ತುಮಕೂರು : ಜಿಲ್ಲೆಯ ಚಿಕ್ಕನಾಯಕನಹಳ್ಳಿ ಪಟ್ಟಣದ ಜೋಗಿಹಳ್ಳಿ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ 5 ವರ್ಷದ ಮಗುವಿನ ಮೇಲೆ ಬೀದಿ ನಾಯಿಗಳ ಗುಂಪು ದಾಳಿ ನಡೆಸಿದ ಘಟನೆ ನಡೆದಿದೆ.
ಜೋಗಿಹಳ್ಳಿ ಆಂಜನೇಯ ಸ್ವಾಮಿ ದೇವಾಲಯದ ಸಮೀಪ ಮಗುವು ಇದ್ದ ವೇಳೆ, ಏಕಾಏಕಿ 7ರಿಂದ 8 ಬೀದಿ ನಾಯಿಗಳ ಗುಂಪು ಮಗುವಿನ ಮೇಲೆ ದಾಳಿ ಮಾಡಿದೆ. ನಾಯಿಗಳ ದಾಳಿಯಿಂದ ಮಗು ತೀವ್ರವಾಗಿ ಗಾಯಗೊಂಡಿದೆ.
ನಾಯಿಗಳು ಮಗುವಿನ ಕುತ್ತಿಗೆ ಹಾಗೂ ಕೈ ಭಾಗಕ್ಕೆ ಕಚ್ಚಿ ಗಂಭೀರ ಗಾಯಗೊಳಿಸಿದೆ. ಈ ವೇಳೆ ವಾಕಿಂಗ್ ಮಾಡುತ್ತಿದ್ದ ಸ್ಥಳೀಯರು ಸಮಯಪ್ರಜ್ಞೆ ಮೆರೆದು ತಕ್ಷಣ ಮಧ್ಯಪ್ರವೇಶಿಸಿದ ಪರಿಣಾಮ ಮಗುವನ್ನು ನಾಯಿಗಳಿಂದ ರಕ್ಷಿಸಿದ್ದಾರೆ.
ಗಾಯಗೊಂಡ ಮಗುವನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಮಗುವಿನ ಆರೋಗ್ಯದ ಬಗ್ಗೆ ವೈದ್ಯರು ನಿಗಾ ವಹಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಬೀದಿ ನಾಯಿಗಳ ಸಮಸ್ಯೆ ಕುರಿತು ಹಲವು ಬಾರಿ ದೂರು ನೀಡಿದ್ದರೂ ಪುರಸಭೆ ಅಧಿಕಾರಿಗಳು ಯಾವುದೇ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ : ಮೊಬೈಲ್ ಕೊಡದಿದ್ದಕ್ಕೆ ವ್ಯಕ್ತಿಗೆ ಚಾಕು ಇರಿದು ಕೊಲೆ – ಮಹಿಳೆಗೆ 7 ವರ್ಷ ಜೈಲು ಶಿಕ್ಷೆ!


















