ಬೆಂಗಳೂರು : ನಗರದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಟ್ರಾಫಿಕ್ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಮಹತ್ವದ ಹೆಜ್ಜೆ ಇಟ್ಟಿದೆ. ಹಲವು ವರ್ಷಗಳಿಂದ ಚರ್ಚೆಯಲ್ಲಿದ್ದರೂ ನೆನಗುದಿಗೆ ಬಿದ್ದಿದ್ದ ಪ್ರಮುಖ ಮೇಲ್ಸೇತುವೆ ಯೋಜನೆಗಳಿಗೆ ಇದೀಗ ಮತ್ತೆ ಜೀವ ಬಂದಿದ್ದು, ನಗರದ ವಿವಿಧ ಭಾಗಗಳಲ್ಲಿ ಐದು ಹೊಸ ಫ್ಲೈಓವರ್‌ಗಳ ನಿರ್ಮಾಣಕ್ಕಾಗಿ ಜಿಬಿಎ ಟೆಂಡರ್ ಆಹ್ವಾನಿಸಿದೆ.
ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ ವಾಹನ ದಟ್ಟಣೆ ತೀವ್ರವಾಗುತ್ತಿರುವ ಹಿನ್ನೆಲೆ, ಸಿಗ್ನಲ್ ಫ್ರೀ ಸಂಚಾರಕ್ಕೆ ಒತ್ತು ನೀಡುವ ಉದ್ದೇಶದಿಂದ ಈ ಯೋಜನೆಗಳನ್ನು ರೂಪಿಸಲಾಗಿದೆ. ದೈನಂದಿನ ಸಂಚಾರದಲ್ಲಿ ಹೆಚ್ಚು ಒತ್ತಡ ಕಂಡುಬರುವ ಮಾರ್ಗಗಳನ್ನು ಗುರುತಿಸಿ ಮೇಲ್ಸೇತುವೆ ಕಾಮಗಾರಿಗೆ ಆದ್ಯತೆ ನೀಡಲಾಗಿದೆ.
ಟೆಂಡರ್ ಆಹ್ವಾನಗೊಂಡಿರುವ ಪ್ರಮುಖ ಫ್ಲೈಓವರ್‌ಗಳು:
- ಮಿನರ್ವ ಸರ್ಕಲ್‌ನಿಂದ ಹಡ್ಸನ್ ಸರ್ಕಲ್‌ವರೆಗೆ ಫ್ಲೈಓವರ್.
- ಕೆ.ಆರ್. ಮಾರ್ಕೆಟ್ ಫ್ಲೈಓವರ್‌ಗೆ ಟೌನ್ ಹಾಲ್ ಭಾಗದಿಂದ ಲೂಪ್ ಸಂಪರ್ಕ.
- ಓಲ್ಡ್ ಮದ್ರಾಸ್ ರಸ್ತೆಯಿಂದ ಎಲೆಕ್ಟ್ರಾನಿಕ್ ಸಿಟಿವರೆಗೆ ಸಂಪರ್ಕ ಮೇಲ್ಸೇತುವೆ.
- ಶೋಲೆ ಸರ್ಕಲ್‌ನಿಂದ ಸೈಂಟ್ ಜಾನ್ಸ್ ಆಸ್ಪತ್ರೆಗೆ ಸಂಪರ್ಕಿಸುವ ಫ್ಲೈಓವರ್.
- ಯಲಹಂಕ ಪೊಲೀಸ್ ಸ್ಟೇಷನ್‌ನಿಂದ ಕೋಗಿಲು ಕ್ರಾಸ್‌ವರೆಗೆ ಮೇಲ್ಸೇತುವೆ.
ಈ ಯೋಜನೆಗಳು ಜಾರಿಗೆ ಬಂದರೆ ನಗರದ ಕೇಂದ್ರ ಭಾಗಗಳಲ್ಲಿನ ವಾಹನ ದಟ್ಟಣೆ ಗಮನಾರ್ಹವಾಗಿ ಕಡಿಮೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ವಿಶೇಷವಾಗಿ ಕೆ.ಆರ್.ಮಾರ್ಕೆಟ್, ಟೌನ್ ಹಾಲ್, ಮಿನರ್ವ ಸರ್ಕಲ್, ಎಲೆಕ್ಟ್ರಾನಿಕ್ ಸಿಟಿ ಹಾಗೂ ಯಲಹಂಕ ಭಾಗಗಳಲ್ಲಿ ಸಂಚಾರ ಸುಗಮವಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಹಂತ ಹಂತವಾಗಿ ಕಾಮಗಾರಿ ಆರಂಭವಾಗುವ ಸಾಧ್ಯತೆ ಇದೆ. ನಗರಾಭಿವೃದ್ಧಿ ಮತ್ತು ಟ್ರಾಫಿಕ್ ನಿರ್ವಹಣೆಯಲ್ಲಿ ಇದು ಪ್ರಮುಖ ಯೋಜನೆಗಳಾಗಲಿದ್ದು, ಸಾರ್ವಜನಿಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ : ಬೆಂಗಳೂರಲ್ಲಿ ಕಾಂಪೌಂಡ್ ಕುಸಿದು ಕಾರ್ಮಿಕ ಸಾವು!


















