ಬೆಂಗಳೂರು : ಬೆಂಗಳೂರು ಹೊರವಲಯದ ಚಿಕ್ಕಜಾಲದ ಹುಣಸಮಾರನಹಳ್ಳಿಯಲ್ಲಿ ನಡೆದ ದರೋಡೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಸ್ನೇಹಿತನ ಮನೆಯಲ್ಲಿ ರಾಬರಿ ಮಾಡಿಸಿದ್ದ ಮೇಸ್ತ್ರಿಯನ್ನು ಬಂಧಿಸಿದ್ದಾರೆ.
ಸುದರ್ಶನ್ ಹಾಗೂ ಮೇಸ್ತ್ರಿ ಗುರುಪ್ರಸಾದ್ ಆತ್ಮೀಯ ಗೆಳೆಯರಾಗಿದ್ದು, ಸುದರ್ಶನ್ ಮತ್ತು ಆತನ ತಂದೆ ಕೃಷ್ಣಚಾರಿ ಮನೆ ನಿರ್ಮಾಣ ಕಾರ್ಯವನ್ನು ಗುರುಪ್ರಸಾದ್‌ಗೆ ಕಾಂಟ್ರಾಕ್ಟ್ ರೂಪದಲ್ಲಿ ನೀಡಿದ್ದರು. ಸ್ನೇಹಿತ ಎನ್ನುವ ಕಾರಣಕ್ಕೆ ಕಡಿಮೆ ಹಣಕ್ಕೆ ಕೆಲಸ ಒಪ್ಪಿಕೊಂಡು ಮನೆ ಕಟ್ಟಿಸುತ್ತಿದ್ದ ಗುರುಪ್ರಸಾದ್‌ಗೆ ಪ್ರತಿದಿನವೂ ಮನೆ ಬಳಿ ತಂದೆ-ಮಗ ಕಿರಿಕ್ ಮಾಡುತ್ತಿದ್ದರು ಎನ್ನಲಾಗಿದೆ. “ಇದು ಸರಿ ಇಲ್ಲ, ಅದನ್ನ ಸರಿಯಾಗಿ ಕಟ್ಟಿಲ್ಲ” ಎಂದು ನಿರಂತರವಾಗಿ ತೊಂದರೆ ನೀಡುತ್ತಿದ್ದರೆ, ಪೂರ್ತಿ ಹಣ ಕೊಡೋದಿಲ್ಲ ಎಂದು ಸಹ ಒತ್ತಡ ಹಾಕುತ್ತಿದ್ದರು ಎನ್ನಲಾಗಿದೆ. ಈ ಬೆಳವಣಿಗೆಗಳಿಂದ ಗುರುಪ್ರಸಾದ್ ಮಾನಸಿಕವಾಗಿ ನೊಂದಿದ್ದ.
ಈ ಹಿನ್ನೆಲೆ ತನ್ನ ಬಳಿ ಕೆಲಸ ಮಾಡುತ್ತಿದ್ದ ಇಬ್ಬರಿಗೆ ಗುರುಪ್ರಸಾದ್ ರಾಬರಿ ಟ್ರೈನಿಂಗ್ ನೀಡಿದ್ದಾನೆ ಎನ್ನಲಾಗಿದೆ. ರಾಬರಿ ನಡೆಸಲು ಅರ್ಬಾಜ್ ಮತ್ತು ಜಿಬ್ರಾನ್ ಎಂಬವರನ್ನು ರೆಡಿ ಮಾಡಿದ್ದ ಗುರುಪ್ರಸಾದ್, ಕೃಷ್ಣಾಚಾರಿ ಮನೆಯ ಮಾಹಿತಿ ಸಂಪೂರ್ಣವಾಗಿ ಅವರಿಗೆ ನೀಡಿದ್ದಾನೆ ಎಂದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಏಪ್ರಿಲ್ 18ರಂದು ಅರ್ಬಾಜ್ ಮತ್ತು ಜಿಬ್ರಾನ್ ಕೃಷ್ಣಾಚಾರಿ ಮನೆಗೆ ನುಗ್ಗಿ ಚಾಕು ತೋರಿಸಿ ದರೋಡೆ ನಡೆಸಿದ್ದಾರೆ. ಮನೆಯಲ್ಲಿದ್ದ 79 ಗ್ರಾಂ ಚಿನ್ನ, 64 ಗ್ರಾಂ ಬೆಳ್ಳಿ ಹಾಗೂ 12 ಲಕ್ಷ ರೂಪಾಯಿ ನಗದು ದೋಚಿಕೊಂಡು ಆರೋಪಿಗಳು ಪರಾರಿಯಾಗಿದ್ದರು. ಘಟನೆ ಬಳಿಕ ಎರಡು ತಿಂಗಳು ಆರೋಪಿಗಳು ತಲೆಮರೆಸಿಕೊಂಡಿದ್ದರು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಚಿಕ್ಕಜಾಲ ಪೊಲೀಸರು ಆರೋಪಿಗಳ ಪತ್ತೆಗೆ ವಿಶೇಷ ಶೋಧ ಕಾರ್ಯಾಚರಣೆ ನಡೆಸಿದ್ದರು. ಕೊನೆಗೆ ಗುರುಪ್ರಸಾದ್, ಅರ್ಬಾಜ್ ಮತ್ತು ಜಿಬ್ರಾನ್ ಅವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತರಿಂದ 12 ಲಕ್ಷ ರೂಪಾಯಿ ನಗದು, 24 ಲಕ್ಷ ಮೌಲ್ಯದ ಚಿನ್ನಾಭರಣ ಸೇರಿದಂತೆ ಒಟ್ಟು ಲಕ್ಷಾಂತರ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ ಒಂದು ದ್ವಿಚಕ್ರ ವಾಹನ, ಒಂದು ಕಾರು ಹಾಗೂ ಎರಡು ಮೊಬೈಲ್ ಫೋನ್‌ಗಳನ್ನು ಸಹ ಪೊಲೀಸರು ಸೀಜ್ ಮಾಡಿದ್ದಾರೆ. ಈ ಸಂಬಂಧ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಇದನ್ನೂ ಓದಿ : ಸಕಲೇಶಪುರದಲ್ಲಿ ಕಾರು-ಆಟೋ ಮಧ್ಯೆ ಭೀಕರ ಅಪಘಾತ.. ನಾಲ್ವರಿಗೆ ಗಂಭೀರ ಗಾಯ!


















