ಬೆಂಗಳೂರು : ಕರ್ನಾಟಕ ಬಿಜೆಪಿಯ ನೂತನ ರಾಜ್ಯಾಧ್ಯಕ್ಷರ ನೇಮಕ ಕುರಿತ ಚರ್ಚೆ ಮತ್ತೆ ತೀವ್ರಗೊಂಡಿದ್ದು, ದೆಹಲಿಯ ರಾಜಕೀಯ ವಲಯದಲ್ಲಿ ಹಲವು ಹೆಸರುಗಳು ಸದ್ದು ಮಾಡುತ್ತಿವೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರ ರಾಜ್ಯ ಭೇಟಿ ಬಳಿಕ ರಾಜ್ಯ ಘಟಕದ ನಾಯಕತ್ವ ಬದಲಾವಣೆ ಕುರಿತು ಚರ್ಚೆಗಳು ವೇಗ ಪಡೆದಿವೆ. ನಾಲ್ಕು ರಾಜ್ಯಗಳಿಗೆ ಈಗಾಗಲೇ ಬಿಜೆಪಿ ಅಧ್ಯಕ್ಷರ ನೇಮಕ ಘೋಷಣೆಯಾಗಿದ್ದರೂ, ಕರ್ನಾಟಕದ ಘೋಷಣೆ ಮಾತ್ರ ಇನ್ನೂ ಬಾಕಿ ಉಳಿದಿರುವುದು ಕುತೂಹಲ ಹೆಚ್ಚಿಸಿದೆ.
ಬಿಜೆಪಿ ಹೈಕಮಾಂಡ್ ಜೂನ್ 15ರಿಂದ 18ರ ನಡುವೆ ಕೇಂದ್ರ ಸಚಿವ ಸಂಪುಟದಲ್ಲಿ ಮಹತ್ವದ ಬದಲಾವಣೆಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ ಎಂಬ ಮಾಹಿತಿ ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ. ಈ ವೇಳೆ ಸುಮಾರು 10ರಿಂದ 12 ಕೇಂದ್ರ ಸಚಿವರಿಗೆ ಗೇಟ್‌ಪಾಸ್ ನೀಡುವ ಜೊತೆಗೆ ಕೆಲವು ಸಚಿವರ ಖಾತೆಗಳನ್ನು ಬದಲಾಯಿಸುವ ಚಿಂತನೆಯೂ ನಡೆಯುತ್ತಿದೆ ಎನ್ನಲಾಗಿದೆ. ಈ ಸಂಪುಟ ಪುನರ್‌ರಚನೆಯ ಬಳಿಕ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರ ಘೋಷಣೆ ಹೊರಬೀಳುವ ಸಾಧ್ಯತೆ ಇದೆ ಎಂದು ರಾಜಕೀಯ ಮೂಲಗಳಿಂದ ತಿಳಿದುಬಂದಿದೆ.
ಪ್ರಸ್ತುತ ಮೋದಿ ಸಚಿವ ಸಂಪುಟದಲ್ಲಿ ಕರ್ನಾಟಕದಿಂದ ಪ್ರಹ್ಲಾದ ಜೋಶಿ, ಹೆಚ್.ಡಿ.ಕುಮಾರಸ್ವಾಮಿ, ವಿ.ಸೋಮಣ್ಣ ಹಾಗೂ ಶೋಭಾ ಕರಂದ್ಲಾಜೆ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಿಜೆಪಿ ಕೋಟಾದ ಮೂವರು ಕೇಂದ್ರ ಸಚಿವರಲ್ಲಿ ಒಬ್ಬರಿಗೆ ರಾಜ್ಯಾಧ್ಯಕ್ಷ ಹುದ್ದೆ ನೀಡುವ ಸಾಧ್ಯತೆ ಇದೆ ಎಂಬ ಚರ್ಚೆಯೂ ಪಕ್ಷದೊಳಗೆ ನಡೆಯುತ್ತಿದೆ.
ವಿಶೇಷವಾಗಿ ಪ್ರಲ್ಲಾದ ಜೋಶಿ ಹಾಗೂ ವಿ. ಸೋಮಣ್ಣ ಅವರ ಹೆಸರುಗಳು ಮತ್ತೆ ಮುನ್ನೆಲೆಗೆ ಬಂದಿದ್ದು, ಪಕ್ಷ ಸಂಘಟನೆ, ಚುನಾವಣಾ ಅನುಭವ ಮತ್ತು ಹೈಕಮಾಂಡ್‌ನ ವಿಶ್ವಾಸದ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಅಂತಿಮ ನಿರ್ಧಾರ ಕೈಗೊಳ್ಳಲಾಗಬಹುದು ಎಂದು ಹೇಳಲಾಗುತ್ತಿದೆ.
ಒಟ್ಟಿನಲ್ಲಿ ರಾಜ್ಯ ಬಿಜೆಪಿ ನಾಯಕತ್ವದ ಬದಲಾವಣೆ ಕುರಿತು ಕಾರ್ಯಕರ್ತರು ಹಾಗೂ ನಾಯಕರು ಕಾತರದಿಂದ ಕಾಯುತ್ತಿದ್ದು, ಕರ್ನಾಟಕ ಬಿಜೆಪಿ ಹೊಸ ಬಾಸ್ ಯಾರು ಎಂಬ ಪ್ರಶ್ನೆಗೆ ಶೀಘ್ರದಲ್ಲೇ ಉತ್ತರ ಸಿಗುವ ನಿರೀಕ್ಷೆಯಿದೆ.
ಇದನ್ನೂ ಓದಿ : ಬಿಜೆಪಿಗೆ ಸಹಾಯ ಮಾಡಲು ಜಮೀರ್ ಹೀಗೆ ಮಾಡಿದ್ದಾರೆ ; ಎಸ್.ಎಸ್ ಮಲ್ಲಿಕಾರ್ಜುನ್ ಆಕ್ರೋಶ!



















