ಅಹಮದಾಬಾದ್ : ಇಲ್ಲಿ ನಡೆದ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ) ವಾರ್ಷಿಕ ಸಭೆಯಲ್ಲಿ ಟೆಸ್ಟ್ ಕ್ರಿಕೆಟ್‌ನ ಸ್ವರೂಪ ಹಾಗೂ ನಿಯಮಗಳಲ್ಲಿ ಮಹತ್ತರ ಬದಲಾವಣೆಗಳನ್ನು ತರಲು ತೀರ್ಮಾನಿಸಲಾಗಿದೆ. ಪಂದ್ಯದ ವೇಳೆ ಬೆಳಕಿನ ಕೊರತೆಯಿಂದಾಗಿ (ಬ್ಯಾಡ್ ಲೈಟ್) ಆಟಕ್ಕೆ ಪದೇಪದೇ ಅಡ್ಡಿಯಾಗುವುದನ್ನು ತಪ್ಪಿಸಲು ಮತ್ತು ನಿಗದಿತ ಓವರ್‌ಗಳನ್ನು ಪೂರ್ಣಗೊಳಿಸುವ ಉದ್ದೇಶದಿಂದ, ಸಾಂಪ್ರದಾಯಿಕ ಕೆಂಪು ಚೆಂಡಿನ ಬದಲಿಗೆ ಗುಲಾಬಿ ಬಣ್ಣದ ಚೆಂಡನ್ನು (ಪಿಂಕ್ ಬಾಲ್) ಬಳಸಲು ಐಸಿಸಿ ಮಂಡಳಿ ಇದೀಗ ಅಧಿಕೃತವಾಗಿ ಪ್ರಾಯೋಗಿಕ ಅನುಮೋದನೆ ನೀಡಿದೆ. ಈ ಮೂಲಕ ಟೆಸ್ಟ್ ಕ್ರಿಕೆಟ್ ಮತ್ತೊಂದು ಮಹತ್ವದ ಬದಲಾವಣೆಗೆ ಸಾಕ್ಷಿಯಾಗಲು ಸಜ್ಜಾಗಿದೆ.
ಏನಿದು ಹೊಸ ನಿಯಮ?
ಟೆಸ್ಟ್ ಪಂದ್ಯಗಳ ವೇಳೆ ಬೆಳಕಿನ ಅಭಾವ ಎದುರಾದಾಗ ದಿನದಾಟದ ಓವರ್‌ಗಳು ಕಡಿತಗೊಳ್ಳುವುದು ದಶಕಗಳಿಂದಲೂ ಕಾಡುತ್ತಿರುವ ಸಾಮಾನ್ಯ ಸಮಸ್ಯೆಯಾಗಿದೆ. ಇದನ್ನು ಬಗೆಹರಿಸಲು ಐಸಿಸಿ ಈ ಹೊಸ ನಿಯಮವನ್ನು ಪರಿಚಯಿಸಿದೆ. ನಿಯಮದ ಪ್ರಕಾರ, ಪಂದ್ಯವು ಎಂದಿನಂತೆ ಸಾಂಪ್ರದಾಯಿಕ ಕೆಂಪು ಚೆಂಡಿನಿಂದಲೇ ಆರಂಭವಾಗುತ್ತದೆ. ಆದರೆ, ಪಂದ್ಯದ ಮಧ್ಯದಲ್ಲಿ ಬೆಳಕಿನ ಕೊರತೆ ಎದುರಾದರೆ ಕ್ರೀಡಾಂಗಣದ ಫ್ಲಡ್‌ಲೈಟ್‌ಗಳನ್ನು ಆನ್ ಮಾಡಿ ಉಳಿದ ಓವರ್‌ಗಳನ್ನು ‘ಪಿಂಕ್ ಬಾಲ್’ ಬಳಸಿ ಪೂರ್ಣಗೊಳಿಸಬಹುದು. ಉದಾಹರಣೆಗೆ, ಒಂದು ದಿನಕ್ಕೆ ೯೦ ಓವರ್‌ಗಳನ್ನು ನಿಗದಿಪಡಿಸಲಾಗಿದ್ದು, 75 ಓವರ್‌ಗಳ ಮುಕ್ತಾಯದ ಬಳಿಕ ಬೆಳಕಿನ ಅಭಾವ ಕಂಡುಬಂದರೆ, ಉಳಿದ ೧೫ ಓವರ್‌ಗಳನ್ನು ಗುಲಾಬಿ ಚೆಂಡಿನಲ್ಲಿ ಆಡಬಹುದಾಗಿದೆ. ಆದರೆ, ಈ ಪ್ರಾಯೋಗಿಕ ನಿಯಮ ಜಾರಿಗೆ ಬರಬೇಕಾದರೆ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನವೇ ಎರಡೂ ತಂಡಗಳು ಈ ಷರತ್ತಿಗೆ ಸಮ್ಮತಿ ಸೂಚಿಸುವುದು ಕಡ್ಡಾಯವಾಗಿದೆ.
ತರಬೇತುದಾರರಿಗೆ ಮೈದಾನ ಪ್ರವೇಶಿಸಲು ಮುಕ್ತ ಅವಕಾಶ
ಟಿ20 ಕ್ರಿಕೆಟ್‌ನಲ್ಲಿರುವ ‘ಸ್ಟ್ರಾಟೆಜಿಕ್ ಟೈಮ್‌ಔಟ್’ ಮಾದರಿಯಲ್ಲಿಯೇ ಟೆಸ್ಟ್ ಕ್ರಿಕೆಟ್‌ನಲ್ಲೂ ಹೊಸ ಬದಲಾವಣೆಯೊಂದನ್ನು ತರಲಾಗಿದೆ. ಪಂದ್ಯದ ವೇಳೆ ನೀಡಲಾಗುವ ಡ್ರಿಂಕ್ಸ್ ಬ್ರೇಕ್ (ಪಾನೀಯ ವಿರಾಮ) ಸಮಯದಲ್ಲಿ ತಂಡದ ಮುಖ್ಯ ತರಬೇತುದಾರರು ಅಥವಾ ಅವರು ನೇಮಿಸಿದ ಪ್ರತಿನಿಧಿಗಳು ಮೈದಾನಕ್ಕೆ ಪ್ರವೇಶಿಸಲು ಐಸಿಸಿ ಅವಕಾಶ ಕಲ್ಪಿಸಿದೆ. ಇದರಿಂದ ಪಂದ್ಯದ ಮಧ್ಯದಲ್ಲಿಯೇ ಕೋಚ್‌ಗಳು ಆಟಗಾರರೊಂದಿಗೆ ಚರ್ಚಿಸಲು, ರಣತಂತ್ರಗಳನ್ನು ರೂಪಿಸಲು ಹಾಗೂ ಅಗತ್ಯ ಸಲಹೆ ಸೂಚನೆಗಳನ್ನು ನೀಡಲು ಸಾಧ್ಯವಾಗುತ್ತದೆ.
ಅಂಪೈರ್‌ಗಳಿಗೆ ‘ಹಾಕ್-ಐ’ ತಂತ್ರಜ್ಞಾನದ ಬಲ
ಬೌಲರ್‌ಗಳ ಶಂಕಿತ ಬೌಲಿಂಗ್ ಶೈಲಿಯ (ಚಕಿಂಗ್) ಕುರಿತು ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ಮತ್ತಷ್ಟು ಕಟ್ಟುನಿಟ್ಟು ಹಾಗೂ ಪಾರದರ್ಶಕಗೊಳಿಸಲು ಐಸಿಸಿ ಮುಂದಾಗಿದೆ. ಇನ್ನು ಮುಂದೆ ಮ್ಯಾಚ್ ಅಫಿಷಿಯಲ್ಸ್ (ಪಂದ್ಯದ ಅಧಿಕಾರಿಗಳು) ಶಂಕಿತ ಬೌಲಿಂಗ್ ಆಕ್ಷನ್ ಬಗ್ಗೆ ಪರಿಶೀಲಿಸುವಾಗ ‘ಹಾಕ್-ಐ’ (Hawk-Eye) ತಂತ್ರಜ್ಞಾನದ ಡೇಟಾವನ್ನು ಬಳಸಲು ಐಸಿಸಿ ಮಂಡಳಿ ಅನುಮೋದನೆ ನೀಡಿದೆ. ಇದರೊಂದಿಗೆ, ಇದುವರೆಗೆ ಪ್ರಾಯೋಗಿಕ ಹಂತದಲ್ಲಿದ್ದ ‘ಲೆಗ್-ಸೈಡ್ ವೈಡ್’ಗಳ ನಿಯಮವನ್ನು ಕೂಡ ಕ್ರಿಕೆಟ್‌ನಲ್ಲಿ ಶಾಶ್ವತವಾಗಿ ಜಾರಿಗೊಳಿಸಲು ಸಮ್ಮತಿಸಲಾಗಿದೆ.
ಮಹಿಳಾ ಟೂರ್ನಿಗಳ ವೇಳಾಪಟ್ಟಿಯಲ್ಲಿ ಮಹತ್ವದ ಬದಲಾವಣೆ
ನಿಯಮಗಳ ಬದಲಾವಣೆಯ ಜೊತೆಗೆ ಮಹಿಳಾ ಕ್ರಿಕೆಟ್ ಟೂರ್ನಿಗಳ ವೇಳಾಪಟ್ಟಿಯಲ್ಲೂ ಐಸಿಸಿ ಕೆಲವು ಮಾರ್ಪಾಡುಗಳನ್ನು ಮಾಡಿದೆ. ಜೂನ್-ಜುಲೈ 2027ರಲ್ಲಿ ನಡೆಯಬೇಕಿದ್ದ ‘ಐಸಿಸಿ ಮಹಿಳಾ ಚಾಂಪಿಯನ್ಸ್ ಟ್ರೋಫಿ’ಯನ್ನು ಮುಂದೂಡಲಾಗಿದ್ದು, ಇದು ಫೆಬ್ರವರಿ 14 ರಿಂದ 28ರವರೆಗೆ ನಡೆಯಲಿದೆ. ಅಲ್ಲದೆ, 2026ರ ‘ಮಹಿಳಾ ಎಮರ್ಜಿಂಗ್ ನೇಷನ್ಸ್ ಟ್ರೋಫಿ’ಯನ್ನು 10 ತಂಡಗಳ ಪೈಲಟ್ ಈವೆಂಟ್ ಆಗಿ ನಡೆಸಲು ಅನುಮೋದನೆ ನೀಡಲಾಗಿದೆ. ಈ ಟೂರ್ನಿಯಲ್ಲಿ ಐಸಿಸಿ ರ್ಯಾಂಕಿಂಗ್ ಹಾಗೂ ಹಿಂದಿನ ಟಿ೨೦ ವಿಶ್ವಕಪ್ ಅರ್ಹತೆಯ ಆಧಾರದ ಮೇಲೆ ಐದು ಪೂರ್ಣ ಸದಸ್ಯ ರಾಷ್ಟ್ರಗಳು ಹಾಗೂ ಐದು ಅಸೋಸಿಯೇಟ್ ಸದಸ್ಯ ರಾಷ್ಟ್ರಗಳು ಭಾಗವಹಿಸಲಿವೆ.
ಕ್ರಿಕೆಟ್ ಕೆನಡಾ ಅಮಾನತು ಹಾಗೂ ಹೊಸ ನಿಯಮಗಳ ಜಾರಿ ದಿನಾಂಕ
ಸದಸ್ಯತ್ವದ ನಿಯಮಗಳು ಮತ್ತು ಕಟ್ಟುಪಾಡುಗಳನ್ನು ಗಂಭೀರವಾಗಿ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ‘ಕ್ರಿಕೆಟ್ ಕೆನಡಾ’ ಮಂಡಳಿಯನ್ನು ಐಸಿಸಿ ಅಮಾನತುಗೊಳಿಸಿದೆ. ಇದರ ಜೊತೆಗೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಮುಂಬರುವ ಚುನಾವಣೆಗಳ ಉಸ್ತುವಾರಿ ವಹಿಸಲು ತನ್ನ ಹಿರಿಯ ಅಧಿಕಾರಿಗಳನ್ನು ನೇಮಿಸಿದೆ. ಅಹಮದಾಬಾದ್‌ನಲ್ಲಿ ನಡೆದ ಈ ಮಹತ್ವದ ಸಭೆಯಲ್ಲಿ ಕೈಗೊಳ್ಳಲಾದ ಈ ಎಲ್ಲಾ ಹೊಸ ನಿಯಮಗಳು ಮುಂಬರುವ ಅಕ್ಟೋಬರ್ 1, 2026ರಿಂದ ಅಧಿಕೃತವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಜಾರಿಗೆ ಬರಲಿವೆ ಎಂದು ಐಸಿಸಿ ತನ್ನ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.
ಇದನ್ನೂ ಓದಿ : IPL ಟ್ರೋಫಿಗಿಂತ ಡ್ರೆಸ್ಸಿಂಗ್ ರೂಮ್ ಸಂಸ್ಕೃತಿಯೇ ದೊಡ್ಡದು : ಕೊಹ್ಲಿಯನ್ನು ಕೊಂಡಾಡಿದ ಆಂಡಿ ಫ್ಲವರ್!


















