ಹೈದರಾಬಾದ್ : 2024ರ ಡಿಸೆಂಬರ್ 4ರಂದು ಹೈದರಾಬಾದ್‌ನ ಸಂಧ್ಯಾ ಥಿಯೇಟರ್‌ನಲ್ಲಿ ನಡೆದಿದ್ದ ಕಾಲ್ತುಳಿತ ಪ್ರಕರಣ ದೇಶದಾದ್ಯಂತ ಭಾರೀ ಸುದ್ದಿಯಾಗಿತ್ತು. Pushpa 2: The Rule ಪ್ರೀಮಿಯರ್ ಶೋ ವೇಳೆ ಉಂಟಾದ ಗೊಂದಲದಲ್ಲಿ ಹಲವರು ಗಾಯಗೊಂಡಿದ್ದು, ಶ್ರೀತೇಜ್ ಎಂಬ ಬಾಲಕ ಗಂಭೀರವಾಗಿ ಗಾಯಗೊಂಡಿದ್ದ. ಇದೀಗ ಆ ಬಾಲಕನ ಮನೆಗೆ ನಟ ಅಲ್ಲು ಅರ್ಜುನ್ ಅವರ ಕುಟುಂಬ ಭೇಟಿ ನೀಡಿ ಆರೋಗ್ಯ ವಿಚಾರಿಸಿದೆ.
ಕಾಲ್ತುಳಿತದಲ್ಲಿ ಗಾಯಗೊಂಡಿದ್ದ ಶ್ರೀತೇಜ್ ಮನೆಗೆ ಅಲ್ಲು ಅರ್ಜುನ್ ಅವರ ತಂದೆ ಹಾಗೂ ಪತ್ನಿ ಸ್ನೇಹ ರೆಡ್ಡಿ ಭೇಟಿ ನೀಡಿದ್ದಾರೆ. ಬಾಲಕನ ಆರೋಗ್ಯದ ಬಗ್ಗೆ ಮಾಹಿತಿ ಪಡೆದ ಅವರು, ಕುಟುಂಬ ಸದಸ್ಯರೊಂದಿಗೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ಬಾಲಕನ ಚಿಕಿತ್ಸೆಗೆ ಬೇಕಾದ ಎಲ್ಲಾ ಸಹಾಯ ನೀಡುವುದಾಗಿ ಭರವಸೆ ನೀಡಿದ್ದಾರೆ.
ಶ್ರೀತೇಜ್ ಮುಂದಿನ ಚಿಕಿತ್ಸೆ ಹಾಗೂ ಶಿಕ್ಷಣದ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಾಗಿ ಅಲ್ಲು ಕುಟುಂಬ ತಿಳಿಸಿದೆ. ಬಾಲಕ ಚೇತರಿಸಿಕೊಂಡು ಉತ್ತಮ ಭವಿಷ್ಯ ಹೊಂದಬೇಕು ಎಂಬ ಉದ್ದೇಶದಿಂದ ಕುಟುಂಬದ ಪರವಾಗಿ ಬೆಂಬಲ ಮುಂದುವರಿಯಲಿದೆ ಎಂದು ಹೇಳಿದ್ದಾರೆ. ಈ ನಡೆಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಶ್ರೀತೇಜ್ ಹೆಸರಲ್ಲಿ 2 ಕೋಟಿ ಠೇವಣಿ
ಈ ಹಿಂದೆ ಅಲ್ಲು ಕುಟುಂಬ ಶ್ರೀತೇಜ್ ಹೆಸರಲ್ಲಿ 2 ಕೋಟಿ ರೂಪಾಯಿ ಠೇವಣಿ ಇಟ್ಟಿತ್ತು. ಆ ಮೊತ್ತದಿಂದ ಪ್ರತೀ ತಿಂಗಳು ಸುಮಾರು 1.5 ಲಕ್ಷ ರೂಪಾಯಿ ಬಡ್ಡಿ ಬರುತ್ತಿದ್ದು, ಅದನ್ನು ಬಾಲಕನ ಚಿಕಿತ್ಸೆ ಮತ್ತು ಭವಿಷ್ಯಕ್ಕಾಗಿ ಬಳಸಿಕೊಳ್ಳಬಹುದಾಗಿದೆ ಎನ್ನಲಾಗಿದೆ. ಈ ಕ್ರಮ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.
ಶ್ರೀತೇಜ್ ತಂಗಿಯ ಶಿಕ್ಷಣಕ್ಕೂ ನೆರವು
ಶ್ರೀತೇಜ್ ಮಾತ್ರವಲ್ಲ, ಅವರ ತಂಗಿಯ ವಿದ್ಯಾಭ್ಯಾಸದ ಜವಾಬ್ದಾರಿಯನ್ನೂ ಅಲ್ಲು ಅರ್ಜುನ್ ಹೊತ್ತಿದ್ದಾರೆ ಎನ್ನಲಾಗಿದೆ. ಮಕ್ಕಳ ಭವಿಷ್ಯಕ್ಕೆ ಯಾವುದೇ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ಶಿಕ್ಷಣ ವೆಚ್ಚವನ್ನು ಭರಿಸುವ ನಿರ್ಧಾರ ತೆಗೆದುಕೊಂಡಿದ್ದಾರೆ. ಅಲ್ಲು ಅರ್ಜುನ್ ಕುಟುಂಬದ ಈ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸಂಕಷ್ಟದಲ್ಲಿರುವ ಕುಟುಂಬದ ಜೊತೆ ನಿಂತಿರುವುದಕ್ಕೆ ಅಭಿಮಾನಿಗಳು ಹಾಗೂ ಸಿನಿಪ್ರಿಯರು ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ : ಹೆಣ್ಣು ಮಗುವಿಗೆ ತಂದೆಯಾದ ಸೂರ್ಯಕುಮಾರ್ ಯಾದವ್ ; RCB ವಿರುದ್ಧದ ಪಂದ್ಯಕ್ಕೆ ಅಲಭ್ಯ ?



















