ಬೆಂಗಳುರು : ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ವರನಟ ಡಾ. ರಾಜ್‌ಕುಮಾರ್ ಅವರ ಪುಣ್ಯಭೂಮಿಯನ್ನು ಸರ್ಕಾರದ ವತಿಯಿಂದ ಅಭಿವೃದ್ಧಿಪಡಿಸಬೇಕೆಂದು ಬಿಜೆಪಿ ಮುಖಂಡ ಎನ್.ಆರ್ ರಮೇಶ್ ಆಗ್ರಹಿಸಿದ್ದಾರೆ. ಈ ಕುರಿತು ಇಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿರುವ ಅವರು, ಅಭಿಮಾನಿಗಳು ಹಾಗೂ ಪ್ರವಾಸಿಗರ ಅನುಕೂಲಕ್ಕಾಗಿ ತಕ್ಷಣ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕೆಂದು ಒತ್ತಾಯಿಸಿದ್ದಾರೆ.
ಕಂಠೀರವ ಸ್ಟುಡಿಯೋದಲ್ಲಿರುವ ಕರ್ನಾಟಕ ರತ್ನ ಡಾ. ರಾಜ್‌ಕುಮಾರ್, ಪಾರ್ವತಮ್ಮ ರಾಜ್‌ಕುಮಾರ್ ಹಾಗೂ ಪುನೀತ್ ರಾಜ್‌ಕುಮಾರ್ ಅವರ ಸ್ಮಾರಕಗಳನ್ನು ವೀಕ್ಷಿಸಲು ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸುತ್ತಿದ್ದಾರೆ. ಕರ್ನಾಟಕದ ವಿವಿಧ ಜಿಲ್ಲೆಗಳಷ್ಟೇ ಅಲ್ಲದೆ ದೇಶ-ವಿದೇಶಗಳಿಂದಲೂ ಪ್ರವಾಸಿಗರು ಬಂದು ನಮನ ಸಲ್ಲಿಸುತ್ತಿದ್ದಾರೆ. ಪ್ರತಿ ಶನಿವಾರ ಹಾಗೂ ಭಾನುವಾರ ಸಾವಿರಾರು ಸಂಖ್ಯೆಯಲ್ಲಿ ಅಣ್ಣಾವ್ರ ಅಭಿಮಾನಿಗಳು ಪುಣ್ಯಭೂಮಿಗೆ ಭೇಟಿ ನೀಡುತ್ತಾರೆ.

ಕುಟುಂಬ ಸಮೇತರಾಗಿ ಆಗಮಿಸುವ ಜನರು ಗಂಟೆಗಟ್ಟಲೆ ಸಾಲಿನಲ್ಲಿ ನಿಂತು ಸ್ಮಾರಕ ವೀಕ್ಷಣೆ ಮಾಡಬೇಕಾಗುತ್ತದೆ. ಆದರೆ, ಸ್ಥಳದಲ್ಲಿ ಸಮರ್ಪಕ ನೆರಳು ಅಥವಾ ಮೇಲ್ಚಾವಣಿ ವ್ಯವಸ್ಥೆ ಇಲ್ಲದಿರುವುದು ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಪುಣ್ಯಭೂಮಿಯಲ್ಲಿ ಯಾವುದೇ ರೀತಿಯ ಮೇಲ್ಛಾವಣಿ ಅಥವಾ ಶೆಡ್ ವ್ಯವಸ್ಥೆ ಇಲ್ಲದ ಕಾರಣ ಬಿಸಿಲಿನಲ್ಲೂ, ಮಳೆಯಲ್ಲೂ ಅಭಿಮಾನಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಜನಸಂದಣಿ ಹೆಚ್ಚಿರುವ ದಿನಗಳಲ್ಲಿ ಹಿರಿಯ ನಾಗರಿಕರು, ಮಹಿಳೆಯರು ಹಾಗೂ ಮಕ್ಕಳಿಗೆ ಹೆಚ್ಚು ಸಂಕಷ್ಟ ಉಂಟಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಹೀಗಾಗಿ, ಕರ್ನಾಟಕ ರತ್ನ ಡಾ. ರಾಜ್‌ಕುಮಾರ್, ಪಾರ್ವತಮ್ಮ ರಾಜ್‌ಕುಮಾರ್ ಹಾಗೂ ಪುನೀತ್ ರಾಜ್‌ಕುಮಾರ್ ಅವರ ಪುಣ್ಯಭೂಮಿಯಲ್ಲಿ ಇನ್ನೂ ಹೆಚ್ಚಿನ ಮೂಲಭೂತ ಸೌಕರ್ಯಗಳ ಅಗತ್ಯವಿದೆ ಎಂದು ಎನ್.ಆರ್. ರಮೇಶ್ ಮನವಿ ಮಾಡಿದ್ದು, ವಿಶೇಷವಾಗಿ ಹೈಟೆಕ್ ಶೌಚಾಲಯಗಳು, ಕುಡಿಯುವ ನೀರಿನ ವ್ಯವಸ್ಥೆ, ವಿಶ್ರಾಂತಿ ಸ್ಥಳ ಹಾಗೂ ಅಭಿಮಾನಿಗಳಿಗೆ ಅನುಕೂಲವಾಗುವ ಮೂಲಸೌಕರ್ಯಗಳನ್ನು ಸರ್ಕಾರ ಕಲ್ಪಿಸಬೇಕು ಎಂದು ನಾಡಿನ ಸಮಸ್ತ ಕನ್ನಡಿಗರ ಪರವಾಗಿ ಎನ್.ಆರ್. ರಮೇಶ್ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ : 15 ವರ್ಷದ ಬಳಿಕ ಕತ್ತರಿ ಕಂಡ ಕೂದಲು – ಬಂಗಾಳದಲ್ಲಿ ದೀದಿ ಸೋಲುತ್ತಿದ್ದಂತೆ ಶಪಥ ಪೂರೈಸಿದ ಬಿಜೆಪಿಗ!



















