ಪಾಲನ್‌ಪುರ (ಗುಜರಾತ್) : ಪತಿಯೊಬ್ಬ “ತನಗೆ ಆಕೆ ಇಷ್ಟವಿಲ್ಲ” ಎಂಬ ಏಕೈಕ ಕಾರಣಕ್ಕಾಗಿ ಹೆಂಡತಿಯನ್ನೇ 50 ಸಾವಿರ ರೂಪಾಯಿಗಳಿಗೆ ಮಾರಾಟ ಮಾಡಿರುವ ಅತ್ಯಂತ ಪೈಶಾಚಿಕ ಘಟನೆ ಗುಜರಾತ್‌ನ ಬನಸ್ಕಾಂತ ಜಿಲ್ಲೆಯ ಪಾಲನ್‌ಪುರದಲ್ಲಿ ಬೆಳಕಿಗೆ ಬಂದಿದೆ. ಈ ಮಾನವ ಕಳ್ಳಸಾಗಣೆ ಜಾಲದ ಪಿತೂರಿಯಿಂದಾಗಿ ಸಂತ್ರಸ್ತ ಮಹಿಳೆಯು ಸಾಮೂಹಿಕ ಅತ್ಯಾಚಾರ ಹಾಗೂ ದರೋಡೆಗೆ ಒಳಗಾಗಿದ್ದು, ಇಡೀ ಪ್ರಕರಣ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ಜಾಲವನ್ನು ಭೇದಿಸಿರುವ ಪಾಲನ್‌ಪುರ ಪಶ್ಚಿಮ ಪೊಲೀಸರು ಸಂತ್ರಸ್ತೆಯನ್ನು ರಕ್ಷಿಸಿ, ಪತಿ ಸೇರಿದಂತೆ ಒಟ್ಟು ಏಳು ಮಂದಿ ಆರೋಪಿಗಳನ್ನು ಜೈಲಿಗಟ್ಟಿದ್ದಾರೆ.
ಮೇ 19ರಂದು ಗಣೇಶ್‌ಪುರದ ನಿವಾಸಿ ನಿಕೇಶ್ ಪಟೇಲ್ ಎಂಬಾತ ಪಾಲನ್‌ಪುರ ಪೊಲೀಸ್ ಠಾಣೆಗೆ ಬಂದು, ತನ್ನ ಪತ್ನಿ ನಿಗೂಢವಾಗಿ ನಾಪತ್ತೆಯಾಗಿದ್ದಾಳೆ ಎಂದು ಸುಳ್ಳು ದೂರು ದಾಖಲಿಸಿದ್ದ. ಪೊಲೀಸರಿಗೆ ತನ್ನ ಮೇಲೆ ಯಾವುದೇ ಅನುಮಾನ ಬಾರದಿರಲಿ ಮತ್ತು ತನಿಖೆ ದಿಕ್ಕು ತಪ್ಪಲಿ ಎಂಬ ಉದ್ದೇಶದಿಂದ ಆತ ತಾನು ಬಹಳಷ್ಟು ನೊಂದಿರುವಂತೆ ನಾಟಕ ಮಾಡಿದ್ದ. ಆದರೆ, ಉಪ ಪೊಲೀಸ್ ವರಿಷ್ಠಾಧಿಕಾರಿ ಡಾ. ಜಿಗ್ನೇಶ್ ಗಮಿತ್ ಅವರ ನೇತೃತ್ವದಲ್ಲಿ ತನಿಖೆ ಆರಂಭಿಸಿದ ಪೊಲೀಸರಿಗೆ ಪತಿಯ ಹೇಳಿಕೆಗಳಲ್ಲಿ ತೀವ್ರ ವಿರೋಧಾಭಾಸಗಳು ಕಂಡುಬಂದವು. ಕೊನೆಗೆ ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಆತ ತಾನೇ ಮಾಡಿದ ಭೀಕರ ಅಪರಾಧವನ್ನು ಒಪ್ಪಿಕೊಂಡಿದ್ದಾನೆ.
ಗೆಳೆಯರೊಂದಿಗೆ ಸೇರಿ ಪತ್ನಿಯನ್ನೇ ಮಾರಿದ!
ನನಗೆ ಪತ್ನಿ ಇಷ್ಟವಿರಲಿಲ್ಲ. ಈ ಕಾರಣಕ್ಕಾಗಿ ಆಕೆಯಿಂದ ಮುಕ್ತಿ ಪಡೆಯಲು ನನ್ನ ಸ್ನೇಹಿತರಾದ ಸಂಜಯ್ ಠಾಕೂರ್, ಅಶೋಕ್ ಠಾಕೂರ್ ಮತ್ತು ಸಚಿನ್ ದರ್ಬಾರ್ ಎಂಬವರ ಜೊತೆ ಸೇರಿ ಕ್ರಿಮಿನಲ್ ಪಿತೂರಿ ನಡೆಸಿದೆ. ಪ್ರವಾಸಕ್ಕೆ ಹೋಗೋಣ ಎಂದು ಪತ್ನಿಯನ್ನು ನಂಬಿಸಿ ಮನೆಯಿಂದ ಕರೆದೊಯ್ದು, ನಿರ್ಜನ ಪ್ರದೇಶವೊಂದರಲ್ಲಿ 50,000 ರೂ.ಗೆ ಬೇರಾರಿಗೋ ಮಾರಾಟ ಮಾಡಿದೆ ಎಂದು ವಿಚಾರಣೆ ವೇಳೆ ನಿಕೇಶ್ ಬಾಯಿಬಿಟ್ಟಿದ್ದಾನೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು, ಮಹಿಳೆಯನ್ನು ಅಡಗಿಸಿಟ್ಟಿದ್ದ ರಹಸ್ಯ ತಾಣದ ಮೇಲೆ ದಾಳಿ ನಡೆಸಿ ಆಕೆಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದಿಗ್ಬಂಧನದಲ್ಲಿ ನರಕಯಾತನೆ
ಬಂಧನದಿಂದ ಮುಕ್ತಳಾದ ಮಹಿಳೆ ತನಗೆ ಎದುರಾದ ನರಕಯಾತನೆಯನ್ನು ಪೊಲೀಸರ ಮುಂದೆ ಕಣ್ಣೀರಿಡುತ್ತಾ ವಿವರಿಸಿದ್ದಾಳೆ. ನನಗೇನಾಗುತ್ತಿದೆ ಎಂದು ತಿಳಿಯುವ ಮುನ್ನವೇ ನನ್ನನ್ನು ದಿಗ್ಬಂಧನದಲ್ಲಿ ಇರಿಸಿದ ವ್ಯಕ್ತಿಗಳು ನನ್ನ ಮೇಲೆ ನಿರಂತರವಾಗಿ ಭೀಕರ ಲೈಂಗಿಕ ದೌರ್ಜನ್ಯ ಎಸಗಿದ್ದಲ್ಲದೆ, ಸಾಮೂಹಿಕ ಅತ್ಯಾಚಾರವನ್ನೂ ಮಾಡಿದ್ದಾರೆ ಎಂದು ಆರೋಪಿಸಿದ್ದಾಳೆ. ಅಷ್ಟೇ ಅಲ್ಲದೆ, ತನ್ನ ಮೈಮೇಲಿದ್ದ ಎಲ್ಲಾ ಚಿನ್ನಾಭರಣಗಳನ್ನು ಬಲವಂತವಾಗಿ ಕಿತ್ತುಕೊಂಡು ಹೋಗಿದ್ದಾರೆ ಎಂದೂ ಹೇಳಿದ್ದಾಳೆ.
ಏಳು ಮಂದಿ ಕಾಮುಕರ ಬಂಧನ
ಸಂತ್ರಸ್ತ ಮಹಿಳೆಯ ಹೇಳಿಕೆ ದಾಖಲಿಸಿಕೊಂಡಿರುವ ಪಾಲನ್‌ಪುರ ಪೊಲೀಸರು, ಮಾನವ ಕಳ್ಳಸಾಗಣೆ, ಸಾಮೂಹಿಕ ಅತ್ಯಾಚಾರ, ದರೋಡೆ ಮತ್ತು ಕ್ರಿಮಿನಲ್ ಪಿತೂರಿ ಸೇರಿದಂತೆ ಕಠಿಣ ಕಾನೂನು ಸೆಕ್ಷನ್‌ಗಳ ಅಡಿಯಲ್ಲಿ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ. ಪತಿ ನಿಕೇಶ್ ಪಟೇಲ್, ಆತನಿಗೆ ನೆರವಾದ ಸಂಜಯ್, ಅಶೋಕ್, ಸಚಿನ್ ಸೇರಿದಂತೆ ಈ ಜಾಲದಲ್ಲಿ ಭಾಗಿಯಾಗಿದ್ದ ಒಟ್ಟು 7 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ : ಬೆಂಗಳೂರು ಏರ್‌ಪೋರ್ಟ್‌ನಲ್ಲಿ ತಪ್ಪಿದ ಭಾರೀ ದುರಂತ.. ಶಾಕಿಂಗ್ ವಿಡಿಯೋ ವೈರಲ್!



















