ಬೆಂಗಳೂರು : ನಗರದ ಬಾಣಸವಾಡಿ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ಮಧ್ಯಾಹ್ನ ಭೀಕರ ದುರಂತ ಸಂಭವಿಸಿದ್ದು, ಕಾಂಪೌಂಡ್ ನಿರ್ಮಾಣ ಮಾಡುವ ವೇಳೆ ಗೋಡೆ ಕುಸಿದು ಯುವ ಕಾರ್ಮಿನೊಬ್ಬ ಸಾವನ್ನಪ್ಪಿದ್ದಾನೆ.
ರಾಯಚೂರು ಮೂಲದ ಭೀರೇಶ್ (17) ಮೃತಪಟ್ಟ ದುರ್ದೈವಿ. ಕಳೆದ ಕೆಲವು ವರ್ಷಗಳಿಂದ ಕಟ್ಟಡ ಕಾಮಗಾರಿಗಳಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ಘಟನೆಯಲ್ಲಿ ಇನ್ನಿಬ್ಬರು ಕಾರ್ಮಿಕರು ಗಾಯಗೊಂಡಿದ್ದು, ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡವರಲ್ಲಿ ದೂಳಪ್ಪ ಎಂಬ ಕಾರ್ಮಿಕನಿಗೂ ಗಂಭೀರ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ವೈದ್ಯರು ಚಿಕಿತ್ಸೆ ಮುಂದುವರೆಸಿದ್ದಾರೆ.
ಸೀನಪ್ಪ ಲೇಔಟ್‌ನ ನಾಲ್ಕನೇ ಕ್ರಾಸ್‌ನಲ್ಲಿ ಹಳೆಯ ಕಟ್ಟಡದ ಕಾಂಪೌಂಡ್ ಗೋಡೆ ನಿರ್ಮಾಣ ಕಾಮಗಾರಿ ನಡೆಯುತ್ತಿತ್ತು. ಈ ವೇಳೆ ಕಟ್ಟಡ ಕಟ್ಟುವಾಗ ಬಳಸಲಾಗುತ್ತಿದ್ದ ಹಾಲೋಬ್ಲಾಕ್ ಏಕಾಏಕಿ ಬಿದ್ದು ಅವಘಡ ಸಂಭವಿಸಿದೆ. ಪರಿಣಾಮವಾಗಿ ಕಾಂಪೌಂಡ್ ಭಾಗ ಕುಸಿದು ಕಾರ್ಮಿಕರು ಅವಶೇಷಗಳಡಿ ಸಿಲುಕಿದ್ದಾರೆ. ಈ ವೇಳೆ ಭೀರೇಶ್ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಅಕ್ರಮ ಅಪಾರ್ಟ್ಮೆಂಟ್ ನಿರ್ಮಾಣ ದುರಂತಕ್ಕೆ ಕಾರಣ?
ಈ ಘಟನೆ ಬೆನ್ನಲ್ಲೇ ಅಕ್ರಮ ಅಪಾರ್ಟ್ಮೆಂಟ್ ನಿರ್ಮಾಣದ ಆರೋಪ ಕೂಡ ಕೇಳಿಬಂದಿದೆ. ಸ್ಥಳೀಯ ಸಾಮಾಜಿಕ ಹೋರಾಟಗಾರ ಜಯರಾಮ್, “ಅಕ್ರಮವಾಗಿ ಅಪಾರ್ಟ್ಮೆಂಟ್ ನಿರ್ಮಾಣ ಮಾಡಿದ್ದಾರೆ. ಈ ಬಗ್ಗೆ ಲೋಕಾಯುಕ್ತ ಹಾಗೂ ಬಿಬಿಎಂಪಿ ಅಧಿಕಾರಿಗಳಿಗೆ ಈಗಾಗಲೇ ದೂರು ನೀಡಿದ್ದೆ” ಎಂದು ತಿಳಿಸಿದ್ದಾರೆ.
ಮಾಜಿ ಉಪಮೇಯರ್ ದಯಾನಂದ ಅವರಿಗೆ ಸೇರಿದ್ದ ಅಪಾರ್ಟ್ಮೆಂಟ್ ಇದಾಗಿದ್ದು, ದಯಾನಂದ ಅವರು ಶಾಸಕ ರಘು ಅವರ ಬಾಮೈದ ಎಂದು ಜಯರಾಮ್ ಆರೋಪಿಸಿದ್ದಾರೆ. “ಒತ್ತುವರಿ ಮಾಡಿಕೊಂಡು ಅಪಾರ್ಟ್ಮೆಂಟ್ ನಿರ್ಮಾಣ ಮಾಡಿದ್ದಾರೆ. ಕಡಿಮೆ ಬೆಲೆಗೆ ಕೊಡ್ತಾರೆ ಅಂತ ಇಲ್ಲಿ ಮನೆ ಖರೀದಿ ಮಾಡಬೇಡಿ” ಎಂದು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.
ಪ್ರೋವಿಡೆಂಟ್ ಅಪಾರ್ಟ್ಮೆಂಟ್ ಮಾಲೀಕರ ವಿರುದ್ಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕಾಶ್ ಬಾಬು ಅಪಾರ್ಟ್ಮೆಂಟ್ ಮಾಲೀಕರಾಗಿದ್ದಾರೆ ಎಂದು ತಿಳಿದುಬಂದಿದೆ. ದುರ್ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ ; ಬೆಳಗಾವಿಯಲ್ಲಿ ಭೀಕರ ಅಪಘಾತ – ಮಗು ಸೇರಿ ಒಂದೇ ಕುಟುಂಬದ ಮೂವರು ದುರ್ಮರಣ!


















