವರಿದಿದ್ದು, ಇತ್ತ ಆರೋಪಿಗಳ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ದೂರುದಾರೆ ಸುಕನ್ಯಾ ಒತ್ತಾಯಿಸಿದ್ದಾರೆ.
ಇದನ್ನೂ ಓದಿ : 5 ವರ್ಷದ ಮಗುವಿನ ಮೇಲೆ ಬೀದಿ ನಾಯಿಗಳು ದಾಳಿ ; ಕುತ್ತಿಗೆ, ಕೈಗೆ ಗಂಭೀರ ಗಾಯ!



















