ನವದೆಹಲಿ : ವಾಹನ ಸವಾರರಿಗೆ ಮತ್ತೆ ಶಾಕ್ ಎದುರಾಗಿದೆ. ಕಳೆದ ಹತ್ತು ದಿನಗಳ ಅವಧಿಯಲ್ಲಿಯೇ ಇಂಧನ ಕಂಪನಿಗಳು ಮೂರನೇ ಬಾರಿಗೆ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಹೆಚ್ಚಳ ಮಾಡಿದ್ದು, ಇಂದು ಪ್ರತಿ ಲೀಟರ್ ಇಂಧನ ಬೆಲೆಯಲ್ಲಿ ಗರಿಷ್ಠ 95 ಪೈಸೆವರೆಗೆ ಏರಿಕೆಯಾಗಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್ಗೆ 87 ಪೈಸೆ ಹೆಚ್ಚಳವಾಗುವುದರೊಂದಿಗೆ 98.64 ರೂಪಾಯಿಯಿಂದ 99.51 ರೂಪಾಯಿಗೆ ತಲುಪಿದೆ. ಅದೇ ರೀತಿ, ಡೀಸೆಲ್ ಬೆಲೆಯು ಲೀಟರ್ಗೆ 91 ಪೈಸೆ ಏರಿಕೆಯಾಗಿದ್ದು, 91.58 ರೂಪಾಯಿಯಿಂದ 92.49 ರೂಪಾಯಿಗೆ ಜಿಗಿದಿದೆ.
ಮೇ 15ರಿಂದ ಇತ್ತೀಚೆಗೆ ತೈಲ ದರ ಪರಿಷ್ಕರಣೆ ಆರಂಭವಾದ ಬಳಿಕ ಇದು ಅತ್ಯಲ್ಪ ದಿನಗಳಲ್ಲಿ ನಡೆದಿರುವ ಮೂರನೇ ಸರಣಿ ಹೆಚ್ಚಳವಾಗಿದೆ. ಪ್ರಸ್ತುತ ಜಾಗತಿಕ ಮಟ್ಟದಲ್ಲಿ ತಲೆದೋರಿರುವ ಮಧ್ಯಪ್ರಾಚ್ಯ ಸಂಘರ್ಷದಿಂದಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂಧನ ಬೆಲೆಗಳು ತೀವ್ರವಾಗಿ ಏರುತ್ತಿವೆ. ಇದರ ಪರಿಣಾಮವಾಗಿ ಉಂಟಾಗಿರುವ ತೈಲ ಬೆಲೆ ಏರಿಕೆಯ ಹೊರೆಯನ್ನು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಹಂತಹಂತವಾಗಿ ಗ್ರಾಹಕರಿಗೆ ವರ್ಗಾಯಿಸಲು ಆರಂಭಿಸಿವೆ.
ಇದಕ್ಕೂ ಮುನ್ನ, ಮೇ 15ರಂದು ಮೊದಲ ಬಾರಿಗೆ ಲೀಟರ್ಗೆ ಒಮ್ಮೆಗೆ 3 ರೂಪಾಯಿ ಹಾಗೂ ಮೇ 19ರಂದು ಎರಡನೇ ಬಾರಿಗೆ 90 ಪೈಸೆ ಹೆಚ್ಚಿಸಲಾಗಿತ್ತು. ಪ್ರಸ್ತುತ ಶನಿವಾರದ ಏರಿಕೆಯನ್ನೂ ಒಳಗೊಂಡಂತೆ ಒಟ್ಟಾರೆಯಾಗಿ ಕಳೆದ 10 ದಿನಗಳಲ್ಲಿ ಇಂಧನ ದರಗಳು ಪ್ರತಿ ಲೀಟರ್ಗೆ ಸುಮಾರು 5 ರೂಪಾಯಿಯಷ್ಟು ದುಬಾರಿಯಾದಂತಾಗಿದೆ.
ಪೆಟ್ರೋಲ್, ಡಿಸೇಲ್ ಏರಿಕೆ ಪರ್ವ..!
ಪೆಟ್ರೋಲ್
ಮೇ 15 ರಂದು 3.27 ರೂ ಏರಿಕೆ
ಮೇ 20. ರಂದು 95 ಪೈಸೆ ಏರಿಕೆ
ಮೇ 23. ರಂದು 95 ಪೈಸೆ ಏರಿಕೆ
ಡಿಸೇಲ್
ಮೇ 15 ರಂದು 3.11 ರೂ ಏರಿಕೆ
ಮೇ 20 ರಂದು 94 ಪೈಸೆ ಏರಿಕೆ
ಮೇ 23 ರಂದು 95 ಪೈಸೆ ಏರಿಕೆ
ಇದನ್ನೂ ಓದಿ : ಗೆಳೆಯನ ಮನೆಯಲ್ಲೇ ರಾಬರಿ ಮಾಡಿಸಿ ಸಿಕ್ಕಿಬಿದ್ದ ಮೇಸ್ತ್ರಿ!



















